ಅನಾಥ ಮಕ್ಕಳನ್ನು ದತ್ತು ಪಡೆಯುವುದು ಅಥವಾ ಮಕ್ಕಳಿಲ್ಲದವರು ಮಕ್ಕಳನ್ನು ದತ್ತು ಪಡೆಯುವುದು ಸಾಮಾನ್ಯ. ಆದರೆ ಅದಾಗಲೇ ಒಂದು ಮಗುವಿರುವಾಗ ವಿದೇಶಿ ದಂಪತಿಯೊಂದು ಭಾರತದ ಮಗುವೊಂದನ್ನು ದತ್ತು ಪಡೆದಿದೆ. ಅದು ಶ್ರವಣ ದೋಷವುಳ್ಳ ಮಗುವನ್ನು ದತ್ತು ಪಡೆಯುವ ಮೂಲಕ ಇದೀಗ ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ. ಶೇನ್ ಮೈಕೆಲ್ ಮೈಲಿಯಸ್ ಮತ್ತು ಜೊಹೊನ್ನಾ ಜೋ ಮೈಲಿಯಸ್ ಎನ್ನುವ ದಂಪತಿ ಭಾರತದಲ್ಲಿದ್ದ ಶ್ರವಣದೋಷವುಳ್ಳ ಮಗುವನ್ನು ದತ್ತು (Adopt) ಪಡೆದಿದ್ದಾರೆ. ಈ ಕುರಿತು ಹ್ಯೂಮನ್ ಆಪ್ ಬಾಂಬೆ (Humans of Bombay) ಎಂಬ ಇನ್ಸ್ಟಾಗ್ರಾಮ್ (Insagram) ಖಾತೆ ಹಂಚಿಕೊಂಡಿದೆ.
ದಂಪತಿಗೆ ಅದಾಗಲೇ ಒಬ್ಬಳು ಮಗಳಿದ್ದಾಳೆ. ಆದರೂ ಭಾರತದ ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದರು. ಹೀಗಾಗಿ ಏಜೆನ್ಸಿಗಳ ಮೂಲಕ ಸಂಪರ್ಕ ಸಾಧಿಸಿ 2 ವರ್ಷಗಳ ನಂತರ ನೈನಾ ಎನ್ನುವ ಮಗುವನ್ನು ದತ್ತು ಪಡೆದಿದ್ದಾರೆ. ಎರಡು ವರ್ಷಗಳ ಬಳಿಕ ಭಾರತಕ್ಕೆ ಬಂದು ಮಗುವನ್ನು ನೋಡಿದಾಗ ದಂಪತಿ ಖುಷಿಯಿಂದ ಕಣ್ಣೀರು ಹಾಕಿರುವುದನ್ನು ಕಾಣಬಹುದು. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಇದರ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಕುಟುಂಬವಾಗಿರಲು ಒಂದೇ ಡಿಎನ್ಎಯನ್ನು ಹೊಂದಿರಬೇಕಿಲ್ಲ ಎಂದು ಕ್ಯಾಪ್ಷನ್ ನೀಡಲಾಗಿದೆ. ಸದ್ಯ ನೈನಾ ತನ್ನ ದತ್ತು ಪಡೆದ ತಂದೆ ತಾಯಿಗಳೊಂದಿಗೆ ಇದ್ದಾಳೆ. ನಮ್ಮ ಹಿರಿಯ ಮಗಳು ಕೂಡ ನೈನಾಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ ಎಂದು ದಂಪತಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, 31 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ವಿಡಿಯೋ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಲ್ಲಾ ವಿರೋಧಗಳನ್ನು ಎದುರಿಸಿ, ಕಟ್ಟುಪಾಡುಗಳನ್ನು ದೂಡಿ ಶ್ರವಣ ದೋಷವುಳ್ಳ ಮಗುವನ್ನು ದತ್ತು ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
Published On - 4:01 pm, Tue, 25 January 22