Kolkata : ಕೊಲ್ಕತ್ತೆಯ ಗೋಲ್ಪಾರ್ಕ್ನ ಆ್ಯಕ್ಸಿಸ್ ಬ್ಯಾಂಕ್ (Axis Bank) ಬಳಿ 80ರ ಹರೆಯದ ಈ ಕಲಾವಿದರು ಬುಧವಾರ ಮತ್ತು ಶನಿವಾರದಂದು ತಮ್ಮ ಕಲಾಕೃತಿಗಳೊಂದಿಗೆ ಹೀಗೆ ಕುಳಿತಿರುತ್ತಾರೆ. ಮನೆಯಲ್ಲಿ ಅವರು ಮತ್ತು ಅವರ ‘ವಿಶೇಷ’ ಮಗ ಮಾತ್ರ. ಇಬ್ಬರ ತುತ್ತಿನ ಚೀಲ ತುಂಬಲು ವಯೋವೃದ್ಧ ಕಲಾವಿದರು ಈ ಕಲೆಯನ್ನೇ ನೆಚ್ಚಿಕೊಂಡಿದ್ದಾರೆ. ಇವರು ಬೀದಿಬದಿ ಕಲಾವಿದರು ಮಾಡುವ ಪೇಂಟಿಂಗ್ ನೋಡಿ ತಮ್ಮಷ್ಟಕ್ಕೆ ತಾವು ಈ ಕಲೆಯಲ್ಲಿ ತೊಡಗಿಕೊಂಡು ಇದನ್ನೇ ಜೀವನಾಧಾರ ಮಾಡಿಕೊಂಡಿದ್ದಾರೆ. ಇವರ ಕಲಾಕೃತಿಗಳ ಬೆಲೆ ಜನಸಾಮಾನ್ಯರ ಕೈಗೆಟಕುವ ದರದಲ್ಲಿ ಲಭ್ಯ. ಒಂದು ಕಲಾಕೃತಿಯ ಬೆಲೆ ಕೇವಲ ರೂ. 50ರಿಂದ 100 ಮಾತ್ರ.
ಆರಾಧನಾ ಚಟರ್ಜೀ (Aradhana Chatterjee) ಎಂಬ ಯೂಟ್ಯೂಬರ್ ಕ್ಯಾಮೆರಾ ಕಣ್ಣಿಗೆ ಈ ಕಲಾವಿದರು ಬಿದ್ದಿದ್ದಾರೆ. ಈತನಕ ಈ ವಿಡಿಯೋ ಅನ್ನು ನಾಲ್ಕು ಮಿಲಿಯನ್ ಜನರು ನೋಡಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಅನ್ನು ಮೆಚ್ಚಿದ್ದಾರೆ. ಅನೇಕರು ಇವರನ್ನು ಸಂಪರ್ಕಿಸುವುದು ಹೇಗೆ ಎಂದು ಕೇಳುತ್ತಿದ್ದಾರೆ. ನಾವು ಇವರ ಪ್ರದರ್ಶನವನ್ನು ಏರ್ಪಡಿಸಬೇಕು, ಆ ಮೂಲಕ ಇವರಿಗೆ ಆರ್ಥಿಕ ಸಹಾಯವನ್ನು ಒದಗಿಸಬೇಕು ಎಂದು ಕಲಾವಿದರ ವಿವರಗಳಿಗಾಗಿ ಆರಾಧನಾ ಅವರಿಗೆ ಕೇಳುತ್ತಿದ್ದಾರೆ.
ಇದನ್ನೂ ಓದಿ : Viral Video: ಒಂಟಿಗಾಲಿನಲ್ಲಿ ತಪಸ್ಸು ಮಾಡುತ್ತಿರುವ ಮಾರ್ಜಾಲ ಮತ್ತು ಕೋಳಿ, ಮುಂದೆ?
ಈ ವಯೋವೃದ್ಧ ಕಲಾವಿದರ ಉಳಿದ ಮಕ್ಕಳು ಇವರನ್ನು ತೊರೆದಿದ್ದಾರೆ. ಆದರೆ ಇವರು ತಮ್ಮ ವಿಶೇಷ ಮಗನನ್ನು ದೂರ ಮಾಡಲಿಲ್ಲ. ಮಕ್ಕಳಿಗಾಗಿ ಹೆತ್ತವರು ತ್ಯಾಗ ಮಾಡುತ್ತಾರೆ, ಆದರೆ ಮಕ್ಕಳು ಹೀಗೆ ತಂದೆತಾಯಿಯರನ್ನು ಈ ವಯಸ್ಸಿನಲ್ಲಿ ಕಷ್ಟಕ್ಕೆ ತಳ್ಳಬಾರದು ಎಂದು ಒಬ್ಬರು ಹೇಳಿದ್ದಾರೆ. ಭಾರತದ ಪ್ರತೀ ರಾಜ್ಯ, ಹಳ್ಳಿ, ನಗರಗಳಲ್ಲಿರುವ ಹಿರಿಯ ಕಲಾವಿದರಿಗಾಗಿ ಉಚಿತ ಪ್ರದರ್ಶನವನ್ನು ಏರ್ಪಡಿಸಬೇಕು, ಇಂಥ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ಇವರೆಲ್ಲ ಒಂದುಗೂಡುವಂತೆ ಮಾಡಬೇಕು. ಧ್ವನಿ ಇಲ್ಲದ ಇವರಿಗೆ ಬೆಂಬಲಿಸಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಫ್ರೀಸ್ಟೈಲ್ ಫುಟ್ಬಾಲ್ನಲ್ಲಿ ಲಿವ್ ಕುಕ್ ಗಿನ್ನೀಸ್ ವಿಶ್ವ ದಾಖಲೆ
ಮುಂದಿನ ಬಾರಿ ಕೊಲ್ಕತ್ತೆಗೆ ಹೋದಾಗ ಖಂಡಿತ ನಾನು ಈ ಚಿತ್ರಗಳನ್ನು ವೈಯಕ್ತಕಕ್ಕಾಗಿ ಖರೀದಿಸುತ್ತೇನೆ, ಆದರೆ ದಾನಕ್ಕಾಗಿ ಅಲ್ಲ ಎಂದಿದ್ದಾರೆ ಒಬ್ಬರು. ಇವರ ಈ ವರ್ಣಚಿತ್ರಗಳನ್ನು ದೆಹಲಿಗೆ ರವಾನಿಸಲು ಒಂದು ಐಡಿಯಾ ಇದೆ! ಮದುವೆಯಲ್ಲಿ ಕೊಡುವ ಸಿಹಿಪೊಟ್ಟಣಗಳ ಬದಲಿಗೆ ಇವುಗಳನ್ನು ಉಡುಗೊರೆಯಾಗಿ ಕೊಡಬಹುದು ಎಂದಿದ್ದಾರೆ ಮಗದೊಬ್ಬರು. ನಾನು ಇವರ ಪ್ರದರ್ಶನವನ್ನು ಆಯೋಜಿಸುತ್ತೇನೆ, ಮಳಿಗೆಯ ಶುಲ್ಕವನ್ನು ಇವರು ಕೊಡಬೇಕಿಲ್ಲ ಎಂದಿದ್ದಾರೆ ಇನ್ನೂ ಒಬ್ಬರು. ಅನೇಕರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:19 pm, Tue, 11 July 23