
ಶ್ವಾನಗಳ (Dog) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಯಾವುದು ಇಲ್ಲ. ಇವುಗಳು ಮನುಷ್ಯನ ಆಪ್ತ ಸ್ನೇಹಿತ ಅಂತಾನೇ ಹೇಳಬಹುದು. ಅದರಲ್ಲೂ ಪುಟ್ಟ ಮಕ್ಕಳೊಂದಿಗೆ ಶ್ವಾನಗಳು ತುಂಬಾನೇ ಆತ್ಮೀಯವಾಗಿರುತ್ತವೆ. ಆದರೆ ಮನೆಯಲ್ಲಿ ಸಾಕಿದ ಶ್ವಾನಗಳನ್ನು ಅಗಲಿದರೆ ಆ ನೋವನ್ನು ಸಹಿಸಿಕೊಳ್ಳಲು ಅಸಾಧ್ಯ. ಇಲ್ಲೊಬ್ಬ ಬೆಂಗಳೂರಿನ ಆಟೋ ಚಾಲಕನ (Bengaluru auto driver) ತನ್ನ ದಿನನಿತ್ಯದ ಕಾಯಕದ ನಡುವೆ ಅಗಲಿದ ಶ್ವಾನವನ್ನು ಪ್ರತಿಕ್ಷಣವೂ ನೆನಪಿಸಿಕೊಳ್ಳುತ್ತಾನೆ. ಆಟೋ ಚಾಲಕನೊಬ್ಬ ಅಗಲಿದ ಶ್ವಾನದ ಫೋಟೋವೊಂದನ್ನು ತನ್ನ ಆಟೋದಲ್ಲಿ ಇಟ್ಟುಕೊಂಡಿದ್ದು, ಪ್ರಯಾಣಿಕರೊಬ್ಬರು ಈ ಬಗ್ಗೆ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಹೃದಯಸ್ಪರ್ಶಿ ಪೋಸ್ಟ್ ನೆಟ್ಟಿಗರ ಹೃದಯ ಮುಟ್ಟಿದೆ.
ಇಂಡಿಯನ್ ಪೆಟ್ಸ್ (Indian Pets) ಎಂಬ ಸಬ್‌ರೆಡ್ಡಿಟ್‌ನಲ್ಲಿ ಹಂಚಿಕೊಂಡ ಪೋಸ್ಟ್‌ಗೆ ಪ್ರತಿದಿನ ತನ್ನ ಸತ್ತ ನಾಯಿಯ ಫೋಟೋವನ್ನು ಕೊಂಡೊಯ್ಯುವ ಆಟೋ ಚಾಲಕ ಶೀರ್ಷಿಕೆ ಬರೆಯಲಾಗಿದೆ. ಈ ಪೋಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಬೇಸಿಗೆ ಇಂಟರ್ನ್‌ಶಿಪ್ ಮಾಡುವಾಗ ಈ ಘಟನೆ ನಡೆದಿದೆ. ನಾನು ಆಟೋ ಬುಕ್ ಮಾಡಿದ್ದೆ, ಸ್ವಲ್ಪ ತಡವಾಗುತ್ತದೆ ಎಂದು ಚಾಲಕನಿಗೆ ಹೇಳಿದ್ದೆ. ನಾನು ಅಲ್ಲಿಗೆ ಹೋದಾಗ, ಅವರು ಬೀದಿ ನಾಯಿಗಳಿಗೆ ಬಿಸ್ಕೆಟ್ ಹಾಕುತ್ತಿದ್ದರು. ಅದು ಪಾರ್ಲೆ-ಜಿ ಆಗಿರಲಿಲ್ಲ. ಆದರೆ ಆಸಕ್ತಿದಾಯಕ ವಿಷಯವೆಂದರೆ, ಅವರು ತಮ್ಮ ಆಟೋದ ಮುಂಭಾಗದಲ್ಲಿ ನಾಯಿಯ ಫೋಟೋವನ್ನು ಇಟ್ಟಿದ್ದರು. ಅದು ಒಂದು ತಿಂಗಳ ಹಿಂದೆ ಅಗಲಿದ ಅವರ ಪ್ರೀತಿಯ ಸಾಕುಪ್ರಾಣಿಯಾಗಿತ್ತು. ಆ ಮುದ್ದಾದ ನಾಯಿಗೆ ಕೇವಲ ನಾಲ್ಕು ತಿಂಗಳು ವಯಸ್ಸಾಗಿತ್ತು ಎಂದಿದ್ದಾರೆ.
ನಾನೊಬ್ಬ ಶ್ವಾನ ಪ್ರೇಮಿಯಾಗಿರುವುದರಿಂದ ಆ ಕೆಲಸ ನನ್ನ ಮನಸ್ಸನ್ನು ಬಹಳವಾಗಿ ಮುಟ್ಟಿತು ಎಂದು ಪ್ರಯಾಣಿಕರು ಹೇಳಿದ್ದಾರೆ. ಪ್ರಯಾಣದ ಕೊನೆಯಲ್ಲಿ, ನಾಯಿಗಳಿಗೆ ಹೆಚ್ಚು ಬಿಸ್ಕೆಟ್ ಖರೀದಿಸಲು ನಾನು ಅವರಿಗೆ 100 ರೂಪಾಯಿ ಹೆಚ್ಚುವರಿಯಾಗಿ ನೀಡಿದೆ. ಮೊದಲು ಅವರು ಬೇಡ ಎಂದು ನಿರಾಕರಿಸಿದರು. ಆದರೆ ಅದು ಅವರಿಗಲ್ಲ, ಅವರು ಆಹಾರ ನೀಡುವ ಆ ಮುಗ್ಧ ಜೀವಿಗಳಿಗೆ ಎಂದು ನಾನು ಒತ್ತಾಯಿಸಬೇಕಾಯಿತು. ಕೊನೆಗೆ ಪ್ರಯಾಣಿಕರ ಒತ್ತಾಯಕ್ಕೆ ಕಟ್ಟುಬಿದ್ದುಹಣವನ್ನು ತೆಗೆದುಕೊಂಡರು. ಈ ಪ್ರಯಾಣ ಚಿಕ್ಕದಾಗಿದ್ದರೂ, ಆ ವ್ಯಕ್ತಿಯ ಒಳ್ಳೆತನವೂ ನನ್ನ ಮನಸ್ಸನ್ನು ಬಹಳವಾಗಿ ಸೆಳೆಯಿತು ಎಂದು ಬರೆದಿದ್ದಾರೆ.
ಇದನ್ನೂ ಓದಿ:Viral: ‘ಗೋ ಬ್ಯಾಕ್ ಹಿಂದಿ ವಾಲಾ ಆಟೋಸ್’; ಬೆಂಗಳೂರು ಆಟೋರಿಕ್ಷಾದ ಹಿಂದೆ ಬರೆದ ಬರಹ ವೈರಲ್
ಈ ಪೋಸ್ಟ್ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರೊಬ್ಬರು ಎಂತಹ ಒಳ್ಳೆಯ ವ್ಯಕ್ತಿ ಎಂದಿದ್ದಾರೆ. ಇನ್ನೊಬ್ಬರು ಇವತ್ತು ನಾನು ಇಂಟರ್ನೆಟ್ ನಲ್ಲಿ ನೋಡಿದ ಒಳ್ಳೆಯ ವಿಷಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಈ ಘಟನೆ ತುಂಬಾ ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Mon, 29 September 25