ನಿಜಾಮ್ ಕಾಲೇಜಿನಲ್ಲಿ ಪದವಿ ಮುಗಿಸಿದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ! ರೈಲ್ವೇ ಎಸ್‌ಐ ಎಂದು ಹೇಳಿಕೊಳ್ಳುತ್ತಿರುವ ಯುವತಿ ಮಾಳವಿಕಾ ಬಂಡಾರ ಮರಾಮೋಸದಾಟವನ್ನು ರೈಲ್ವೆ ಪೊಲೀಸರು ಬಯಲಿಗೆಳೆದಿದ್ದಾರೆ. ನಾರ್ಕೆಟ್ ಪಲ್ಲಿಯ ಮಾಳವಿಕಾ ಎಂಬ ಯುವತಿ ನಿಜಾಮ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. 2018 ರಲ್ಲಿ RPF Sc ಪರೀಕ್ಷೆಯನ್ನು ಬರೆದಿದ್ದಾರೆ. ಆದರೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದರೂ ದೃಷ್ಟಿ ಮಾಪನ ವೈದ್ಯಕೀಯ ಪರೀಕ್ಷೆಯಲ್ಲಿ ಅನರ್ಹಳಾಗಿದ್ದಳು.
ಆದರೆ ಹೇಗಾದರೂ ಮಾಡಿ ರೈಲ್ವೇ ಪೊಲೀಸ್ ಆಗಬೇಕೆಂದುಕೊಂಡಿದ್ದ ಮಾಳವಿಕಾ ಖಾಕಿ ಯೂನಿಫಾರಂ ಧರಿಸಿಯೇಬಿಟ್ಟರು. ನಾರ್ಕೆಟ್‌ಪಲ್ಲಿ ಗ್ರಾಮದಲ್ಲಿ ಆರ್‌ಪಿಎಫ್ ಎಸ್‌ಐ ಆಗಿ ಸಂಚರಿಸಲು ಶುರು ಮಾಡಿದ್ದರು. ತಾನು ಶಂಕರಪಲ್ಲಿ ಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಎಲ್ಲರನ್ನೂ ನಂಬಿಸಿದ್ದಳು.
ಸಮವಸ್ತ್ರದಲ್ಲಿರುವ ತನ್ನ ಫೋಟೋಗಳನ್ನು ತನ್ನ ಪ್ರೊಫೈಲ್ ಚಿತ್ರಗಳು ಮತ್ತು ಸ್ಟೇಟಸ್‌ಗಳಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರಿಂದ ಆ ಯುವತಿಯ ಅನೇಕ ಪರಿಚಯಸ್ಥರು ಆಕೆಗೆ ಕೆಲಸ ಸಿಕ್ಕಿದೆ ಎಂದೇ ನಂಬಿದ್ದರು. ಮುಂದೆ… ಆಕೆಗೆ ಮದುವೆಯ ಪ್ರಸ್ತಾಪ ಬಂದಾಗ.. ಮಾಳವಿಕಾ ವರನನ್ನು ನೋಡಲು ಸಮವಸ್ತ್ರದಲ್ಲಿಯೇ ಹೋಗಿದ್ದಳು! ಇಲ್ಲಿಯೇ ನಿಜವಾದ ಕತೆ ಎಳೆ ಬಿಚ್ಚಿಕೊಂಡಿದ್ದು…
ಮಾಳವಿಕಾ ಹುಡುಗಿ ನೋಡುವ ಶಾಸ್ತ್ರಕ್ಕೂ ಸಮವಸ್ತ್ರದಲ್ಲೇ ಬಂದಾಗ ವರನ ಕಡೆಯವರು ಬೆಚ್ಚಿಬಿದ್ದಿದ್ದಾರೆ. ಯುವಕನ ಸಂಬಂಧಿಕರು ಮಾಳವಿಕಾ ವರ್ತನೆ ಬಗ್ಗೆ ತಮಗೆ ತಿಳಿದ ರೈಲ್ವೇ ಅಧಿಕಾರಿಗಳ ಮೂಲಕ ವಿಚಾರಣೆ ನಡೆಸಿದ್ದಾರೆ. ಮಾಳವಿಕಾ ಎಂಬುವವರು ಯಾರೂ ರೈಲ್ವೇ ಎಸ್ಐ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಪೊಲೀಸರನ್ನು ಸಂಪರ್ಕಿಸಿ ಸತ್ಯವೇನು ಎಂದು ಕೇಳಿದ್ದಾರೆ.
ಸ್ಥಳಕ್ಕೆ ಬಂದ ನಲ್ಗೊಂಡ ರೈಲ್ವೇ ಪೊಲೀಸರು ಮಾಳವಿಕಾಳನ್ನು ಬಂಧಿಸಿದ್ದಾರೆ. ಆದರೆ ತಾನು ಎಸ್‌ಐ ಆಗಲು ಸಾಧ್ಯವಾಗಲಿಲ್ಲ ಎಂದು ಪೋಷಕರು ಆತಂಕಗೊಂಡಿದ್ದು, ಅದಕ್ಕಾಗಿಯೇ ನಕಲಿ ಎಸ್‌ಐ ವೇಷ ತೊಟ್ಟಿರುವುದಾಗಿ ಮಾಳವಿಕಾ ತನ್ನ ಪ್ರವರವನ್ನು ಪೊಲೀಸರಿಗೆ ತಿಳಿಸಿದ್ದಾಳೆ.
ರೈಲ್ವೇ ಎಸ್‌ಐ ಆಗಿ ಮಾಳವಿಕಾ ಇನ್‌ಸ್ಟಾಗ್ರಾಮ್‌ನಲ್ಲಿರುವ ರೀಲ್‌ಗಳು ವೈರಲ್ ಆಗಿವೆ. ಕಳೆದ ಒಂದು ವರ್ಷದಿಂದ ಮಾಳವಿಕಾ ನಕಲಿ ಎಸ್‌ಐ ಆಗಿ ಚಲಾವಣೆಯಲ್ಲಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಮಾಳವಿಕಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್‌ಗೆ ಕಳುಹಿಸಿದ್ದಾರೆ.