ಮೆಟಾ (Meta) ಒಡೆತನದ ನಂಬರ್ ಒನ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಇಂದು ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದೆ. ದಿನದಿಂದ ದಿನಕ್ಕೆ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ವಾಟ್ಸ್ಆ್ಯಪ್ (WhatsApp) ಅನ್ನು ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಕ್ಷಣಾರ್ಧದಲ್ಲಿ ಸಂದೇಶಗಳ ಮೂಲಕ ಮಾತುಕತೆ ನಡೆಸಲು ಉಪಯೋಗಿಸುವ ವಾಟ್ಸ್ಆ್ಯಪ್ನಲ್ಲಿ ಸಾಲು ಸಾಲು ಫೀಚರ್ಗಳು ಪರೀಕ್ಷಾ ಹಂತದಲ್ಲಿದೆ. ಸಾಮಾನ್ಯವಾಗಿ ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾಡಬಹುದು ಆದರೆ, ಎಡಿಟ್ ಮಾಡುವಂತಹ ಆಯ್ಕೆ ಇಲ್ಲ. ಇದನ್ನು ಗಮನಿಸಿರುವ ಸಂಸ್ಥೆ ಇದೀಗ ”ಎಡಿಟ್ ಸೆಂಟ್ ಮೆಸೇಜ್” (Edit Sent Message) ಎಂಬ ನೂತನ ಅಪ್ಡೇಟ್ ಪರಿಚಯಿಸಿದೆ.
ಕಳುಹಿಸದ ಮೆಸೇಜ್ ಅನ್ನು ಎಡಿಟ್ (Edit Message) ಮಾಡುವಂತಹ ಆಯ್ಕೆ ವಾಟ್ಸ್ಆ್ಯಪ್ ವೆಬ್ನಲ್ಲಿ ಬೇಟಾ ಟೆಸ್ಟರ್ಸ್ಗೆ ಲಭ್ಯವಾಗುತ್ತಿದೆ. ಈ ಆಯ್ಕೆಯ ಮೂಲಕ ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ. ಆದರೆ, ಇದಕ್ಕೆ 15 ನಿಮಿಷಗಳ ಕಾಲವಕಾಶ ಮಾತ್ರ ಇರುತ್ತದೆ. ಪ್ರಸ್ತುತ, ವಾಟ್ಸ್ಆ್ಯಪ್ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾತ್ರ ಮಾಡಬಹುದು, ಆದರೆ ಎಡಿಟ್ ಮಾಡಲು ಸಾಧ್ಯವಿಲ್ಲ. ಈ ವೈಶಿಷ್ಟ್ಯವನ್ನು ಬಳಸಿ ಮೆಸೇಜ್ ಕಳುಹಿಸಿದ ನಂತರ ಅವುಗಳನ್ನು ಎಡಿಟ್ ಮಾಡಲು ಸಾಧ್ಯವಾಗಿಸುತ್ತದೆ.
Fake App: ಪ್ಲೇ ಸ್ಟೋರ್ನಲ್ಲಿ 11 ಅಪಾಯಕಾರಿ ಆ್ಯಪ್ ಪತ್ತೆ: ಇನ್ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
ಎಲ್ಲಾ ವಾಟ್ಸ್ಆ್ಯಪ್ ಸಂಬಂಧಿತ ಬೆಳವಣಿಗೆಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ Wabetainfo ಈ ವೈಶಿಷ್ಟ್ಯವನ್ನು ಗುರುತಿಸಿದೆ. ಇಲ್ಲಿ ಗಮನಿಸ ಬೇಕಾದ ಸಂಗತಿ ಎಂದರೆ, ವಾಟ್ಸ್ಆ್ಯಪ್ನಲ್ಲಿ ನೀವು ಮೆಸೇಜ್ ಅನ್ನು ಡಿಲೀಟ್ ಮಾಡಿದರೆ ಹೇಗೆ ಚಾಟ್ನಲ್ಲಿ ಮಾಹಿತಿ ನೀಡುತ್ತದೆಯೊ ಅದೇರೀತಿ ಎಡಿಟ್ ಮಾಡಿದರೆ ಕೂಡ ಕಳುಹಿಸಿದವರಿಗೆ ತಿಳಿಯುತ್ತದೆ. ಈ ಎಡಿಟ್ ಬಟನ್ ವೈಶಿಷ್ಟ್ಯದ ಮೇಲೆ ವಾಟ್ಸ್ಆ್ಯಪ್ ಐದು ವರ್ಷಗಳ ಹಿಂದೆಯೇ ಗಮನಹರಿಸಲು ಆರಂಭಿಸಿದ್ದರೂ ಟ್ವಿಟರ್ನಲ್ಲಿ ಈ ಕುರಿತು ವರದಿ ಬಂದ ಬೆನ್ನಿಗೆ ಅದನ್ನು ಕೈಬಿಟ್ಟಿತ್ತು.
ವಾಟ್ಸ್ಆ್ಯಪ್ ಇದೀಗ ಮತ್ತೊಂದ ಹೊಸ ಫೀಚರ್ ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಮಾಡಿದೆ. ಇದರಲ್ಲಿ ಗ್ರೂಪ್ ಅಡ್ಮಿನ್‌ಗೆ ವಿಶೇಷ ಪವರ್ ದೊರೆಯಲಿದೆ. WABetaInfo ಮಾಡಿರುವ ವರದಿಯ ಪ್ರಕಾರ, ಗ್ರೂಪ್ನಲ್ಲಿ ಬಂದ ಮೆಸೇಜ್ ಅನಗತ್ಯ ಅಥವಾ ನಿಯಮಕ್ಕೆ ವಿರುದ್ಧವಾಗಿದ್ದರೆ ಸದಸ್ಯ ಅದನ್ನು ಗ್ರೂಪ್ ಅಡ್ಮಿನ್‌ಗೆ ವರದಿ ಮಾಡಬಹುದು. ಅಷ್ಟೇ ಅಲ್ಲದೆ ಅಡ್ಮಿನ್ ಅನುಮತಿಸಿದರೆ ಆ ಮೆಸೇಜ್ ಅನ್ನು ಯಾವ ಸದಸ್ಯನಿಗೆ ಬೇಕಾದರೂ ಡಿಲೀಟ್ ಮಾಡಬಹುದು. ಸರಳವಾಗಿ ಹೇಳುವುದಾದರೆ, ಒಂದು ಗುಂಪಿನಿಂದ ನೀವು ಇಷ್ಟವಿಲ್ಲದ ಸಂದೇಶವನ್ನು ಸ್ವೀಕರಿಸಿದರೆ, ನೀವು ಆ ಸಂದೇಶದ ಕುರಿತು ಗ್ರೂಪ್ ಅಡ್ಮಿನ್‌ಗೆ ದೂರು ನೀಡಬಹುದು. ವರದಿ ಮಾಡಿದ ನಂತರ, ಗ್ರೂಪ್ ಅಡ್ಮಿನ್ ಆ ಸಂದೇಶವನ್ನ ಪರಿಶೀಲಿಸಿ ಡಿಲೀಟ್ ಮಾಡಬಹುದು ಅಥವಾ ಗ್ರೂಪ್ನಲ್ಲಿರುವ ಇತರೆ ಸದಸ್ಯರಿಗೆ ಡಿಲೀಟ್ ಮಾಡುವಂತಹ ಅವಕಾಶ ನೀಡಬಹುದು. ಈ ಮೂಲಕ ಗ್ರೂಪ್ನಲ್ಲಿ ಉತ್ತಮ ವಾತಾವರಣ ಸೃಷ್ಟಿಸುವುದು ವಾಟ್ಸ್ಆ್ಯಪ್ನ ಮುಖ್ಯ ಉದ್ದೇಶವಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:53 pm, Tue, 9 May 23