
ಚೀನಾ ದಂಪತಿಗೆ (China Investor Divorce) 15 ವರ್ಷಗಳ ನಂತರ ವಿಚ್ಛೇದನ ಸಿಕ್ಕಿರುವ ಘಟನೆಯೊಂದು ನಡೆದಿದೆ. ಉದ್ಯಮಿಯೊಬ್ಬರಿಗೆ ತಮ್ಮ ಮಾಜಿ ಪತ್ನಿಗೆ ಸುಮಾರು 536 ಮಿಲಿಯನ್ ಯುವಾನ್ (664.7 ಕೋಟಿ ರೂ.) ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಇದೀಗ ಈ ಸುದ್ದಿ ಭಾರೀ ವೈರಲ್ ಆಗಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, 63 ವರ್ಷದ ಝಾವೋ ಬಿಂಗ್ಕ್ಸಿಯಾನ್ ಎಂಬ ಚೀನಾ ಉದ್ಯಮಿ ತಮ್ಮ ಮಾಜಿ ಪತ್ನಿ ಲು ಜುವಾನ್ಗೆ ವಿಚ್ಛೇದನ ನೀಡಿದ್ದಾರೆ ಎಂದು ಹೇಳಿದೆ.
ಬೀಜಿಂಗ್ ನಂ. 3 ಇಂಟರ್ಮೀಡಿಯೇಟ್ ಪೀಪಲ್ಸ್ ಕೋರ್ಟ್ ಈ ಆದೇಶವನ್ನು ನೀಡಿದೆ. ಝಾವೋ ಬಿಂಗ್ಕ್ಸಿಯಾನ್ ಉದ್ಯಮಿಯಾಗಿರುವ ಕಾರಣ ಬೇರೆ ಬೇರೆ ಷೇರು ಮಾರುಕಟ್ಟೆಯಲ್ಲಿ ಸಾವಿರಾರು ಕೋಟಿ ಹೂಡಿಕೆಯನ್ನು ಮಾಡಿದ್ದಾರೆ. ಜತೆಗೆ ಅವರು ಹೂಡಿಕೆ ಕಂಪನಿಯನ್ನು ಕೂಡ ನಡೆಸುತ್ತಿದ್ದಾರೆ. ಈ ಕಂಪನಿಯಲ್ಲಿ ಬಂದ ಅರ್ಧ ಲಾಭಾಂಶವನ್ನು ಅವರ ಮಾಜಿ ಪತ್ನಿಗೆ ನೀಡಬೇಕು ಎಂದು ಕೋರ್ಟ್ ಹೇಳಿದೆ. ಇನ್ನು 15 ವರ್ಷಗಳ ನಂತರ ಈ ವಿಚ್ಛೇದನ ಪ್ರಕರಣಕ್ಕೆ ಕೋರ್ಟ್ ತೀರ್ಪು ನೀಡಿದೆ.
ಝಾವೋ ಮತ್ತು ಲು ಹೂಡಿಕೆ ಕ್ಷೇತ್ರದಲ್ಲಿ ಜಂಟಿ ಷೇರು ಹೊಂದಿದ್ದಾರೆ. ಇಬ್ಬರು ಕೂಡ ಷೇರು ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರು ಕೂಡ ಮಾಡಿದ್ದಾರೆ. ಝಾವೋ ಅವರು ಝಾಂಗ್‌ಜೆಂಗ್ ವಾನ್ರಾಂಗ್ ಕಂಪನಿಯ ಅಧ್ಯಕ್ಷರಾಗಿದ್ದಾರೆ. 1980 ರ ದಶಕದಲ್ಲಿ ಶಾಂಘೈ ಜಿಯಾವೊ ಟಾಂಗ್ ವಿಶ್ವವಿದ್ಯಾಲಯದಲ್ಲಿ ಹಣಕಾಸಿನಲ್ಲಿ ಸ್ನಾತಕೋತ್ತರ ಪದವಿ (Master’s degree in finance) ಪಡೆದು, ನಂತರ 1986 ರಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ಲು ಅವರನ್ನು ಭೇಟಿಯಾಗಿದ್ದಾರೆ. ಭೇಟಿಯಾದ ಎರಡು ವರ್ಷಗಳ ನಂತರ ಇಬ್ಬರು ಕೂಡ ಮದುವೆ ಮಾಡಿಕೊಂಡಿದ್ದಾರೆ. ಲು ಒಂದು ಶ್ರೀಮಂತ ಹಾಗೂ ಉದ್ಯಮಿ ಕುಟುಂಬದಲ್ಲಿ ಬೆಳೆದವರು. ಅವರ ಅಜ್ಜ 1949 ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಸ್ಥಾಪನೆಯಾಗುವ ಮೊದಲೇ ಷೇರು ವ್ಯಾಪಾರ ಮಾಡುತ್ತಿದ್ದರು. ಅವರ ಮಾರ್ಗದರ್ಶದಂತೆ ದಂಪತಿ 1990 ರ ದಶಕದ ಆರಂಭದಲ್ಲಿ ಷೇರು ವ್ಯಾಪಾರ ಮಾಡಿ ಲಾಭ ಗಳಿಸಿದ್ದಾರೆ.
ಅವರ ಷೇರು ಮಾರುಕಟ್ಟೆ ಬೆಳೆಯುತ್ತಿದ್ದಂತೆ ಇಬ್ಬರ ಸೇರಿ ಝೊಂಗ್‌ಜೆಂಗ್ ವಾನ್ರಾಂಗ್ ಕಂಪನಿ ಸ್ಥಾಪನೆ ಮಾಡಿದ್ರು, ಕಂಪನಿಯಲ್ಲಿ ಲು ಹಣಕಾಸು ವಿಭಾಗ ನೋಡಿಕೊಳ್ಳುತ್ತಿದ್ದರೆ, ಝಾವೋ ಬಂಡವಾಳ ವಿಭಾಗವನ್ನು ನಿರ್ವಹಿಸುತ್ತಿದ್ದರು. ಕಂಪನಿಯು ಹಾಂಗ್ ಕಾಂಗ್, ಶಾಂಘೈ ಮತ್ತು ಶೆನ್‌ಜೆನ್ಗೂ ವಿಸ್ತರಿಸಿತ್ತು. ಈ ಬಗ್ಗೆ ಪುಸ್ತಕವೊಂದನ್ನು ಕೂಡ ಝಾವೋ ಪ್ರಕಟಿಸಿದ್ದಾರೆ. ಈ ಪುಸ್ತಕ ಆ ವರ್ಷ ಚೀನಾದಲ್ಲಿ ಹೆಚ್ಚು ಮಾರಾಟವಾದ ಟಾಪ್ -೧೦ ಪುಸ್ತಕಗಳಲ್ಲಿ ಒಂದಾಯಿತು. ಮಾಧ್ಯಮಗಳು ಇವರನ್ನು ಚೀನಾದ ಬಫೆಟ್ (ಜಾಗತಿಕ ಮಾರುಕಟ್ಟೆಯ ದಿಗ್ಗಜ ಹೂಡಿಕೆದಾರ ವಾರೆನ್ ಬಫೆಟ್) ಎಂದು ಕರೆದಿದ್ದಾರೆ.
ಇದನ್ನೂ ಓದಿ: ಪತ್ನಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡದ ಫ್ಯಾಮಿಲಿ ಸದಸ್ಯರಿಗೆ ವಾಟ್ಸಪ್ ಗ್ರೂಪ್ನಲ್ಲಿ ಈ ವ್ಯಕ್ತಿ ಹೇಳಿದ್ದೇನು ಗೊತ್ತಾ?
ಇದೇ ವೇಳೆ ಝಾವೋ ಮತ್ತು ಲು ನಡುವೆ ಕೌಟುಂಬಿಕ ಕಲಹಗಳು ಶುರುವಾಯಿತು. ಝಾವೋ ವಿರುದ್ಧ ಕೌಟುಂಬಿಕ ಹಿಂಸಾಚಾರದ ಆರೋಪ ಹೊರಿಸಿ, ಆಸ್ತಿಯನ್ನು ನ್ಯಾಯಯುತವಾಗಿ ವಿಭಜಿಸುವಂತೆ ಲು 2010 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಝಾವೋ ಹಲವಾರು ಬಾರಿ ವಿಚಾರಣೆ ಹಾಜರಾಗುತ್ತಿರಲಿಲ್ಲ. ಜತೆಗೆ ಕಂಪನಿಯ ಆಸ್ತಿಯನ್ನು ವಶಪಡಿಸಿಕೊಂಡು ಲು ಅವರ ಮೇಲೆ ಕಳ್ಳತನ ಆರೋಪವನ್ನು ಹಾಕಿದ್ದರು. ಲು ಅವರನ್ನು 37 ದಿನಗಳ ಕಾಲ ಬಂಧಿಸಲಾಯಿತು. ನಂತರ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರನ್ನು ಬಿಡುಗಡೆ ಮಾಡಲಾಯಿತು. ನಂತರ ಪ್ರಕರಣವನ್ನು 2023 ರಲ್ಲಿ ಮತ್ತೆ ವಿಚಾರಣೆಗೆ ಒಳಪಡಿಸಲಾಯಿತು. ಇದೀಗ ಅವರಿಗೆ ವಿಚ್ಛೇದನ ಪಡೆಯಲು ಅನುಮತಿಯನ್ನು ಕೋರ್ಟ್ ನೀಡಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ