ಇವ್ರು ಆಫೀಸಿನಲ್ಲಿ ಮ್ಯಾನೇಜರ್‌ಗೆ ಬಕೆಟ್ ಹಿಡಿತಾರೇ, ಇವ್ನ್ಯಾರೋ ದೊಡ್ಡ ಬಕೆಟ್ ನನ್ ಮಗ, ಇವನಂತೂ ಸಿಕ್ಕಾಪಟ್ಟೆ ಬಕೆಟ್ ಹಿಡಿತಾನಪ್ಪಾ ಎಂಬ ಮಾತನ್ನು ಹೇಳುವುದನ್ನು ಹಾಗೂ ನಿನ್ ಕೆಲಸ ಆಗ್ಬೇಕಂದ್ರೆ ಬಕೆಟ್ ಹಿಡಿಯಪ್ಪಾ ಅನ್ನೋದನ್ನು ನೀವು ಕೇಳಿರುತ್ತೀರಿ ಅಲ್ವಾ. ಹಾಗೇನೇ ಈ ಬಕೆಟ್ ಸಂಸ್ಕೃತಿಯನ್ನು ಕಾಲೇಜು, ಕೆಲಸದ ಸ್ಥಳಗಳಲ್ಲಿ ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಸಾಮಾನ್ಯವಾಗಿ ತನ್ನ ಬೇಳೆ ಬೇಯಿಸಲು ಇತರರನ್ನು ನೈಸ್ ಮಾಡುವುದೇ ಬಕೆಟ್ ಹಿಡಿಯೋದು ಅಂತ ಹೇಳ್ತಾರೆ. ಆದ್ರೆ ನಿಖರವಾಗಿ ಈ ಬಕೆಟ್ ಹಿಡಿಯೋದು ಅಂದ್ರೇನು? ಈ ಪದದ ಅರ್ಥವೇನು ಗೊತ್ತಾ? ಈ ಬಗ್ಗೆ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಸೋಷಿಯಲ್ ಮೀಡಿಯಾದಲ್ಲಿ ಒಂದೊಳ್ಳೆ ಮಾಹಿತಿಯನ್ನು ನೀಡಿದ್ದಾರೆ.
ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಏನು ಶ್ರಮ ಪಡದೆ ಇನ್ನೊಬ್ಬರನ್ನು ನೈಸ್ ಮಾಡುವುದೇ ಬಕೆಟ್ ಹಿಡಿಯೋದು ಅಂತಾ. ಆದ್ರೆ ಇದಕ್ಕೆ ʼಬಕೆಟ್ ಹಿಡಿಯೋದುʼ ಅಂತಾನೇ ಯಾಕ್ ಅಂತಾರೇ, ಈ ಪದ ಹೇಗೆ ಬಂತು ಎಂಬುದನ್ನು ಇತಿಹಾಸಕಾರ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ವಿವರಣೆಯನ್ನು ನೀಡಿದ್ದಾರೆ.
“ಬ್ರಿಟೀಷರ ಕಾಲದಲ್ಲಿ ಅವರುಗಳು ಮೀಟಿಂಗ್ಸ್ ಮಾಡುತ್ತಾ ಅಲ್ಲಿಲ್ಲಿ ಓಡುತ್ತಾ ಬರುತ್ತಿದ್ದರು. ಆ ಕಾಲದಲ್ಲಿ ಬೇರೆ ಶೌಚಾಲಯದ ಸೌಲಭ್ಯ ಕೂಡಾ ಇರ್ಲಿಲ್ಲ. ಆಗ ಅವರು ಮೂತ್ರ ವಿಸರ್ಜನೆ ಮಾಡ್ಬೇಕಂದ್ರೆ ತಮ್ಮ ಸಹಾಯಕ ಕೈಯಲ್ಲಿ ಹಿಡಿದಿರುವ ಬಕೆಟ್‌ಗೆ ಮೂತ್ರ ವಿಸರ್ಜನೆ ಮಾಡ್ತಿದ್ರು. ನಂತರ ಆ ಸಹಾಯಕನೇ ಅದನ್ನು ಚೆಲ್ಲಿ ಬರುತ್ತಿದ್ದನು. ಆ ಸಹಾಯಕ ಯಾವಾಗ್ಲೂ ಬಕೆಟ್ ಹಿಡಿದುಕೊಂಡೇ ಬ್ರಿಟೀಷರ ಹಿಂದೆ ಓಡಾಡ್ತಿದ್ದ. ಅವನಿಗೆ ವಿಶೇಷವಾದ ಸೌಲಭ್ಯಗಳು ಕೂಡಾ ಇರ್ತಿದ್ದವು. ಹಾಗಾಗಿ ಕೆಲಸ ಆಗ್ಬೇಕು ಅಂದ್ರೆ ಹೀಗೆಲ್ಲಾ ಬಕೆಟ್ ಹಿಡಿಯೋದಕ್ಕೂ ತಯಾರಿರೋನು ಅಂತ ಅರ್ಥ, ಅದಕ್ಕಾಗಿಯೇ ಈಗೆಲ್ಲಾ ಈ ಪದನಾ ಉಪಯೋಗಿಸ್ತಿದ್ದೇವೆ” ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ:ಮನುಷ್ಯರನ್ನು ನೀರಿಗಿಳಿಯುವಂತೆ ಮಾಡಲು ಸಾವಿನ ನಾಟಕವಾಡುವ ಖತರ್ನಾಕ್ ಮೊಸಳೆಗಳು; ವಿಡಿಯೋ ವೈರಲ್
dharmendra5294 ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಬಕೆಟ್ ವಿಷಯ ಇವತ್ತು ಅರ್ಥವಾಯಿತು ಗುರುಗಳೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದರ ಹಿಂದೆ ಇಷ್ಟೊಂದು ಆಳವಾದ ಅರ್ಥವಿದೆ ಎಂಬುದುವು ಗೊತ್ತಿರಲಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಮ್ ಕಂಪೆನಿಯಲ್ಲಿ ಮ್ಯಾನೇಜರ್‌ಗೆ ತುಂಬಾ ಜನ ಬಕೆಟ್ ಹಿಡಿತಾರೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:14 pm, Fri, 10 January 25