Dead Sea : ಡೆಡ್ ಸೀ-ಮೃತಸಮುದ್ರ ಏನಿದು? ಇದು ಎಲ್ಲಿದೆ? ಹೇಗಿರುತ್ತದೆ? ಎಂಬ ಪ್ರಶ್ನೆಗಳು ನಿಮ್ಮ ಮೆದುಳಲ್ಲಿ ದಾಂಗುಡಿ ಇಡಲು ಶುರುಮಾಡಿರುತ್ತವೆ. ಈ ಡೆಡ್ ಸೀ ಇರುವುದು ಇಸ್ರೇಲ್ ಮತ್ತು ಜೋರ್ಡಾನ್ ಮಧ್ಯದ ಪಶ್ಚಿಮ ತೀರದಲ್ಲಿ. ಇದೊಂದು ನೈಋತ್ಯ ಏಷ್ಯಾದಲ್ಲಿರುವ ಉಪ್ಪು ಸರೋವರ. ಇದನ್ನು ಸಾಲ್ಟ್ ಸೀ ಮತ್ತು ಸೀ ಆಫ್ ಲಾಟ್ ಎಂದೂ ಕರೆಯುತ್ತಾರೆ. ಈ ಪ್ರದೇಶದಲ್ಲಿ ಜಲಮೂಲವು ಕಡಿಮೆ ಮಟ್ಟದಲ್ಲಿರುತ್ತದೆ. ಹಾಗೆಯೇ ಈ ಭೂಪ್ರದೇಶ ಕಡಿಮೆ ಎತ್ತರದಲ್ಲಿರುತ್ತದೆ. ಡೆಡ್ಸೀ ನೀರು ಸಮುದ್ರದ ನೀರಿಗಿಂತ ಸುಮಾರು ಹತ್ತು ಪಟ್ಟು ಹೆಚ್ಚು ಉಪ್ಪಿನಿಂದ ಕೂಡಿರುತ್ತದೆ. ಯಾಕೆ ಹೀಗೆ, ಇದು ಹೀಗಿರಲು ಕಾರಣವೇನು?
ಹಿಂದೆ ಈ ಉಪ್ಪುನೀರಿನ ಸರೋವರವು ಮೆಡಿಟರೇನಿಯನ್ ಸಮುದ್ರದೊಂದಿಗೆ ಸಂಪರ್ಕ ಹೊಂದಿತ್ತು. ಆಫ್ರಿಕ ಮತ್ತು ಅರೇಬಿಯನ್ ಟೆಕ್ಟೋನಿಕ್ ಶಿಲಾಪದರಗಳು ಆಚೀಚೆ ಸರಿಯುವ ಘರ್ಷಣೆಯಲ್ಲಿ ಉಪ್ಪುನೀರಿನ ಸರೋವರಕ್ಕೆ ಮೆಡಿಟರೇನಿಯನ್ ಸಮುದ್ರದ ಸಂಪರ್ಕ ತಪ್ಪಿಹೋಯಿತು. ಹೀಗಾಗಿ ಇದು ನೆಲದ ಮಧ್ಯೆ ನಿಂತ ನೀರಿನ ನೆಲೆಯಾಯಿತು. ಸುತ್ತಲಿನ ಭೂಪ್ರದೇಶದಿಂದ ತಾಜಾ ಸಿಹಿ ನೀರು ಈ ಸರೋವರಕ್ಕೆ ಹರಿದುಬರುತ್ತದೆ. ಆದರೆ ಇಲ್ಲಿಗೆ ಬಂದ ನೀರು ಬೇರೆಲ್ಲಿಗೂ ಹರಿದು ಹೋಗಲು ಅವಕಾಶವಿಲ್ಲ. ಮರಳುಗಾಡಿನಲ್ಲಿ ಆವಿಯಾಗುವ ನೀರು ಉಪ್ಪಿನ ಅಂಶವನ್ನು ಇದ್ದಲ್ಲೇ ಉಳಿಸುವುದರಿಂದ ಮೃತ ಸಮುದ್ರದ ನೀರಿನ ಅಂಶ ಹೆಚ್ಚಾಗಿದೆ. ಲವಣಾಂಶ ಹೆಚ್ಚಾಗಿರುವುದರಿಂದ ಜೀವಿಗಳ ಉಳಿವಿಗೆ ವ್ಯತಿರಿಕ್ತ ಪರಿಸರ ನಿರ್ಮಾಣವಾಗಿದೆ.
ಡೆಡ್ಸೀ ನಿಜವಾಗಲೂ ಮೃತಸಮುದ್ರವೆ? ಇದಕ್ಕೆ ಉತ್ತರ ಹೌದು! ಸಮುದ್ರ ಮಟ್ಟಕ್ಕಿಂತ 1412 ಅಡಿಗಳಷ್ಟು ಕೆಳಗಿರುವ ಕೋಬಾಲ್ಟ್-ನೀಲಿ ನೀರಿನಿಂದ ಡೆಡ್ ಸೀ ಮತ್ತು ಅದರ ಸುತ್ತಮುತ್ತಲೂ ಇರುವ ಪಕ್ಷಿ, ಮೀನು ಅಥವಾ ಸಸ್ಯಗಳು ಏನೊಂದೂ ಇಲ್ಲಿ ಕಂಡುಬರಲಾರವು. ಸ್ಫಟಿಕದಂತಹ ಸೋಡಿಯಂ ಕ್ಲೋರೈಡ್ನ ಬಂಡೆಗಳು ಮತ್ತು ಮರಳು ಈ ನೀರಿನಂಚಿನಲ್ಲಿ ಹೊಳೆಯುತ್ತಿರುತ್ತವೆ. ಈ ಹಂತದಲ್ಲಿರುವಾಗಲೇ ಜುಡಿಯಾ ಪರ್ವತ ಮತ್ತು ಜೋರ್ಡಾನ್ ಪರ್ವತಗಳ ಮಧ್ಯೆ ಆನಂದದಾಯಕ ಕ್ಷಣಗಳನ್ನು ಕಳೆಯಲು ಪ್ರವಾಸಿಗರು ಇಲ್ಲಿ ಬರುತ್ತಾರೆ.
ಸೂರ್ಯಸ್ನಾನಕ್ಕೆಂದೇ ಪ್ರವಾಸಿಗರು ಇಲ್ಲಿಗೆ ಭೇಟಿಕೊಡುತ್ತಾರೆ. ಮೊದಲು ಈ ಡೆಡ್ಸೀಯ ನೀರಿನಲ್ಲಿ ತೇಲುತ್ತಾರೆ. ಜೊತೆಗೆ ಇಲ್ಲಿರುವ ಮಣ್ಣಿನೊಳಗೆ ದೇಹವನ್ನು ಹುಗಿದುಕೊಳ್ಳುತ್ತಾರೆ. ಈ ಪ್ರಕ್ರಿಯೆಯಿಂದ ದೇಹವು ಹೈಲುರಾನಿಕ್ ಆಮ್ಲ ಮತ್ತು ಇತರ ಖನಿಜಗಳನ್ನು ಹೀರಿಕೊಳ್ಳುತ್ತದೆ
ಇನ್ನು ಈ ಡೆಡ್ಸೀ ತೀರಗಳಲ್ಲಿ ಯಾವುದೇ ದೋಣಿಗಳು ಲಭ್ಯವಿರುವುದಿಲ್ಲ. ಏಕೆಂದರೆ ಇಲ್ಲಿ ಅಲೆಗಳೇಳುವಷ್ಟು ರಭಸದ ಹರಿವು ಇರುವುದಿಲ್ಲವೆಂದ ಮೇಲೆ ದೋಣಿ? ಹಾಗಾಗಿ ಇಲ್ಲಿ ಸದಾ ನಿಶ್ಯಬ್ದ. ಈ ಪರಿಸರವು ಯುಟೋಪಿಯನ್ ಗ್ರಹದ ಯಾವುದೋ ಒಂದು ತಾಣದಂತೆ ಕಾಣುತ್ತದೆ.
ಏನೆಲ್ಲ ಅದ್ಭುತ, ಅಚ್ಚರಿಗಳಿಂದ ನಮ್ಮ ಪ್ರಕೃತಿ ಕೂಡಿದೆಯಲ್ಲವೆ?
ವೈರಲ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 1:02 pm, Wed, 28 September 22