ಮೆಟಾ (Meta) ಮಾಲೀಕತ್ವದ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ದಿನದಿಂದ ದಿನಕ್ಕೆ ವಾಟ್ಸ್ಆ್ಯಪ್ (WhatsApp) ತನ್ನ ಫೀಚರ್ ಅಪ್ಡೇಟ್ ಮಾಡುತ್ತಲೇ ಇದ್ದು ಮತ್ತಷ್ಟು ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಕಳೆದ ವಾರವಷ್ಟೆ ವಾಟ್ಸ್ಆ್ಯಪ್ ಕೆಲವೊಂದು ಹೊಸ ಫೀಚರ್ಗಳನ್ನು ಬಿಡುಗಡೆ ಮಾಡುವುದರ ಬಗ್ಗೆ ಘೋಷಣೆ ಮಾಡಿತ್ತು. ಸಾಲು ಸಾಲು ಅಪ್ಡೇಟ್ಗಳು ವಾಟ್ಸ್ಆ್ಯಪ್ನಲ್ಲಿ ಬರಲು ತಯಾರಿರುವಾಗ ಇದೀಗ ಫೇಸ್ಬುಕ್ನಲ್ಲಿರುವಂತೆಯೆ ಮೆಸೇಜ್ ರಿಯಾಕ್ಷನ್ ಫೀಚರ್ಸ್ ಅನ್ನು ಪರಿಚಯಿಸಲು ಮುಂದಾಗಿದೆ. ಇಂದು ಈ ಫೀಚರ್ ಬಳಕೆದಾರರಿಗೆ ಸಿಗಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಫೇಸ್‌ಬುಕ್‌ನ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್(Mark Zuckerberg) ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಈಗಾಗಲೇ ಇನ್‌ಸ್ಟಾಗ್ರಾಮ್, ಫೇಸ್ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್ನಲ್ಲಿ ಇರುವಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಮೆಸೇಜ್ ರಿಯಾಕ್ಷನ್ ಫೀಚರ್ಸ್‌ಗಳನ್ನು ನೀಡುತ್ತಿವೆ. ಇದೇ ಕಾರಣಕ್ಕೆ ವಾಟ್ಸ್ಆ್ಯಪ್ ಕೂಡ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೆಸೇಜ್ ರಿಯಾಕ್ಷನ್ ಸೇರಿಸಿದೆ. ವಾಟ್ಸ್ಆ್ಯಪ್ನ ಮೆಸೇಜ್ ರಿಯಾಕ್ಷನ್ ಫಿಚರ್ಸ್ ಎಮೋಜಿ ಐಕಾನ್‌ಗಳೊಂದಿಗೆ ಪ್ರತಿಕ್ರಿಯಿಸಲು ನಿಮಗೆ ಅನುಮತಿಸುತ್ತದೆ. ಇದು ಫೇಸ್‌ಬುಕ್‌ನಲ್ಲಿನ ಪೋಸ್ಟ್‌ಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತಿರೋ ಅದೇ ಮಾದರಿಯಲ್ಲಿ ಇರಲಿದೆ. ಅಂದರೆ ಎಮೋಜಿಗಳ ರಿಯಾಕ್ಷನ್ಗಾಗಿ ನೀವು ಸಂದೇಶವನ್ನು ಲಾಂಗ್ ಪ್ರೆಸ್ ಮಾಡಬೇಕಾಗುತ್ತದೆ. ಪಾಪ್ ಅಪ್ ಆಗುವ ಯಾವುದೇ ಎಮೋಜಿಗಳಿಂದ ಆಯ್ಕೆ ಮಾಡಬೇಕಾಗುತ್ತದೆ. ನಿಮ್ಮ ಮೆಚ್ಚಿನದನ್ನು ನೀವು ಆಯ್ಕೆ ಮಾಡಿದ ನಂತರ, ನೀವು ಯಾರ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದೀರೋ ಅವರು ಅದೇ ಪ್ರತಿಕ್ರಿಯೆಗೆ ಅಧಿಸೂಚನೆಯನ್ನು ಪಡೆಯುತ್ತೀರಿ.
ಈ ಹೊಸ ಫೀಚರ್ಸ್ ಆಯ್ಕೆಗೆ ನೀವು ಹೊಸ ಆವೃತ್ತಿಯ ವಾಟ್ಸ್ಆ್ಯಪ್ಗೆ ಅಪ್ಡೇಟ್ ಆಗ ಬೇಕಾಗುತ್ತದೆ. ವಾಟ್ಸ್ಆ್ಯಪ್ ನೀವು ಪ್ರತಿಕ್ರಿಯೆಯನ್ನು ಬೆಂಬಲಿಸದ ಹಳೆಯ ಆವೃತ್ತಿಯನ್ನು ಬಳಸುತ್ತಿರುವ ಎಚ್ಚರಿಕೆಯ ಸಂದೇಶವನ್ನು ಪ್ರದರ್ಶಿಸಲಿದೆ. ಈ ಫೀಚರ್ಸ್ ಮೊದಲು ವಾಟ್ಸ್ಆ್ಯಪ್ನ ಆಂಡ್ರಾಯ್ಡ್ ಆವೃತ್ತಿಯಲ್ಲಿ ಮತ್ತು ನಂತರ ಐಒಎಸ್ ಬಳಕೆದಾರರಿಗೆ ಲಭ್ಯವಿರುತ್ತದೆ ಎನ್ನಲಾಗಿದೆ. ಮೆಸೇಜ್ ರಿಯಾಕ್ಷನ್ ಫೀಚರ್ಸ್‌ನಿಂದಾಗಿ ನಿಮಗೆ ಬಂದ ಸಂದೇಶಗಳಿಗೆ ತ್ವರಿತವಾಗಿ ಎಮೊಜಿಗಳ ಮೂಲಕ ಉತ್ತರಿಸಲು ಸಾಧ್ಯವಾಗಲಿದೆ. ಇದರಿಂದ ನಿಮ್ಮ ಚಾಟ್ ಸಂಬಾಷಣೆ ಇನ್ನಷ್ಟು ಉಲ್ಲಾಸದಾಯಕವಾಗಿರಲಿದೆ ಎಂದು ಹೇಳಲಾಗುತ್ತಿದೆ.
ಇದರ ಜೊತೆಗೆ ಕ್ವಿಕ್ ರಿಯಾಕ್ಷನ್ ಫೀಚರ್ ಕೂಡ ಬರಲಿದೆ ಎಂದು ವಾಟ್ಸ್ಆ್ಯಪ್ ಹೇಳಿದೆ. ಇದು ವಾಟ್ಸ್ಆ್ಯಪ್ ಸ್ಟೇಟಸ್ ಅಪ್ಡೇಟ್ ಅನ್ನು ವೀಕ್ಷಿಸುವಾಗ ಬಳಕೆದಾರರಿಗೆ ಎಮೋಜಿಯನ್ನು ಕಳುಹಿಸಲು ಅನುಮತಿಸುತ್ತದೆ. ಅಂದರೆ ಇನ್ಸ್ಟಾಗ್ರಾಮ್ನಲ್ಲಿ ಇರುವ ರೀತಿಯಲ್ಲೇ ವಾಟ್ಸ್ಆ್ಯಪ್ನಲ್ಲೂ ರಿಯಾಕ್ಷನ್ ಫೀಚರ್ ಕಾಣಿಸಲಿದೆ. ಈ ಕ್ವಿಕ್ ರಿಯಾಕ್ಷನ್ ಆಯ್ಕೆಯು ಎಂಟು ಎಮೋಜಿ ಐಕಾನ್‌ಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಲಾಗಿದೆ. ಇದು ಬಳಕೆದಾರರಿಗೆ ವೈಯಕ್ತಿಕ ಎಮೋಜಿಯನ್ನು ಸಂದೇಶವಾಗಿ ಕಳುಹಿಸದೆಯೇ ಸ್ಟೇಟಸ್ ಅಪ್ಡೇಟ್ ಕಡೆಗೆ ಭಾವನೆಗಳನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Fri, 6 May 22