Google Doodle: ನಾಸಾದ ಜೇಮ್ಸ್​ ವೆಬ್​ ಬಾಹ್ಯಾಕಾಶ ಟೆಲಿಸ್ಕೋಪ್​ ತೆಗೆದ ಫೋಟೊಗೆ ಗೂಗಲ್ ಡೂಡಲ್ ಗೌರವ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 13, 2022 | 9:00 AM

James Webb Space Telescope: ನಾವು ಈ ಸ್ಥಿತಿಗೆ ಹೇಗೆ ಬಂದೆವು? ಈ ಬ್ರಹ್ಮಾಂಡದಲ್ಲಿ ನಾವಷ್ಟೇ ಇರುವುದೇ ಎನ್ನುವುದೂ ಸೇರಿದಂತೆ ಹಲವು ಪ್ರಶ್ನೆಗಳಿಗೆ ಈ ಟೆಲಿಸ್ಕೋಪ್ ಮುಂದಿನ ದಿನಗಳಲ್ಲಿ ಉತ್ತರ ಒದಗಿಸುವ ಸಾಧ್ಯತೆಯಿದೆ.

Google Doodle: ನಾಸಾದ ಜೇಮ್ಸ್​ ವೆಬ್​ ಬಾಹ್ಯಾಕಾಶ ಟೆಲಿಸ್ಕೋಪ್​ ತೆಗೆದ ಫೋಟೊಗೆ ಗೂಗಲ್ ಡೂಡಲ್ ಗೌರವ
ಗೂಗಲ್ ಡೂಡಲ್
Follow us on

Google Doodle Today: ಜಗತ್ತಿನ ಜನಪ್ರಿಯ ಸರ್ಚ್​ ಎಂಜಿನ್ ಗೂಗಲ್ ತನ್ನ ಡೂಡಲ್​ಗಳ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತದೆ. ಕೆಲ ಮಹತ್ವದ ವಿದ್ಯಮಾನಗಳನ್ನು ಸರಳವಾಗಿ ಜನರ ಗಮನಕ್ಕೆ ತರುವುದು ಗೂಗಲ್ ಡೂಡಲ್​ನ ವೈಶಿಷ್ಟ್ಯ. ಇಂದು (ಜುಲೈ 13) ಪ್ರಕಟವಾಗಿರುವ ಗೂಗಲ್ ಡೂಡಲ್ ನಾಸಾದ ‘ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್​’ (James Webb Space Telescope – JWST) ತೆಗೆದಿರುವ ಯೂನಿವರ್ಸ್​ನ ಅತ್ಯಂತ ದೂರದ ಇನ್​ಫ್ರಾರೆಡ್ ಫೋಟೊವನ್ನು ಶ್ಲಾಘಿಸಿದೆ. ಇದು ಮಾನವರು ಸಾಧಿಸಿರುವ ಅತ್ಯಂತ ದೊಡ್ಡ ವೈಜ್ಞಾನಿಕ ಸಾಧನೆ ಎಂದೇ ಹೇಳಲಾಗಿದೆ. ಇದು ವಿಶ್ವದ ಅತಿದೊಡ್ಡ, ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ಸಂಕೀರ್ಣ ಇನ್​ಫ್ರಾರೆಡ್ ಟೆಲಿಸ್ಕೋಪ್ ಆಗಿದೆ. ಹಲವು ದೇಶಗಳು ಜೊತೆಗೂಡಿ ಕೈಗೊಂಡ ಅತಿದೊಡ್ಡ ಅಂತರರಾಷ್ಟ್ರೀಯ ಬಾಹ್ಯಾಕಾಶ ಸಾಹಸ ಎನಿಸಿದೆ. ಟೆಲಿಸ್ಕೋಪ್ ಟೇಕ್​ಆಫ್ ಆದ 6 ತಿಂಗಳ ನಂತರ ನಾಸಾ ‘ವೆಬ್​’ ಟೆಲಿಸ್ಕೋಪ್ ತೆಗೆದಿರುವ ಮೊದಲ ಚಿತ್ರವನ್ನು ಅನಾವರಣಗೊಳಿಸಿತು.

ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಕಳೆದ ಸೋಮವಾರ ಈ ಚಿತ್ರಗಳನ್ನು ಅನಾವರಣಗೊಳಿಸಿದ್ದರು. ‘ಇಂಥದ್ದು ಸಾಧ್ಯ ಎಂದು ಹಿಂದೆ ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದರು.

ನಾಸಾ ಸಂಸ್ಥೆಯ ಎರಡನೇ ಆಡಳಿತಾಧಿಕಾರಿ ಜೇಮ್ಸ್ ಇ. ವೆಬ್​ ಅವರ ಗೌರವಾರ್ಥ ಟೆಲಿಸ್ಕೋಪ್​ಗೆ JWST ಎಂಬ ಹೆಸರು ಇರಿಸಲಾಗಿದೆ. ಫ್ರೆಂಚ್ ಗಯಾನಾದ ಕೌರೌ ಎಂಬಲ್ಲಿ ಇರುವ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಟೆಲಿಸ್ಕೋಪ್ ಇದ್ದ ರಾಕೆಟ್ ಡಿಸೆಂಬರ್ 25, 2021ರಂದು ಉಡಾವಣೆಯಾಗಿತ್ತು. ಒಂದು ತಿಂಗಳು ಪ್ರಯಾಣ ಬೆಳೆಸಿದ್ದ ಈ ರಾಕೆಟ್​ಗಳು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿದ ನಂತರ ಟೆಲಿಸ್ಕೋಪ್ ಅನ್ನು ಕಕ್ಷೆಯಲ್ಲಿ ಕೂರಿಸಿತ್ತು. ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಕೆನಡಾದ ಬಾಹ್ಯಾಕಾಶಗಳು ಸಹಯೋಗದಲ್ಲಿ ಸಂಶೋಧನೆ ನಡೆಸಿದ್ದವು.

JWST ದೂರದರ್ಶಕದ ಮೂಲಕ ಇದೀಗ ಬಾಹ್ಯಾಕಾಶ ವಿಜ್ಞಾನಿಗಳು ಕಾಸ್ಮಿಕ್ ಇತಿಹಾಸದ 13.5 ಶತಕೋಟಿ ವರ್ಷಗಳ ವಿವಿಧ ಹಂತಗಳನ್ನು ಅಭ್ಯಾಸ ಮಾಡಲು ಸಾಧ್ಯವಾಗಿದೆ. ನಮ್ಮ ಗ್ಯಾಲಕ್ಸಿಯಿಂದ ಆಚೆಗಿನ ಜಗತ್ತನ್ನು ಅರಿಯಲು ಸಾಧ್ಯವಾಗಿದೆ. ಇತರ ಗ್ರಹಗಳಲ್ಲಿರುವ ಆಮ್ಲಜನಕ ಮತ್ತು ಇತರ ಅಣುಗಳನ್ನು ಗುರುತಿಸಲು ಈ ಟೆಲಿಸ್ಕೋಪ್ ನೆರವಾಗುತ್ತದೆ. 4 ಕೋಟಿ ವರ್ಷಗಳ ಹಿಂದೆ, ಮಹಾಸ್ಫೋಟದ ನಂತರ ರೂಪುಗೊಂಡ ಗ್ಯಾಲಕ್ಸಿಗಳ ಬಗ್ಗೆಯೂ ಅಭ್ಯಾಸಕ್ಕೆ ಈ ಟೆಲಿಸ್ಕೋಪ್ ನೆರವಾಗಲಿದೆ.

ನಾವು ಈ ಸ್ಥಿತಿಗೆ ಹೇಗೆ ಬಂದೆವು? ಈ ಬ್ರಹ್ಮಾಂಡದಲ್ಲಿ ನಾವಷ್ಟೇ ಇರುವುದೇ ಎನ್ನುವುದೂ ಸೇರಿದಂತೆ ಹಲವು ಪ್ರಶ್ನೆಗಳಿಗೆ ಈ ಟೆಲಿಸ್ಕೋಪ್ ಮುಂದಿನ ದಿನಗಳಲ್ಲಿ ಉತ್ತರ ಒದಗಿಸುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ಮತ್ತಷ್ಟು ವೈಜ್ಞಾನಿಕ ಮೈಲಿಗಲ್ಲುಗಳಿಗೆ ಇದು ಕಾರಣವಾಗಲಿದೆ. ಬಾಹ್ಯಾಕಾಶ ವಿಜ್ಞಾನ, ಕಾಲದ ಪರಿಮಾಣ ಮತ್ತು ಬಾಹ್ಯಾಕಾಶ ಕಾಯಗಳ ಪತ್ತೆಗೆ ಈ ಟೆಲಿಸ್ಕೋಪ್ ನೆರವಾಗಲಿದೆ ಎಂದು ಹೇಳಲಾಗಿದೆ.

Published On - 8:55 am, Wed, 13 July 22