ಇಂಥದೊಂದು ಸಂಗತಿಯನ್ನು ನೀವು ಇದಕ್ಕೂ ಮೊದಲು ಕೇಳಿರಲಾರಿರಿ. ಒಮ್ಮೆ ಯೋಚಿಸಿ ನೋಡಿ, ಎರಡು ರಾಜ್ಯಗಳ ಗಡಿಭಾಗದಲ್ಲಿರುವ ಮನೆಯೊಂದರ ಅರ್ಧ ಭಾಗ ಒಂದು ರಾಜ್ಯಕ್ಕೆ ಉಳಿದರ್ಧ ಭಾಗ ಇನ್ನೊಂದು ರಾಜ್ಯಕ್ಕೆ ಸೇರಿದರೆ ಆ ಮನೆಯಲ್ಲಿ ವಾಸಿಸುವ ಜನರನ್ನು ಯಾವ ರಾಜ್ಯದವರೆಂದು ಪರಿಗಣಿಸಬೇಕು? ಇದನ್ನೇನು ನಾವು ಕಲ್ಪಿಸಿಕೊಂಡು ಹೇಳುತ್ತಿಲ್ಲ. ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ ಚಂದ್ರಾಪುರ ಜಿಲ್ಲೆಯ ಸೀಮಾವರ್ತಿ ತೆಹ್ಸೀಲ್ ವ್ಯಾಪ್ತಿಯಲ್ಲಿ ಬರುವ ಮಹಾರಾಜಗುಡ ಗ್ರಾಮದಲ್ಲಿರುವ ಪವಾರ್ ಕುಟುಂಬದ (Pawar family) ಮನೆ ಮಹಾರಾಷ್ಟ್ರ (Maharashtra) ಮತ್ತು ತೆಲಂಗಾಂಣ (Telangana) ರಾಜ್ಯಗಳಲ್ಲಿ ಅರ್ಧರ್ಧ ಹಂಚಿಹೋಗಿದ್ದು ಕುಟುಂಬದ ಸದಸ್ಯರು ಎರಡೂ ರಾಜ್ಯಗಳ ಪ್ರಜೆಗಳಾಗಿದ್ದಾರೆ!
ಪವಾರ್ ಕುಟುಂಬ ವಾಸವಾಗಿರುವ ಗ್ರಾಮ ಸೇರಿದಂತೆ ಈ ಗಡಿಭಾಗದಲ್ಲಿರುವ 14 ಗ್ರಾಮಗಳಿಗಾಗಿ ಎರಡೂ ರಾಜ್ಯಗಳ ನಡುವೆ ತಗಾದೆ ಜಾರಿಯಲ್ಲಿರುವುದರಿಂದ ಪವಾರ್ ಕುಟುಂಬ ಒಂದು ವಿಚಿತ್ರವಾದ ಅನುಭೂತಿಗೆ ಸಿಕ್ಕಿದೆ. ತೆಲಂಗಾಣ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳು ಈ ಗ್ರಾಮಗಳು ತಮಗೆ ಸೇರಬೇಕೆಂದು ವಾದಿಸುತ್ತಿವೆ.
Maharashtra | A house in Maharajguda village, Chandrapur is spread b/w Maharashtra & Telangana – 4 rooms fall in Maha while 4 others in Telangana
Owner, Uttam Pawar says, “12-13 of us live here. My brother’s 4 rooms in Telangana&4 of mine in Maharashtra, my kitchen in Telangana” pic.twitter.com/vAOzvJ5bme
— ANI (@ANI) December 15, 2022
ಗಮ್ಮತ್ತಿನ ಸಂಗತಿಯೆಂದರೆ ಗ್ರಾಮಗಳ ನಿವಾಸಿಗಳು ಎರಡೂ ರಾಜ್ಯಗಳ ಕಲ್ಯಾಣಯೋಜನೆಗಳಲ್ಲಿ ಫಲಾನುಭವಿಗಳಾಗಿದ್ದಾರೆ, ಮತ್ತು ಎರಡು ರಾಜ್ಯಗಳಲ್ಲಿ ನೋಂದಣಿಯಾಗಿರುವ ವಾಹನಗಳನ್ನು ಹೊಂದಿದ್ದಾರೆ. ತೆರಿಗೆಗಳನ್ನು ಸಹ ಅವರು ಎರಡೂ ರಾಜ್ಯಗಳಿಗೆ ಪಾವತಿಸುತ್ತಾರೆ. ಮಹಾರಾಜಗುಡದಲ್ಲಿರುವ ಪವಾರ್ ಅವರ 10-ಕೋಣೆ ಮನೆಯ ನಾಲ್ಕು ಕೋಣೆಗಳು ತೆಲಂಗಾಣದಲ್ಲಿದ್ದರೆ, ನಾಲ್ಕು ಮಹಾರಾಷ್ಟ್ರದಲ್ಲಿವೆ. ಕಿಚನ್ ತೆಲಂಗಾಣದಲ್ಲಿದ್ದರೆ ಬೆಡ್ ರೂಮು ಮತ್ತು ಹಾಲ್ ಗಳು ಮಹಾರಾಷ್ಟ್ರ ರಾಜ್ಯದಲ್ಲಿವೆ. ದಶಕಗಳಿಂದ ಪವಾರ್ ಕುಟುಂಬವು ಈ ಮನೆಯಲ್ಲಿ ವಾಸವಾಗಿದೆ.
ಎಎನ್ ಐ ನೊಂದಿಗೆ ಮಾತಾಡಿರುವ ಮನೆಯ ಮಾಲೀಕ ಉತ್ತಮ್ ಪವಾರ್, ‘ನಮ್ಮ ಮನೆ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಭಾಗವಾಗಿದೆ. ನಮಗೆ ಇದುವರೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ನಾವು ಎರಡೂ ರಾಜ್ಯಗಳಿಗೆ ತೆರಿಗೆ ಪಾವತಿಸುತ್ತೇವೆ ಮತ್ತು ಎರಡೂ ರಾಜ್ಯಗಳ ಜನಪರ ಯೋಜನೆಗಳ ಸದುಪಯೋಗ ಮಾಡಿಕೊಳ್ಳುತ್ತೇವೆ,’ ಎಂದು ಹೇಳಿದ್ದಾರೆ.
1969ರಲ್ಲಿ ಎರಡು ರಾಜ್ಯಗಳ ನಡುವಿನ ಗಡಿವಿವಾದ ಬಗೆಹರಿದಾಗ ಪವಾರ್ ಕುಟುಂಬದ ಜಮೀನು ಎರಡು ರಾಜ್ಯಗಳಲ್ಲಿ ಹಂಚಿಹೋಯಿತು. ಅದರ ಪರಿಣಾಮವಾಗಿ ಮನೆ ಕೂಡ ಗಡಿರಾಜ್ಯಗಳ ಅರ್ಧರ್ಧ ಭಾಗವಾಯಿತು. ಕಾನೂನಾತ್ಮಕವಾಗಿ ಈ 14 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಿದ್ದರೂ ತೆಲಂಗಾಣ ಸರ್ಕಾರ ಜನಪರ ಸ್ಕೀಮ್ ಗಳ ಮೂಲಕ ಗ್ರಾಮದ ನಿವಾಸಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆಯೂ ಗಡಿವಿವಾದ ನಿರಂತರವಾಗಿ ನಡೆಯುತ್ತಿದೆ. ಬುಧವಾರದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಸುಪ್ರೀಮ್ ಕೋರ್ಟ್ ನಿರ್ದೇಶನ ಹೊರಡಿಸುವವರೆಗೆ ಎರಡೂ ರಾಜ್ಯಗಳು ಪರಸ್ಪರರ ವಿರುದ್ಧ ಯಾವುದೇ ದಾವೆ ಹೂಡಬಾರದೆಂದು ಅವರು ಮುಖ್ಯಮಂತ್ರಿಗಳಿಗೆ ಹೇಳಿದ್ದಾರೆ.
‘ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಸುಪ್ರೀಮ್ ಕೋರ್ಟ್ ತನ್ನ ತೀರ್ಪು ನೀಡುವವರೆಗೆ ರಾಜ್ಯ ಸರ್ಕಾರಗಳು ಯಾವುದೇ ದಾವೆ ಹೂಡಬಾರದೆಂಬ ಒಪ್ಪಂದಕ್ಕೆ ಬರಲಾಗಿದೆ. ಗಡಿ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ. ಎರಡೂ ರಾಜ್ಯಗಳ ತಲಾ ಮೂರು ಸಚಿವರನ್ನು ಒಳಗೊಂಡ ಒಂದು ಸಮಿತಿ ರಚಿಸುವ ತೀರ್ಮಾನಕ್ಕೂ ಸಭೆಯಲ್ಲಿ ಬರಲಾಯಿತು,’ ಎಂದು ಅಮಿತ್ ಶಾ ಸಭೆಯ ನಂತರ ಹೇಳಿದ್ದರು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ