17 ವರ್ಷದ ಬಾಲಕಿಯೊಬ್ಬಳು 325 ಗ್ರಾಂ ತೂಕದ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಯುನೈಟೆಡ್ ಕಿಂಗ್ಡಮ್ನಲ್ಲಿ ನಡೆದಿದೆ. ಈ ಮಗುವನ್ನು ಕಳೆದ 20 ವರ್ಷದಲ್ಲಿ ಯುಕೆಯಲ್ಲಿ ಜನಿಸಿದ ಅತ್ಯಂತ ಸಣ್ಣ ಶಿಶು ಎಂದು ಹೇಳಲಾಗಿದೆ. ಎಲ್ಲೀ ಪ್ಯಾಟೀನ್ ಎನ್ನುವ 17 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಕೇವಲ 25 ವಾರಗಳಲ್ಲಿ ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ಹನ್ನಾ ಎಂದು ನಾಮಕರಣ ಮಾಡಲಾಗಿದೆ. ಅವಧಿ ಪೂರ್ವ ಶಿಶು ಬದುಕುವ ಸಾಧ್ಯತೆ ಶೇ. 20 ರಷ್ಟು ಮಾತ್ರ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಐಸಿಯುವಿನಲ್ಲಿರುವ ಮಗು ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ.
ಎಲ್ಲೀ ಮತ್ತು ಬ್ರ್ಯಾಂಡನ್ ಸ್ಟಿಬಲ್ಸ್ ಎನ್ನುವ ಜೋಡಿಗೆ ಈ ಮಗು ಜನಿಸಿದೆ. 22ನೇ ವಾರದಲ್ಲಿ ದಂಪತಿ ಸ್ಕ್ಯಾನಿಂಗ್ ಮಾಡಿಸಿದಾಗ ಮಗು ಚಿಕ್ಕದಾಗಿದೆ ಇನ್ನೂ ಪೂರ್ತಿಯಾಗಿ ಬೆಳವಣಿಗೆಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದರು. ಆದರೆ ಡಿಸೆಂಬರ್ 29ರಂದು ಎಲ್ಲೀ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ಐರ್ಲೆಂಡ್ನ ಕ್ರಾಸ್ ಹೌಸ್ ಎನ್ನುವ ಆಸ್ತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರವಾದ ಕೆಳಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ರಾಣಿ ಎಲಿಜಬೇತ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಡಿ 30ರಂದು ಎಲ್ಲೀ ಶಿಶುವಿಗೆ ಜನ್ಮ ನೀಡಿದ್ದಾಳೆ ಎಂದು ವರದಿ ತಿಳಿಸಿದೆ.
ಈ ಮೊದಲು 2003ರಲ್ಲಿ ಜನಿಸಿದ ಆಲಿಯಾ ಅತಿ ಕಿರಿಯ ಮಗು ಎಂದು ಗುರುತಿಸಲಾಗಿದೆ. ಆಲಿಯಾ ಮಗು ಜನಿಸುವಾಗ ಕೇವಲ 340 ಗ್ರಾಂ ತೂಕವಿತ್ತು. ಇದೀಗ ಜನಿಸಿದ ಶಿಶು 325 ಗ್ರಾಂ ತೂಕವಿದ್ದು 20 ವರ್ಷಗಳ ಬಳಿಕ ಜನಸಿದ ಸಣ್ಣ ಶಿಶು ಎನ್ನಲಾಗಿದೆ. ಮಗು ಬದುಕುವ ಅವಕಾಶ ಕಡಿಮೆಯಿದೆ ಎಂದು ವೈದ್ಯರು ತಿಳಿಸಿದ್ದರೂ ಎಲ್ಲೀ ದಂಪತಿ ಮಗುವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.