ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆ್ಯಪ್ 2022 ರಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ. ಅತಿ ಹೆಚ್ಚು ನೂತನ ಫೀಚರ್ಗಳನ್ನು (New Features) ಈ ವರ್ಷದಲ್ಲಿ ಬಿಡುಗಡೆ ಮಾಡಿದೆ. ಇದಕ್ಕಾಗಿಯೇ ಇಂದು ವಿಶ್ವದಲ್ಲಿ ವಾಟ್ಸ್‌ಆ್ಯಪ್ (WhatsApp) ಬಳಕೆದಾರರ ಸಂಖ್ಯೆ 2 ಬಿಲಿಯನ್ಗೂ ಅಧಿಕವಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಇನ್ನಷ್ಟು ಅನೇಕ ಅಪ್ಡೇಟ್ಗಳು ವಾಟ್ಸ್ಆ್ಯಪ್ನಲ್ಲಿ ಬರಲಿಕ್ಕಿದ್ದು ಪರೀಕ್ಷಾ ಹಂತದಲ್ಲಿದೆ.
ಹೆಚ್ಚಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ನೂತನ ಆಯ್ಕೆಗಳನ್ನು ಪರಿಚಯಿಸುತ್ತಿದ್ದ ವಾಟ್ಸ್‌ಆ್ಯಪ್ ಇದೀಗ ತನ್ನ ವೆಬ್ ಬಳಕೆದಾರರಿಗೆ ಉಪಯುಕ್ತವಾದ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಈ ಕುರಿತು ವಾಟ್ಸ್‌ಆ್ಯಪ್ ಮಾಹಿತಿ ಹಂಚಿಕೊಂಡಿದ್ದು, ಡೆಸ್ಕ್ಟಾಪ್ನಲ್ಲಿ ವಾಟ್ಸ್‌ಆ್ಯಪ್ ಬಳಸುವವರಿಗೆ ಸದ್ಯದಲ್ಲೇ ಸ್ಕ್ರೀನ್ ಲಾಕ್ ಎಂಬ ಹೊಸ ಆಯ್ಕೆ ನೀಡುವುದಾಗಿ ಘೋಷಿಸಿದೆ.
ವಾಟ್ಸ್‌ಆ್ಯಪ್ ಹಿಂದಿನಿಂದಲೂ ಬಳಕೆದಾರರ ಪ್ರೈವಸಿ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತದೆ. ಇದೀಗ ಭದ್ರತೆಯನ್ನು ಮತ್ತಷ್ಟು ಗಟ್ಟಿ ಮಾಡುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ವಾಟ್ಸ್‌ಆ್ಯಪ್ ವೆಬ್ನಲ್ಲಿ ಬರುವ ಸ್ಕ್ರೀನ್ ಲಾಕ್ ಎಂಬ ಹೊಸ ಫೀಚರ್ನಲ್ಲಿ ವಾಟ್ಸ್‌ಆ್ಯಪ್ ಓಪನ್ ಮಾಡಿದ ಪ್ರತಿ ಬಾರಿ ಬಳಕೆದಾರರು ಪಾಸ್‌ವರ್ಡ್ ಹಾಕಬೇಕಾಗುತ್ತದೆ. ಬಳಕೆದಾರರು ತಮ್ಮ ಡೆಸ್ಕ್ಟಾಪ್ನಲ್ಲಿ ವಾಟ್ಸ್‌ಆ್ಯಪ್ ಬಳಸದೇ ಇದ್ದಾಗ ಬೇರೆಯವರು ಅನಧಿಕೃತವಾಗಿ ಬಳಸದಂತೆ ಇದು ರಕ್ಷಣೆ ನೀಡಲಿದೆ ಎಂದು ಕಂಪನಿ ತಿಳಿಸಿದೆ. ಹಾಗಂತ ಇದು ಕಡ್ಡಾಯವಲ್ಲ. ಬಳಕೆದಾರರು ಈ ಸ್ಕ್ರೀನ್ ಲಾಕ್ ಫೀಚರ್ ಅನ್ನು ಬೇಕಾದಾಗ ಮಾತ್ರ ಉಪಯೋಗಿಸಬಹುದು.
ಮಿಸ್ಡ್ ಕಾಲ್ ಅಲರ್ಟ್ ಫೀಚರ್:
ವಾಟ್ಸ್‌ಆ್ಯಪ್ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮಿಸ್ಡ್ ಕಾಲ್ ಅಲರ್ಟ್’ ಎಂಬ ಹೊಸ ಫೀಚರ್ಸ್ ಬಿಡುಗಡೆ ಮಾಡುವ ಕುರಿತು ಮಾಹಿತಿ ಹಂಚಿಕೊಂಡಿದೆ. ಈ ಆಯ್ಕೆಯ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಎಲ್ಲಾದರು ‘ಡೋಂಟ್ ಡಿಸ್ಟರ್ಬ್ ಮೋಡ್’ನಲ್ಲಿ ಇರಿಸಿದ್ದಾಗ ಯಾರಾದರು ನಿಮ್ಮ ವಾಟ್ಸ್ಆ್ಯಪ್ಗೆ ಕರೆ ಮಾಡಿದರೆ ಇದು ಸಹಾಯ ಮಾಡಲಿದೆ. ಅಂದರೆ ನೀವು ಯಾವುದೇ ಕರೆಯನ್ನು ಮಿಸ್ ಮಾಡಿಕೊಂಡಿದ್ದರೆ ಅದರ ಮಾಹಿತಿ ಲಭ್ಯವಾಗಲಿದೆ. ವಾಟ್ಸ್‌ಆ್ಯಪ್ ಇದೀಗ ಈ ಫೀಚರ್ಸ್ ಹೊರತರಲು ಬಹುತೇಕ ಸಿದ್ಧವಾಗಿದೆ. ಹಾಗೆಯೇ ಇತ್ತೀಚಿನ ಬೀಟಾ ಆವೃತ್ತಿ 2.22.24.7 ಯಲ್ಲಿ ಈ ಫೀಚರ್ಸ್ ಲಭ್ಯವಾಗಲಿದೆ. ಜೊತೆಗೆ ಕೆಲವು ಬೀಟಾ ವಾಟ್ಸ್‌ಆ್ಯಪ್ ಬಳಕೆದಾರರಿಗೆ ಈ ಫೀಚರ್ಸ್ ಅನ್ನು ಈಗಾಗಲೇ ಪರಿಚಯಿಸಲಾಗಿದೆ ಎಂದು ತಿಳಿದುಬಂದಿದೆ.
ಕಂಪ್ಯಾನಿಯನ್ ಮೋಡ್ ಆಯ್ಕೆ:
ವಾಟ್ಸ್ಆ್ಯಪ್ನ ಈ ಹೊಸ ಕಂಪ್ಯಾನಿಯನ್ ಮೋಡ್ ಎಂಬ ಫೀಚರ್ಸ್ ಮೂಲಕ ಬಳಕೆದಾರರು ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ಡಿವೈಸ್‌ಗಳಲ್ಲಿ ವಾಟ್ಸ್‌ಆ್ಯಪ್ ಬಳಸಬಹುದು. ಅಂದರೆ ನಿಮ್ಮ ವಾಟ್ಸ್‌ಆ್ಯಪ್ ಆಕೌಂಟ್ ಅನ್ನು ಎರಡು ಮೊಬೈಲ್‌ಗಳಲ್ಲಿ ಬಳಸಬಹುದು. ಇದು ಬಾರ್‌ಕೋಡ್ ಸ್ಕ್ಯಾನ್ ಮೂಲಕ ಕಾರ್ಯನಿರ್ವಹಿಸಲಿದೆ. ಒಂದೇ ಸಮಯದಲ್ಲಿ ನಾಲ್ಕು ಡಿವೈಸ್‌ಗಳಲ್ಲಿ ಅಕೌಂಟ್ ಲಿಂಕ್ ಮಾಡಿದರೆ ಲಿಂಕ್ ಮಾಡಲಾದ ಎಲ್ಲಾ ಫೋನ್‌ಗಳಲ್ಲಿಯೂ ಚಾಟ್‌ಗಳು ಮತ್ತು ಡೇಟಾವನ್ನು ಬಳಕೆದಾರ ಸ್ವೀಕರಿಸುತ್ತಾನೆ. ಕಂಪ್ಯಾನಿಯನ್ ಮೋಡ್ ಅನ್ನು ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ v2.22.23.18 ಬೀಟಾ ಆವೃತ್ತಿಯಲ್ಲಿ ಪರೀಕ್ಷಿಸಲಾಗುತ್ತಿದೆ.
Published On - 2:42 pm, Mon, 21 November 22