ಸಾಮಾನ್ಯವಾಗಿ ವಿಮಾನ ಅಪಘಾತ ಆದಾಗ ಅದರಲ್ಲಿದ್ದವರು ಬದುಕುಳಿಯುವುದು ತೀರಾ ಅಪರೂಪ. ಅದಾಗ್ಯೂ ಕೆಲವರು ಬದುಕುಳಿಯುತ್ತಾರೆ. ಇದೀಗ ಅಂತಹ ಒಂದು ಘಟನೆ ಬೆಲ್ಜಿಯಂನಲ್ಲಿ ನಡೆದಿದೆ. ವಿಮಾನ ಬಂದು ಭೂಮಿಗೆ ಅಪ್ಪಳಿಸಿದರೂ ಪೈಲಟ್ ಬದುಕುಳಿದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ತಿಂಗಳ ಆರಂಭದಲ್ಲಿ ಯುಎಸ್ನಲ್ಲಿ ಪೈಲಟ್ ಒಬ್ಬರು ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ಬೆನ್ನಲ್ಲೇ ಈ ವಿಡಿಯೋ ಬಂದಿದೆ.
ವೈರಲ್ ವಿಡಿಯೋದಲ್ಲಿ ಇರುವಂತೆ, ಬಹು ಎತ್ತರದಲ್ಲಿ ಪ್ಯಾರಚೂಟ್ನಲ್ಲಿ ಯಾರೋ ಬರುತ್ತಿರುವ ಹಾಗೆ ಕಣಿಸುತ್ತದೆ. ಅದು ಭೂಮಿಗೆ ಸಮೀಪವಾಗುತ್ತಿದ್ದಂತೆ ಸಮಸ್ಯೆಗೆ ಈಡಾದ ವಿಮಾನವೊಂದು ಬೀಳುತ್ತಿರುವುದು ತಿಳಿದುಬರುತ್ತದೆ. ವಿಡಿಯೋವನ್ನು ಸರಿಯಾಗಿ ಗಮನಿಸಿದಾಗ ವಿಮಾನದ ಹಿಂದೆ ಪ್ಯಾರಚೂಟ್ ಇರುತ್ತದೆ. ಇದರ ಸಹಾಯದಿಂದ ವಿಮಾನ ನಿಧಾನವಾಗಿ ಕೆಳಗೆ ಬಂದಿದೆ. ಆದರೂ ಭೂಮಿಗೆ ಸಮೀಪಿಸುತ್ತಿದ್ದಂತೆ ಬ್ರೂಗ್ಸ್‌ನ ಸಿಂಟ್-ಆಂಡ್ರೀಸ್‌ನಲ್ಲಿನ ರಸ್ತೆಯ ಬದಿ ವೇಗವಾಗಿಯೇ ಮುಖ ಕೆಳಗಾಗಿ ಹಿಂಬದಿ ಮೇಲ್ಮುಖವಾಗಿ ಅಪ್ಪಳಿಸಿದೆ. ವಿಡಿಯೋದ ಕೊನೆಯಲ್ಲಿ ಪೈಲಟ್ ಯಾವುದೇ ಅಪಾಯವಿಲ್ಲದೆ ವಿಮಾನದ ಬಾಗಿಲು ತೆಗೆದು ಹೊರಬರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸ್ಕೈ ನ್ಯೂಸ್ ಪ್ರಕಾರ, ಎರಡು ಆಸನಗಳ ವಿಮಾನ ಬಿದ್ದ ಪ್ರದೇಶದಲ್ಲಿನ ಸೂಚನಾ ಫಲಕ ಮತ್ತು ತಡೆಗೋಡೆಗೆ ಕನಿಷ್ಠ ಹಾನಿಯುಂಟಾಗಿದೆ ಎಂದು ಬ್ರೂಗ್ಸ್ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿದ್ದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೈಲಟ್ನ ಅನುಭವವನ್ನು ಹೊಗಳಿದ ಅಧಿಕಾರಿಗಳು, ಧುಮುಕು ಕೊಡೆಯನ್ನು ಬಿಡಿಸುವ ವಿಮಾನದ ಬ್ಯಾಲಿಸ್ಟಿಕ್ ರಿಕವರಿ ಸಿಸ್ಟಮ್ನಿಂದಾಗಿ ಪೈಲಟ್ನ ಜೀವ ಉಳಿದಿದೆ ಎಂದಿದ್ದಾರೆ. ಸದ್ಯ ವಿಮಾನ ಪತನದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಪತನವಾದ ವಿಮಾನ DynAero MCRO1 ಎಂದು ನ್ಯೂಜಿಲೆಂಡ್ ಹೆರಾಲ್ಡ್ ಪ್ರತ್ಯೇಕವಾಗಿ ವರದಿ ಮಾಡಿದೆ. ಇದು ಕಾರ್ಬನ್ ಫೈಬರ್‌ನಿಂದ ನಿರ್ಮಿಸಲಾದ ಎರಡು ಆಸನಗಳ ಹಗುರವಾದ ವಿಮಾನವಾಗಿದೆ.
ಜುಲೈ 3 ರಂದು, ಪೈಲಟ್ ವಿಸೆಂಟ್ ಫ್ರೇಸರ್ ತನ್ನ ಮಾವನೊಂದಿಗೆ ಏಕ-ಎಂಜಿನ್ ವಿಮಾನವನ್ನು ಹಾರಿಸುತ್ತಿದ್ದಾಗ ವಿಮಾನದ ಎಂಜಿನ್ ವಿಫಲಗೊಂಡಿದೆ. ಪರಿಣಾಮವಾಗಿ ಉತ್ತರ ಕೆರೊಲಿನಾದ ಚಥುಷ್ಪಥ ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ವಿಡಿಯೋ ಕ್ಲಿಪ್‌ನಲ್ಲಿ, ವಿಮಾನವು ನೆಲಕ್ಕೆ ಬೀಳುತ್ತಿದ್ದಂತೆ ಕಾಣುತ್ತದೆ, ರಸ್ತೆಯೊಂದಿಗೆ ಸಂಪರ್ಕ ಸಾಧಿಸುವಾಗ ರಸ್ತೆಯಲ್ಲಿ ಹಲವಾರು ಕಾರುಗಳ ಮೇಲಿಂದ ಹಾದುಹೋಗುತ್ತದೆ. ನಂತರ ಯಾವುದೇ ಅಪಘಾತವಾಗದಂತೆ ಎಚ್ಚರಿಕೆಯಿಂದ ಲ್ಯಾಂಡಿಂಗ್ ಮಾಡಿ ಸ್ವಲ್ಪ ದೂರದಲ್ಲೇ ವಿಮಾನವನ್ನು ನಿಲ್ಲಿಸಲಾಗಿದೆ. ಇದರ ವಿಡಿಯೋ ಕೂಡ ವೈರಲ್ ಆಗಿತ್ತು.
Published On - 3:06 pm, Tue, 19 July 22