2021ರ ಅಗಸ್ಟ್ನಲ್ಲಿ ಅಫಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡ ಬಳಿಕ ಅಲ್ಲಿಯ ಜನರ ಬದುಕು ನರಕ ಸದೃಶವಾಗಿದೆ. ಅಫ್ಘಾನ್ ಅನ್ನು ತಾಲಿಬಾನ್ ಕೈವಶ ಮಾಡಿಕೊಳ್ಳುತ್ತಿದ್ದಂತೆ ಅಮೆರಿಕ ಕೂಡ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿತ್ತು. ಈ ವೇಳೆ ಅಫ್ಘಾನ್ ಜನತೆ ತಾಲಿಬಾನಿಗಳ ಕೈಗೆ ಸಿಲುಕಿದರೆ ತಮ್ಮ ಮಕ್ಕಳು ಜೀವಂತವಾಗಿರುವುದಿಲ್ಲ ಎನ್ನುವ ಭಯದಲ್ಲಿ ಹೆತ್ತ ಮಕ್ಕಳನ್ನು ಸೈನಿಕರಿಗೆ ನೀಡಿದ್ದರು. ಇದೀಗ ಒಂದು ಮಗು ಅದರ ಪೋಷಕರನ್ನು ಮತ್ತೆ ಸೇರಿಕೊಂಡಿದೆ ಎಂದು ವರದಿ ತಿಳಿಸಿದೆ.
ಅಗಸ್ಟ್ 19ರಂದು ದೇಶ ತೊರೆದು ಹೋಗಲು ಸಾವಿರಾರು ಮಂದಿ ಅಫ್ಘಾನ್ ನಿವಾಸಿಗಳು ವಿಮಾನ ನಿಲ್ದಾಣದಲ್ಲಿ ಸೇರಿದ್ದರು ಈ ವೇಳೆ 2 ತಿಂಗಳ ಮಗುವನ್ನು ಯುಎಸ್ ಸೈನಿಕರಿಗೆ ಹಸ್ತಾಂತರಿಸಿದ್ದರು. ಬಳಿಕ ವಿಮಾನ ಹತ್ತುವ ವೇಳೆ ಮಗು ಎಲ್ಲಿದೆ ಎನ್ನುವುದು ಅವರಿಗೆ ತಿಳಿದಿರಲಿಲ್ಲ. ಮಗು ಸಿಗದ ಕಾರಣ ಕುಟುಂಬ ಉಳಿದ ನಾಲ್ಕು ಮಕ್ಕಳೊಂದಿಗೆ ಯುಎಸ್ಗೆ ಸ್ಥಳಾಂತರಗೊಂಡಿದ್ದರು. ವಿಮಾನ ನಿಲ್ದಾಣದಲ್ಲಿದ್ದ ಮಗುವನ್ನು ಕಾಬೂಲ್ ಟ್ಯಾಕ್ಸಿ ಡ್ರೈವರ್ ಹಮೀದ್ ಸಫಿ ಎನ್ನುವವರು ಕರೆದೊಯ್ದು ರಕ್ಷಣೆ ಮಾಡಿದ್ದರು. ಕಳೆದ ನವೆಂಬರ್ನಲ್ಲಿ ಮಗುವಿನ ಬಗ್ಗೆ ತಂದೆ ತಾಯಿಗಳು ಮಾಹಿತಿ ಪಡೆದಿದ್ದರು. ಇದೀಗ 4 ತಿಂಗಳ ಬಳಿಕ ತಂದೆ ತಾಯಿಗಳಿಂದ ಬೇರ್ಪಟ್ಟ ಮಗು ಮತ್ತೆ ಹೆತ್ತವರ ಮಡಿಲು ಸೇರಿದೆ. ಸೊಹಾಲ್ ಅಹಮದಿ ಪೋಷಕರನ್ನು ಮತ್ತೆ ಸೇರಿದ ಮಗು.
ಮಗುವನ್ನು ಮತ್ತೆ ಹೆತ್ತವರು ಪಡೆದುಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೃದಯಸ್ಪರ್ಶಿ ಫೊಟೋವನ್ನು ನೋಡಿ ಟ್ವಿಟರ್ ಬಳಕೆದಾರರು ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವುದು ನಿಜವಾದ ಸಂತಸ ಎಂದಿದ್ದಾರೆ.
ಕಳೆದ ಅಗಸ್ಟ್ನಲ್ಲಿ ತಾಲಿಬಾನ್ ಉಗ್ರರು ಅಫ್ಘಾನಿಸ್ತಾವನ್ನು ಬಲವಂತದಿಂದ ವಶಪಡಿಸಿಕೊಂಡಿದ್ದರು. ಅಂದಿನಿಂದ ಇಂದಿನವರೆಗೂ ದೇಶದಲ್ಲಿ ಜನರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಅಫ್ಘಾನ್ ಅಧ್ಯಕ್ಷರಿಂದ ಹಿಡಿದು ಸಾವಿರಾರು ನಿವಾಸಿಗಳು ದೇಶದಿಂದ ಪಲಾಯನ ಮಾಡಿ ಜೀವ ಉಳಿಸಿಕೊಂಡಿದ್ದಾರೆ.
Published On - 9:51 am, Tue, 11 January 22