ಚಂಡೀಗಢ: ಆತ ತನ್ನ ಮೂರು ಚಕ್ರದ ಸೈಕಲ್ನಲ್ಲಿ ಮೊಟ್ಟೆ ಟ್ರೇಗಳನ್ನು ತುಂಬಿಕೊಂಡು ಅಂಗಡಿ ಅಂಗಡಿಗೂ ಸರಬರಾಜು ಮಾಡುತ್ತಾ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸದಲ್ಲಿ ನಿರತನಾಗಿದ್ದ. ಅಂಗಡಿಯೊಂದರ ಮುಂದೆ ತನ್ನ ಸೈಕಲ್ ನಿಲ್ಲಿಸಿ, ಮೊಟ್ಟೆ ಕೊಟ್ಟು ಬರಲು ರಸ್ತೆಯ ಆ ಕಡೆಗೆ ಸಾಗಿದ್ದಾನೆ. ಅದಕ್ಕೇ ಹೊಂಚುಹಾಕುತ್ತಿದ್ದವನಂತೆ ನರಪೇತಲ ಕಾನ್ಸ್ಟೇಬಲ್ ಒಬ್ಬ ತನ್ನ ಶಿಸ್ತು-ಪ್ರಾಮಾಣಿಕತೆಯ ಇಲಾಖೆಗೆ ಕಳಂಕ ತರುವ ರೀತಿಯಲ್ಲಿ ಆ ಸೈಕಲ್ಗೆ ಆನಿಕೊಂಡು ಅತ್ತಿತ್ತ ಕಳ್ಳನೋಟ ಬೀರುತ್ತಾ, ಸರಾಗವಾಗಿ, ಎಡರು ಬಾರಿಗೆ ಒಟ್ಟು 6 ಮೊಟ್ಟೆಗಳನ್ನು ತನ್ನ ಪ್ಯಾಂಟ್ ಜೋಬಿಗೆ ತುಂಬಿಕೊಂಡಿದ್ದಾನೆ. ಪವಿತ್ರ ಸಮವಸ್ತ್ರಕ್ಕೂ ಕಳಂಕ ಮೆತ್ತಿದ್ದಾನೆ ಆ ಕಾನ್ಸ್ಟೇಬಲ್.
ಆತ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಮುಖ್ಯ ಕಾನ್ಸ್ಟೇಬಲ್ ಆಗಿರುವ ಪ್ರತಿಪಾಲ್ ಸಿಂಗ್. ಫತೇಗಢ ಸಾಹಿಬ್ ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿದ್ದಾನೆ; ಅಲ್ಲಲ್ಲ ಇದ್ದ. ಏಕೆಂದ್ರೆ ಪ್ರೀತಿಪಾಲ್ ಸಿಂಗ್ನ ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಇಲಾಖೆಯು ಪೊಲೀಸರ ಮಾನ ತೆಗೆದ ಕಾನ್ಸ್ಟೇಬಲ್ನನ್ನು ಸಸ್ಪೆಂಡ್ ಮಾಡಿ, ಮನೆಗಟ್ಟಿದೆ.
ಮುಖ್ಯ ಕಾನ್ಸ್ಟೇಬಲ್ ಪ್ರೀತಿಪಾಲ್ ಸಿಂಗ್ ಅತ್ತಿತ್ತ ಕಳ್ಳನೋಟ ಬೀರುತ್ತಾ, ಸಲೀಸಾಗಿ ಒಟ್ಟು 6 ಮೊಟ್ಟೆ ಎಗರಿಸಿದ್ದು ವಿಡಿಯೋದಲ್ಲಿ ದಾಖಲಾಗಿದೆ. ಮೊದಲ ಬಾರಿಗೆ ಸೈಕಲ್ಗೆ ಆನಿಕೊಂಡು ಎರಡೇ ಎರಡು ಮೊಟ್ಟೆಗಳನ್ನು ತನ್ನ ಪ್ಯಾಂಟ್ ಜೇಬಿಗೆ ಹಾಕಿಕೊಳ್ಳುತ್ತಾನೆ. ಆ ಮೇಲೆ ಯಾರೂ ನೋಡುತ್ತಿಲ್ಲ ಅಂತಾ ದುರಾಸೆಗೆ ಬಿದ್ದು, ಮಾನಗೆಟ್ಟು ಎರಡನೆಯತ ಬಾರಿಗೆ ಇನ್ನೂ ನಾಲ್ಕು ಮೊಟ್ಟೆಗಳನ್ನು ಅದೇ ಜೇಬಿಗೆ ತುರುಕಿಕೊಳ್ಳುತ್ತಾನೆ. ದಾಹ ಸಾಲದೆ ಇನ್ನೂ ನಾಲ್ಕಾರು ಎತ್ತಿಹಾಕಿಕೊಳ್ಳುತ್ತಿದ್ದನೋ ಏನೂ ಆದ್ರೆ ಅಷ್ಟೊತ್ತಿಗೆ ಪಾಪಾ ಆ ಸೈಕಲ್ ವ್ಯಾಪಾರಿ ಬಂದುಬಿಟ್ಟಿದ್ದಾನೆ.
ಮುಖ್ಯ ಕಾನ್ಸ್ಟೇಬಲ್ನ ಅಂಡಾಬಂಡಾ ಕಳ್ಳಾಟ ಹೀಗಿತ್ತು:
ಮೊಟ್ಟೆವಾಲಾನನ್ನು ನೋಡಿದ ಕಾನ್ಸ್ಟೇಬಲ್ ಏನೂ ಘಟಿಸಿಯೇ ಇಲ್ಲ ಎಂಬಂತೆ ತನ್ನ ಕೈಗಳನ್ನು ಪ್ಯಾಂಟಿಗೆ ಒರೆಸಿಕೊಳ್ಳುತ್ತಾ, ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಮೊಟ್ಟೆವಾಲಾ ಬಹುಶಃ ಅದನ್ನೆಲ್ಲ ನೋಡಿದ್ದ ಅನಿಸುತ್ತದೆ. ಇದೆಲ್ಲಾ ಮಾಮೂಲು ಎಂಬಂತೆ ಕಾನ್ಸ್ಟೇಬಲ್ ಕಡೆಗೆ ಕೈತೋರಿಸಿ, ಇವನ ಹಣೆಬರಹ ಇಷ್ಟೇ. ಇವನಿಗೆ ಕದಿಯುವ ಚಾಳಿ ಇದ್ದಿದ್ದೇ ಎಂದು ಹತಾಶನಾಗಿ ಪ್ರತಿಕ್ರಿಯಿಸುತ್ತಾನೆ. ಇವಿಷ್ಟೂ ವಿಡಿಯೋದಲ್ಲಿ ದಾಖಲಾಗಿದೆ.
ತಮ್ಮ ಕಾನ್ಸ್ಟೇಬಲ್ ಮೊಟ್ಟೆ ಕದಿಯುವ ಚಾಳಿ ನೋಡಿದ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿ, ಅದಕ್ಕೂ ಮೊದಲು ನೀನು ಮನೆಗೆ ಹೋಗು ಎಂದು ಸಸ್ಪೆಂಡ್ ಮಾಡಿದ್ದಾರೆ. ಜೊತೆಗೆ ಆ ವಿಡಿಯೋ ಸಮೇತ ಟ್ವೀಟ್ ಮಾಡಿ.. ಹೀಗೀಗೆ ನಮ್ಮ ಕಾನ್ಸ್ಟೇಬಲ್ ಕಳ್ಳತನಕ್ಕೆ ಇಳಿದಿದ್ದಾನೆ. ನೀವೂ ನೋಡಿ ಎಂದು ವಿಡಿಯೋ ಟ್ವೀಟ್ ಪೋಸ್ಟ್ ಮಾಡಿದ್ದಾರೆ. ಅದೀಗ Social Mediaದಲ್ಲಿ Viral Video ಆಗಿದೆ. ನೀವೂ ನೋಡಿ..
A video went viral wherein HC Pritpal Singh from @FatehgarhsahibP is caught by a camera for stealing eggs from a cart while the rehdi-owner is away and putting them in his uniform pants.
He is suspended & Departmental Enquiry is opened against him. pic.twitter.com/QUb6o1Ti3I
— Punjab Police India (@PunjabPoliceInd) May 15, 2021
(Head Constable Pritpal Singh egg stealing video goes viral in Social Media Punjab Police suspend him)
Published On - 11:14 am, Mon, 17 May 21