
2021 ರ ಭುವನ ಸುಂದರಿಯಾಗಿ ಚಂಡೀಗಢ ಮೂಲದ ಹರ್ನಾಜ್ ಕೌರ್ ಸಂಧು ಆಯ್ಕೆಯಾಗಿದ್ದಾರೆ. ಇಸ್ರೇಲ್ನ ಐಲಾಟ್ನಲ್ಲಿ ನಡೆದ 70ನೇ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 21 ವರ್ಷದ ಹರ್ನಾಜ್ ಸಂಧು ಭುವನ ಸುಂದರಿಯಾಗಿ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಪಟ್ಟ ದೊರಕಿದೆ. 2000ರಲ್ಲಿ ಲಾರಾದತ್ತ ಭುವನ ಸುಂದರಿಯಾಗಿ ಹೊರಹೊಮ್ಮಿದ್ದರು. ಅವರ ಬಳಿಕ ಈಗ ಹರ್ನಾಜ್ ಸಂಧು 2021ರ ಮಿಸ್ ಯುನಿವರ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಗೆದ್ದ ಹರ್ನಾಜ್ ಸಂಧು ಅವರಿಗೆ ಮೆಕ್ಸಿಕೊದ 2020ರಮಾಜಿ ವಿಶ್ವ ಸುಂದರಿ ಆಂಡ್ರಿಯಾ ಮೆಜಾ ಅವರು ಕಿರೀಟವನ್ನು ತೊಡಿಸಿದ್ದಾರೆ. ವಿವಿಧ ದೇಶಗಳಿಂದ ಆಗಮಿಸಿದ 79 ಮಂದಿ ಸ್ಪರ್ಧಿಗಳನ್ನು ಹಿಂದಿಕ್ಕಿ 21 ವರ್ಷದ ಹರ್ನಾಜ್ ಮಿಸ್ ಯುನಿವರ್ಸ್ ಆಗಿದ್ದಾರೆ. ಪ್ರಶಸ್ತಿ ಮುಡಿಗೇರಿಸಿಕೊಂಡ ಹರ್ನಾಜ್ ವೇದಿಕೆಯ ಮೇಲೆ ಹೆಜ್ಜೆ ಹಾಕಿ ಚಕ್ ದೇ ಪಟ್ಟೆ ಇಂಡಿಯಾ ಎಂದು ಕೂಗಿದ್ದಾರೆ.
ಭುವನ ಸುಂದರಿಯಾಗಿ ಹೊರಹೊಮ್ಮಿದ ಹರ್ನಾಜ್ ಅವರ ವೇದಿಕೆಯಲ್ಲಿನ ವೀಡಿಯೋವೊಂದು ಈಗ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ವಿನ್ನರ್ ಘೋಷಣೆಗೂ ಮೊದಲು ವೇದಿಕೆಯ ಮೇಲೆ ಕಾರ್ಯಕ್ರಮದ ನಿರೂಪಕ ಸ್ಟೀವ್ ಹಾರ್ವೆ ಬಳಿ ಮಾತನಾಡುವಾಗ ಹರ್ನಾಜ್ ಬೆಕ್ಕಿನ ಧ್ವನಿಯಲ್ಲಿ ಕೂಗಿದ ವೀಡಿಯೋ ವೈರಲ್ ಆಗಿದೆ. ಆ್ಯಂಕರ್ ಹಾರ್ವೆ ಅವರು ಹರ್ನಾಜ್ ಬಳಿ ನಿಮ್ಮ ಇಷ್ಟದ ಪ್ರಾಣಿಯ ಬಗ್ಗೆ ಹೇಳಿ ಕೇಳಿದರು. ಮುಂದುವರೆದು ಅದರ ಅನುಕರಣೆ ಮಾಡುವಂತೆ ಕೇಳಿದಾಗ ಹರ್ನಾಜ್ ನನ್ನಿಷ್ಟದ ಪ್ರಾಣಿಯ ಅನುಕರಣೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾಡುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ನಕ್ಕಿದ್ದಾರೆ. ಬಳಿಕ ಹರ್ನಾಜ್ ಬೆಕ್ಕಿನಂತೆ ಮ್ಯಾಂವ್ ಎಂದಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಹರ್ನಾಜ್ ಅವರ ಮುಗ್ಧತೆ ನೆಟ್ಟಿಗರ ಮನ ಸೆಳೆದಿದೆ. ಚಂಡೀಗಡ ಮೂಲದ ಹರ್ನಾಜ್ ಇಸ್ರೇಲ್ನಲ್ಲಿ ನಡೆದ ಸ್ಪರ್ದೆಯಲ್ಲಿ ಗೆದ್ದು 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಪ್ರಶಸ್ತಿ ದೊರಕುವಂತೆ ಮಾಡಿದ್ದಾರೆ.
ಇದನ್ನೂ ಓದಿ:
Miss Universe 2021: ಭುವನ ಸುಂದರಿಯಾಗಿ ಹೊರಹೊಮ್ಮಿದ ಭಾರತದ ಹರ್ನಾಜ್ ಸಂಧು