ಇತ್ತೀಚಿನ ದಿನಗಳಲ್ಲಿ ಡಾನ್ಸ್ ರೀಲ್ಸ್ ಮಾತ್ರವಲ್ಲದೆ ಸ್ಟಂಟಿಂಗ್ ಕುರಿತ ರೀಲ್ಸ್ ವಿಡಿಯೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಕೆಲವೊಬ್ಬ ಯುವಕರು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂದು ಬೈಕ್, ಸ್ಕೂಟಿಗಳಲ್ಲಿ ಅಪಾಯಕಾರಿ ಸ್ಟಂಟ್ ಮಾಡಿ, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ. ಇವರ ಹುಚ್ಚಾಟಕ್ಕೆ ಹಲವರು ರಸ್ತೆಯಲ್ಲಿ ವಾಹನ ಚಲಾಯಿಸಿಕೊಂಡು ಹೋಗಲು ಭಯಪಡುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ಆಸಾಮಿ ಬೈಕ್ ಸ್ಕೂಟಿ ಬಿಟ್ಟು ಚಲಿಸುತ್ತಿರುವ ಆಟೋದಲ್ಲಿ ನಿಂತು ಸ್ಟಂಟಿಂಗ್ ಮಾಡಿ, ರಸ್ತೆಯಲ್ಲಿ ತನ್ನ ಪಾಡಿಗೆ ಸೈಕಲಿನಲ್ಲಿ ಹೋಗುತ್ತಿದ್ದಂತ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದಾನೆ, ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ರಸ್ತೆಗುರುಳಿ ಬಿದ್ದಿದ್ದಾನೆ. ಇಂತಹ ಬುದ್ಧಿಗೆಟ್ಟವರ ಹುಚ್ಚಾಟಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂದು ಆ ಯುವಕನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ದೆಹಲಿಯ ಸಿಗ್ನೇಚರ್ ಬ್ರಿಡ್ಜ್ ನಲ್ಲಿ ನಡೆದಿದ್ದು, ಯುವಕನೊಬ್ಬ ಚಲಿಸುತ್ತಿರುವ ಆಟೋದಲ್ಲಿ ನಿಂತುಕೊಂಡು ಸ್ಟಂಟ್ ಮಾಡುತ್ತಾ ಹುಚ್ಚಾಟ ಮೆರೆದಿದ್ದಾನೆ, ಹೀಗೆ ಸ್ಟಂಟ್ ಮಾಡುತ್ತಿರುವಾಗ ಆ ಯುವಕ ಸೈಕಲ್ ಸವಾರನೊಬ್ಬನಿಗೆ ಡಿಕ್ಕಿ ಹೊಡೆದಿದ್ದಾನೆ, ಆತನ ಹೊಡೆತಕ್ಕೆ ಸೈಕಲ್ ಸವಾರ ರಸ್ತೆಗುರುಳಿ ಬೀಳುವಂತಹ ವಿಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಟಿಪಿಆರ್ ವೃತ್ತದ ಟ್ರಾಫಿಕ್ ಸಿಬ್ಬಂದಿ, ವಿಡಿಯೋದಲ್ಲಿ ಕಂಡುಬಂದಂತಹ ಆಟೋರಿಕ್ಷಾವನ್ನು ಟ್ರ್ಯಾಕ್ ಮಾಡಿ, ರಿಕ್ಷಾ ಚಾಲಕ ಗಾಜಿಯಾಬಾದಿನ ಶಿವ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಮತ್ತು ಆತ ಡ್ರೈವಿಂಗ್ ಲೈಸನ್ಸ್ ಇಲ್ಲದೆ, ಅಪಾಯಕಾರಿಯಾಗಿ ವಾಹನ ಚಲಾಯಿಸಿದ್ದಕ್ಕೆ ದಂಡ ವಿಧಿಸಿದ್ದಾರೆ. ಇದಲ್ಲದೆ ಆಟೋರಿಕ್ಷಾವನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ. ಆದರೆ ಸ್ಟಂಟ್ ಮಾಡಿದ ವ್ಯಕ್ತಿ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಇಂತಹವರನ್ನು ಸುಮ್ಮನೆ ಬಿಡಬಾರದು ಈ ರೀತಿ ಹುಚ್ಚಾಟ ಮೆರೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೃಷ್ಟವಶಾತ್ ಸೈಕಲಿನಿಂದ ಬಿದ್ದಂತಹ ವ್ಯಕ್ತಿಗೆ ದೊಡ್ಡ ಮಟ್ಟದ ಗಾಯಗಳೇನು ಆಗಿಲ್ಲ.
ಇದನ್ನೂ ಓದಿ: ಗಾಂಜಾ ನಶೆಯಲ್ಲಿ ವಿದ್ಯಾರ್ಥಿಗಳು: ಆಯತಪ್ಪಿ ರೈಲ್ವೆ ಹಳಿ ಮೇಲೆ ಬಿದ್ದ ದೇಶದ ಭವಿಷ್ಯಗಳು
ಈ ವೈರಲ್ ವಿಡಿಯೋವನ್ನು @abhaymotoupdates ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ 7.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಲವರು ಯುವಕನ ಹುಚ್ಚಾಟವನ್ನು ಕಂಡು ಗರಂ ಆಗಿದ್ದಾರೆ. ಒಬ್ಬ ಬಳಕೆದಾರರು ʼಮೊದಲು ಆ ಆಟೋರಿಕ್ಷಾ ಚಾಲಕನ ವಿರುದ್ಧ ದೂರು ದಾಖಲು ಮಾಡಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಂಡು ಬಂಧಿಸಬೇಕುʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: