Viral Video: ಬಿರು ಬೇಸಿಗೆಯಿಂದ ಪಾರಾಗಲು ಆಟೋ ಚಾಲಕನ ಮಸ್ತ್ ಐಡಿಯಾ; ವೈರಲ್ ಆಯ್ತು ವಿಡಿಯೋ
ಈಗಂತೂ ಬೇಸಿಗೆಯ ಬಿಸಿ ತೀವ್ರಗೊಂಡಿದೆ. ಜನರೆಲ್ಲರೂ ಬಿರು ಬೇಸಿಗೆಯಿಂದ ಬಸವಳಿದಿದ್ದಾರೆ. ಸುತ್ತಮುತ್ತಲಿನ ಕೆರೆ ಕುಂಟೆ, ತೆರೆದ ಬಾವಿಗಳಲ್ಲಿ ನೀರು ಬತ್ತಿದ್ದು, ವಾತಾವರಣದಲ್ಲಿ ಉಷ್ಣತೆಯ ಪ್ರಮಾಣ ಏರಿಕೆಯಾಗಿದೆ. ಇದರಿಂದ ಹೊಟ್ಟೆಪಾಡಿಗಾಗಿ ಬಿಸಿಲು, ಸೆಕೆಯೆನ್ನದೆ ಉರಿ ಬಿಸಿಲಿನಲ್ಲೂ ಕೆಲಸ ಮಾಡುವವರ ಪರಿಸ್ಥಿತಿ ಹೈರಾಣಾಗಿದೆ. ಹೀಗಿರುವಾಗ ಬಿರು ಬೇಸಿಗೆಯಿಂದ ಪಾರಾಗಲು ಇಲ್ಲೊಬ್ಬ ಆಟೋ ಚಾಲಕ ಮಸ್ತ್ ಐಡಿಯಾವನ್ನು ಕಂಡು ಹಿಡಿದಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಏಪ್ರಿಲ್, ಮೇ ತಿಂಗಳೆಂದರೆ ಬಿರು ಬೇಸಿಗೆಯ ಕಾಲ. ಅದರಲ್ಲೂ ಈ ಬಾರಿ ಜಾಸ್ತಿ ಎನ್ನಿಸುವಷ್ಟು ಉಷ್ಣತೆ ಉಂಟಾಗಿದೆ. ಇಂತಹ ಉರಿ ಬಿಸಿಲಿನ ಬೇಗೆಯಿಂದ ಪಾರಾಗುವುದೇ ಒಂದು ಸವಾಲಾಗಿಬಿಟ್ಟಿದೆ. ಈಗಾಗಲೇ ಅತ್ಯಂತ ಅಪಾಯದ ಮಟ್ಟ ತಲುಪಿರುವ ಉಷ್ಣತೆ ಇನ್ನೆಷ್ಟರ ಮಟ್ಟಿಗೆ ಏರಿಕೆಯಾಗಬಹುದು ಎಂಬ ಆತಂಕವೂ ಶುರುವಾಗಿದೆ. ಈ ಬಿಸಿಲ ಝಳಕ್ಕೆ ಬೇಸತ್ತು ಜನರು ದಿನದ 24 ಗಂಟೆಯೂ ಫ್ಯಾನ್, ಎಸಿಯ ಮೊರೆ ಹೋಗಿದ್ದಾರೆ. ಅಂತಹದರಲ್ಲಿ ಇಲ್ಲೊಬ್ಬ ಆಟೋ ಚಾಲಕ ಬಿರು ಬಿಸಿಲ ಶಾಖದಿಂದ ತಪ್ಪಿಸಿಕೊಳ್ಳಲು ಒಂದೊಳ್ಳೆ ಉಪಾಯ ಮಾಡಿದ್ದು, ತನ್ನ ಆಟೋವನ್ನು ಸಂಪೂರ್ಣವಾಗಿ ಗೋಣಿ ಚೀಲದಿಂದ ಕವರ್ ಮಾಡಿ ಅದರಲ್ಲಿ ಸಣ್ಣ ಸಣ್ಣ ಹುಲ್ಲುಗಳನ್ನು ಬೆಳೆಸಿದ್ದಾರೆ. ಈ ಮೂಲಕ ರಿಕ್ಷಾದಲ್ಲಿ ಬರುವ ಪ್ರಯಾಣಿಕರನ್ನು ತಂಪಾಗಿರಿಸಲು ಮುಂದಾಗಿದ್ದಾರೆ.
ಈ ವಿಡಿಯೋವನ್ನು ವಿನೋದ್ ಕುಮಾರ್ (@vinodkumar205) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಏನ್ ಕ್ರೇಜಿ ಐಡಿಯಾ ಗುರು, ಸೂರ್ಯನೇ ಒಮ್ಮೆ ಶಾಕ್ ಆಗ್ಬೇಕು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ವೈರಲ್ ವಿಡಿಯೋದಲ್ಲಿ ಬಿಸಿಲ ಬೇಗೆಯಿಂದ ಪಾರಾಗಲು ಆಟೋ ಚಾಲಕರೊಬ್ಬರು ತನ್ನ ಆಟೋಗೆ ರಕ್ಷಾ ಕವಚವನ್ನು ಅಳವಡಿಸಿಕೊಂಡಿರುವುದನ್ನು ಕಾಣಬಹುದು. ಆಟೋ ಚಾಲಕ ತನ್ನ ರಿಕ್ಷಾವನ್ನು ಸಂಪೂರ್ಣವಾಗಿ ಸೆಣಬಿನ ಗೋಣಿ ಚೀಲದಿಂದ ಕವರ್ ಮಾಡಿ ಅದರ ಮೇಲೆ ಸಣ್ಣ ಸಣ್ಣ ಹುಲ್ಲುಗಳನ್ನು ಬೆಳೆಸಿದ್ದಾರೆ. ಇದರಿಂದ ಸೂರ್ಯನ ಶಾಖ ಆಟೋದ ಒಳಗೆ ತಟ್ಟೋದೆ ಇಲ್ಲ, ಪ್ರಯಾಣಿಕರು ಈ ಆಟೋದ ಮೂಲಕ ತಣ್ಣಗಿ ವಾತಾವರಣದಲ್ಲಿ ಪ್ರಯಾಣಿಸಬಹುದಾಗಿದೆ.
ಇದನ್ನೂ ಓದಿ: ಸರಳತೆಯ ಸಾಹುಕಾರ, ವಿದ್ಯಾರ್ಥಿನಿಗೆ ತನ್ನ ಆಸನ ಬಿಟ್ಟುಕೊಟ್ಟ ಬಾಗಲಕೋಟೆ ಜಿ.ಪಂ ಸಿಇಒ
ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆಟೋ ಚಾಲಕನ ಮಸ್ತ್ ಐಡಿಯಾಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ