ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಅಗತ್ಯಕ್ಕೆ ಅನುಗುಣವಾಗಿ ಅನೇಕ ಫೀಚರ್ಗಳನ್ನು ಬಿಡುಗಡೆ ಮಾಡಿದೆ. ಇದುವೇ ವಾಟ್ಸ್ಆ್ಯಪ್ ಇಷ್ಟು ದೊಡ್ಡ ಮಟ್ಟಕ್ಕೆ ಪ್ರಸಿದ್ಧಿ ಪಡೆಯಲು ಕಾರಣ ಎಂದು ಹೇಳಬಹುದು. ಈ ವರ್ಷವಂತು ವಾಟ್ಸ್ಆ್ಯಪ್ (WhatsApp) ತಿಂಗಳಿಗೆ ಎರಡು ಮೂರು ನೂತನ ಆಯ್ಕೆಗಳನ್ನು ನೀಡುತ್ತಲೇ ಬರುತ್ತಿದೆ. ಮೆಸೇಜ್ ರಿಯಾಕ್ಷನ್, ವೀವ್ ಒನ್ಸ್, (View Once) ಡಾಕ್ಯುಮೆಂಟ್ನಲ್ಲಿ ವಿಡಿಯೋ, ಫೋಟೋ ಶೇರ್ ಮಾಡುವ ಆಯ್ಕೆ, ಸ್ಕ್ರೀನ್ ಶಾಟ್ ತೆಗೆಯಲು ನಿರ್ಬಂಧ, ಮೆಸೇಜ್ ಡಿಲೀಟ್ ಮಾಡಲು ಹೆಚ್ಚಿನ ಸಮಯ ಹೀಗೆ ಅನೇಕ ಅಪ್ಡೇಟ್ಗಳನ್ನು ಪರಿಚಯಿಸಿದೆ. ಅಷ್ಟೇ ಅಲ್ಲದೆ ಕೆಲವೇ ದಿನಗಳಲ್ಲಿ ಇನ್ನೂ ಅನೇಕ ಹೊಸ ಹೊಸ ಆಯ್ಕೆಗಳು ವಾಟ್ಸ್ಆ್ಯಪ್ನಲ್ಲಿ ಬರಲಿಕ್ಕಿದೆ. ಹಾಗಾದರೆ ಮುಂದಿನ ದಿನಗಳಲ್ಲಿ ಬರಲಿರುವ ಪ್ರಮುಖ 5 ಫೀಚರ್ಗಳು ಯಾವುವು ಎಂಬುದನ್ನು ನೋಡೋಣ.
ಎಡಿಟ್ ಮೆಸೇಜ್ ಆಯ್ಕೆ:
ವಾಟ್ಸ್ಆ್ಯಪ್ ತನ್ನ ಮುಂದಿನ ಅಪ್‌ಡೇಟ್‌ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಆಯ್ಕೆ ನೀಡಲಿದೆ. ಈ ಬಗ್ಗೆ ವಾಬೇಟಾಇನ್ಫೊ ವರದಿ ಮಾಡಿದ್ದು, ವಾಟ್ಸ್ಆ್ಯಪ್ ಸದ್ಯದಲ್ಲೇ ಎಡಿಟ್ ಮೆಸೇಜ್ ಆಯ್ಕೆಯನ್ನು ನೀಡಲಿದೆ ಎಂದು ಹೇಳಿದೆ. ಬಳಕೆದಾರರು ಇತರರಿಗೆ ಮೆಸೇಜ್ ಮಾಡುವ ಸಂದರ್ಭ ಅಕ್ಷರ ತಪ್ಪಿ ಸೆಂಡ್ ಮಾಡಿದ್ದರೆ ಪುನಃ ಅದನ್ನು ಸರಿಗೊಳಿಸಲು ಇದು ಸಹಕಾರಿ ಮಾಡಲಿದೆ. ಸದ್ಯಕ್ಕೆ ಈ ಆಯ್ಕೆ ಆಂಡ್ರಾಯ್ಡ್ ಬೇಟಾ ವರ್ಷನ್ನಲ್ಲಿ ಲಭ್ಯವಿದೆ. ಈಗಾಗಲೇ ಇರುವ ಡಿಲೀಟ್ ಫಾರ್ ಎವರಿವನ್ ಆಯ್ಕೆ ಸಂಪೂರ್ಣ ಮೆಸೇಜ್ ಅನ್ನು ಡಿಲೀಟ್ ಮಾಡುತ್ತದೆ. ಆದರೆ, ಈ ಎಡಿಟ್ ಆಯ್ಕೆಯಲ್ಲಿ ಮೆಸೇಜ್ ಅನ್ನು ಡಿಲೀಟ್ ಮಾಡುವ ಬದಲು ಅಕ್ಷರವನ್ನು ಸರಿಪಡಿಸುವುದಾಗಿದೆ.
ಗ್ರೂಪ್ ಸದಸ್ಯರ ಸಂಖ್ಯೆ ಹೆಚ್ಚಳ:
ಗ್ರೂಪ್ ವಿಚಾರಕ್ಕೆ ಸಂಬಂಧಿಸಿದಂತೆ ನೂತನ ಆಯ್ಕೆಯನ್ನು ಬಿಡುಗಡೆ ಮಾಡಲು ವಾಟ್ಸ್ಆ್ಯಪ್ ತಯಾರಿ ನಡೆಸಿದೆ. ವಾಟ್ಸ್ಆ್ಯಪ್ ತನ್ನ ನೂತನ ಅಪ್‌ಡೇಟ್‌ನಲ್ಲಿ ಗ್ರೂಪ್ ಸದಸ್ಯರ ಸಂಖ್ಯೆ ಹೆಚ್ಚಿಸಲಿದೆ ಎಂದು ವರದಿಯಾಗಿದೆ. ಆರಂಭದಲ್ಲಿ ವಾಟ್ಸ್ಆ್ಯಪ್ ಗ್ರೂಪ್‌ಗೆ 256 ಸದಸ್ಯರನ್ನು ಸೇರಿಸಲು ಅವಕಾಶ ಇತ್ತು. ಬಳಿಕ ಆ ಸಂಖ್ಯೆಯನ್ನು 512 ಕ್ಕೆ ಹೆಚ್ಚಿಸಿತ್ತು. ಈಗ ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿದೆ. WaBetaInfo ನ ವರದಿಯ ಪ್ರಕಾರ, ವಾಟ್ಸ್ಆ್ಯಪ್ ಗ್ರೂಪ್ ರಚನೆಯ ಸದಸ್ಯರ ಮಿತಿಯನ್ನು 1024 ಗೆ ಹೆಚ್ಚಿಸಲು ಕೆಲಸ ಮಾಡುತ್ತಿದೆ. ಈ ಆಯ್ಕೆಯು ಪ್ರಸ್ತುತ ಆಯ್ದ ಬೀಟಾ ಬಳಕೆದಾರರಿಗೆ ಸೀಮಿತವಾಗಿದೆ ಎಂದು ಹೇಳಲಾಗಿದೆ. ಆದಷ್ಟು ಬೇಗ ಈ ನೂತನ ಫೀಚರ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ.
ಕಾಪ್ಷನ್ನೊಂದಿಗೆ ಡಾಕ್ಯುಮೆಂಟ್ ಕಳುಹಿಸಿ:
ವಾಟ್ಸ್ಆ್ಯಪ್ನಲ್ಲಿ ಫೋಟೋ, ವಿಡಿಯೋ ಮತ್ತು ಜಿಫ್ ಫೈಲ್ಗಳನ್ನು ಅಡಿ ಬರಹ ನೀಡಿ ಕಳುಹಿಸಬಹುದು. ಆದರೆ, ಡಾಕ್ಯುಮೆಂಟ್ ಕಳುಹಿಸುವಾಗ ಈ ಆಯ್ಕೆ ಕಾಣಿಸುವುದಿಲ್ಲ. ಇದೀಗ ವಾಟ್ಸ್ಆ್ಯಪ್ ತನ್ನ ನೂತನ ಅಪ್‌ಡೇಟ್‌ನಲ್ಲಿ ಡಾಕ್ಯುಮೆಂಟ್ ಕಳುಹಿಸುವಾಗಲೂ ಕಾಪ್ಷನ್ ಆಯ್ಕೆ ನೀಡಲಿದೆ. ಈ ಮೂಲಕ ಕಳುಹಿಸಿದ ಅಥವಾ ರಿಸೀವ್ ಮಾಡಿಕೊಂಡ ಡಾಕ್ಯುಮೆಂಟ್ ಅನ್ನು ಸರ್ಚ್ ಮಾಡುವ ಮೂಲಕ ಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ.
ಸ್ಕ್ರೀನ್ ಶಾಟ್ ನಿರ್ಬಂಧ:
ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಟ್ಸ್ಆ್ಯಪ್ ಈ ವರ್ಷ ವೀವ್ ಒನ್ಸ್ ಎಂಬ ಆಯ್ಕೆಯನ್ನು ಪರಿಚಯಿಸಿತ್ತು. ಇದರಲ್ಲಿ ಫೋಟೋ ಅಥವಾ ವಿಡಿಯೋವನ್ನು ಓಪನ್ ಮಾಡಿ ನೋಡಿದ ತಕ್ಷಣ ಮಾಯವಾಗುವುದು ಮಾತ್ರವಲ್ಲದೆ, ಫೋನ್ ಮೆಮೊರಿಯಲ್ಲಿ ಎಲ್ಲಿಯೂ ಸ್ಟೋರ್ ಕೂಡ ಆಗಿರುವುದಿಲ್ಲ. ಆದರೆ, ಇದನ್ನು ಸ್ಕ್ರೀನ್ ಶಾಟ್ ತೆಗೆಯುವಂತಹ ಆಯ್ಕೆ ಇದೆ. ಇದೊಂದು ಕಾರಣದಿಂದ ಅನೇಕರು ಈ ಆಯ್ಕೆಯಿಂದ ಬೇಸರಗೊಂಡಿದ್ದರು. ಇದೀಗ ವಾಟ್ಸ್ಆ್ಯಪ್ ತನ್ನ ವೀವ್ ಒನ್ಸ್ ಫೀಚರ್ನಲ್ಲಿ ಸ್ಕ್ರೀನ್ ಶಾಟ್ ತೆಗೆಯಲು ನಿರ್ಬಂಧಿಸಲು ಮುಂದಾಗಿದೆ. ಈ ಆಯ್ಕೆಯಲ್ಲಿ ನೂತಹ ಅಪ್ಡೇಟ್ ಸದ್ಯದಲ್ಲೇ ಬರಲಿದೆಯಂತೆ.
ವಾಟ್ಸ್ಆ್ಯಪ್ ಪ್ರೀಮಿಯಂ ಚಂದಾದಾರಿಕೆ:
ವಾಟ್ಸ್ಆ್ಯಪ್ನಲ್ಲಿ ಪಾವತಿ ಮಾಡಿ ಬಳಸಬೇಕಾದ ಪ್ರೀಮಿಯಂ ಸೌಲಭ್ಯ ಸದ್ಯದಲ್ಲೇ ಬರಲಿದೆ. ಪ್ರೀಮಿಯಂ ಸೌಲಭ್ಯಗಳಿರುವ ವಾಟ್ಸ್ಆ್ಯಪ್ ಪ್ರೀಮಿಯಂ ಅಪ್ಲಿಕೇಷನ್ ಟೆಸ್ಟಿಂಗ್ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಈ ಆಯ್ಕೆ ವಾಟ್ಸ್ಆ್ಯಪ್ ಬ್ಯುಸಿನೆಸ್ ಬಳಕೆದಾರರಿಗೆ ಲಭ್ಯವಾಗಲಿದ್ದು, ಗ್ರಾಹಕರೊಂದಿಗೆ ಸಂವಹನ ನಡೆಸಲು ಹೊಸದಾದ ಹಲವು ಪಾವತಿಸಬೇಕಾದ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಹಲವು ಪ್ರೀಮಿಯಂ ವೈಶಿಷ್ಟ್ಯಗಳು ಇದರಲ್ಲಿದ್ದು, ಈ ವೈಶಿಷ್ಟ್ಯಗಳನ್ನು ಬಳಸಿಕೊಳ್ಳಲು ಬಳಕೆದಾರರು ಹಣವನ್ನು ಪಾವತಿಸಬೇಕಾಗುತ್ತದೆ. ಹೀಗೆ ಹಣವನ್ನು ಪಾವತಿಸಿ ಪಡೆಯುವ ವಾಟ್ಸ್ಆ್ಯಪ್ ಬ್ಯುಸಿನೆಸ್ ಅಪ್ಲಿಕೇಷನ್‌ನಲ್ಲಿ ಹಲವು ಸಾಧನಗಳನ್ನು ಲಿಂಕ್ ಮಾಡಬಹುದು. ಬಳಕೆದಾರರು URL ಗಳನ್ನು ಸೌಲಭ್ಯವನ್ನು ಸಹ ಪಡೆಯಬಹುದು.
Published On - 1:04 pm, Mon, 17 October 22