ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ನೆಟ್ಟಿಗರನ್ನು ಸೆಳೆಯುವ ವೀಡಿಯೋಗಳು ಆಗಾಗ ಹರಿದಾಡುತ್ತಿರುತ್ತದೆ. ಈ ವರ್ಷ ಮುಗಿಯುತ್ತಿದೆ. ಈಗಾಗಲೇ ಹಲವು ವಿಭಿನ್ನ, ವಿಚಿತ್ರ ಖಾದ್ಯಗಳು ಇಂಟೆರ್ನೆಟ್ನಲ್ಲಿ ವೈರಲ್ ಆಗಿ ನೋಡುಗರನ್ನು ಆಶ್ಚರ್ಯಚಕಿತಗೊಳಿಸಿದೆ. ಉದಾಹರಣೆಗೆ ಮಿರಿಂಡಾ ಮಿಶ್ರಿತ ಗೋಲಗಪ್ಪಾ, ಓರಿಯೋ ಬಿಸ್ಕತ್ತಿನ ಪಕೋಡ ಹೀಗೆ ಹತ್ತಾರು ಬಗೆಯ ಖಾದ್ಯಗಳ ನಡುವೆ ಇದೀಗ ದೆಹಲಿಯ ಫುಡ್ ಬ್ಲಾಗರ್ ಒಬ್ಬರು ಪಾರ್ಲೆ ಜಿ ಬಿಸ್ಕತ್ತಿನ ಬರ್ಫಿ ತಯಾರಿಸಿ ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ದೆಹಲಿ ಮೂಲದ ಫುಡ್ ಬ್ಲಾಗರ್ ಕರಣ್ ಸಿಂಘಾಲ್ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದೇಸಿ ತುಪ್ಪ ಬಳಸಿ ಪಾರ್ಲೆ ಜಿ ಬಿಸ್ಕತ್ ಬರ್ಫಿ ತಯಾರಿಸಿದ ವೀಡಿಯೋ ಹಂಚಿಕೊಂಡಿದ್ದಾರೆ. ಐದಾರು ಪಾರ್ಲೆ ಜಿ ಬಿಸ್ಕತ್ತುಗಳು. ದೇಸಿ ಹಸುವಿನ ತುಪ್ಪ ಸಕ್ಕರೆ, ಹಾಲು, ಮತ್ತು ಡ್ರೈ ಫ್ರೂಟ್ಸ್ ಗಳನ್ನು ಹಾಕಿ ರುಚಿಯಾದ ಪಾರ್ಲೆ ಜಿ ಬರ್ಫಿ ತಯಾರಿಸಿದ್ದಾರೆ. ವೀಡಿಯೋದಲ್ಲಿ ಕರಣ್ ಅವರು ಮೊದಲು ದೇಸಿ ತುಪ್ಪದಲ್ಲಿ ಬಿಸ್ಕತ್ತುಗಳನ್ನು ಚೆನ್ನಾಗಿ ಹುರಿಯುತ್ತಾರೆ. ಬಳಿಕ ಅದನ್ನು ರುಬ್ಬಿಕೊಂಡು ಅದಕ್ಕೆ ಸಕ್ಕರೆ, ಹಾಲನ್ನು ಹಾಕಿ ಬರ್ಫಿ ಹದ ಬರುವವರೆಗೆ ಪಾತ್ರೆಯನ್ನು ಒಲೆಯ ಮೇಲಿರಿಸಿ ತಿರುವುತ್ತಾರೆ. ನಂತರ ಹಲ್ವಾ ರೀತಿಯಲ್ಲಿ ಬಟ್ಟಲಿಗೆ ಹಾಕಿ ಮೆಲಿನಿಂದ ಡ್ರೈ ಫ್ರುಟ್ಸ್ ಮೂಲಕ ಅಲಂಕರಿಸುತ್ತಾರೆ.
ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರ ಮನಗೆದ್ದಿದೆ. 71 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿರುವ ವೀಡಿಯೋ ಸದ್ಯ ಟ್ರೆಂಡ್ ಆಗಿದೆ. ಹಲವರು ಪಾರ್ಲೆ ಜಿ ಬಗ್ಗೆ ಬರ್ಫಿ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದರೆ ಇನ್ನೂ ಕೆಲವರು ಪಾರ್ಲೆ ಜಿ ಬರ್ಫಿ ತಯಾರಿಸಲು ಉತ್ಸುಕರಾಗಿದ್ದಾರೆ.
Published On - 9:27 am, Tue, 21 December 21