ಸರ್ಕಾರಿ ಅಧಿಕಾರಿಗಳು ಎಂದರೆ ಸಾಕು, ಹೆಚ್ಚಿನವರು ತಮ್ಮದೇ ಆದ ಹಮ್ಮುಬಿಮ್ಮು ರೂಢಿಸಿಕೊಂಡಿರುತ್ತಾರೆ. ಇನ್ನೂ ಕೆಲವರಂತೂ ಜನಸಾಮಾನ್ಯರ ಮೇಲೆ ತಮ್ಮ ಅಧಿಕಾರದ ದರ್ಪವನ್ನು ತೋರಿಸುತ್ತಿರುತ್ತಾರೆ. ಇಂತಹವರ ನಡುವೆ ಇಲ್ಲೊಬ್ಬರು ಅಧಿಕಾರಿ ಯಾವುದೇ ಹಮ್ಮಬಿಮ್ಮು ಇಲ್ಲದೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದಂತ ವಿದ್ಯಾರ್ಥಿಯನ್ನು ತಮ್ಮ ಕಛೇರಿಗೆ ಬರ ಹೇಳಿ, ಆಕೆಯನ್ನು ತಮಗೆ ಮೀಸಲಿರಿಸಿದ್ದ ಆಸನದಲ್ಲಿ ಕೂರಿಸಿ ಸನ್ಮಾನ ಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ವೈರಲ್ ಆಗಿದ್ದು, ಇವರ ಈ ಸರಳತೆ ಎಲ್ಲರ ಗಮನ ಸೆಳೆಯುತ್ತಿದೆ.
ಬಾಗಲಕೋಟೆ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶಶಿಧರ ಕುರೇರ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಕ್ಕೆ 590 (ಶೇ98.33) ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುವ ವಿದ್ಯಾರ್ಥಿನಿಯನ್ನು ತಮ್ಮ ಕಛೇರಿಗೆ ಕರೆಸಿ, ಆಕೆಯನ್ನು ತಮ್ಮ ಆಸನದಲ್ಲಿಯೇ ಕೂರಿಸಿ ಸನ್ಮಾನ ಮಾಡಿದ್ದಾರೆ. ಇವರ ಈ ಸರಳ ನಡೆಗೆ ಸಂಬಂಧಿಸಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
@royalbagalkot ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಬಾಗಲಕೋಟೆ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶಶಿಧರ ಕುರೇರ ಅವರು ದ್ವಿತೀಯ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ 600 ಕ್ಕೆ 590 ಅಂಕಗಳನ್ನು (ಶೇ98.33) ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ಐಶ್ವರ್ಯ ಕೌಜಲಗಿಗೆ ಸನ್ಮಾನಿಸಿದರು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಶಶಿಧರ ಕುರೇರ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುವ ವಿದ್ಯಾರ್ಥಿನಿಯನ್ನು ತಮ್ಮ ಆಸನದಲ್ಲಿ ಕೂರಿಸಿ ಆಕೆಗೆ ಶಾಲು ಹೊದಿಸಿ ಸನ್ಮಾನ ಮಾಡಿದಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: 123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ; ಹವಾಮಾನ ಇಲಾಖೆ ಎಚ್ಚರಿಕೆ
ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕಾಮೆಂಟ್ಸ್ ಮಾಡುವ ಮೂಲಕ ಅಧಿಕಾರಿಯ ಸರಳತೆಗೆ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ