ಅಪ್ಪ ಎಲ್ಲಿದ್ದೀಯಾಪ್ಪ… ಶಬರಿಮಲೆಯಲ್ಲಿ ತಂದೆಯನ್ನು ಕಾಣದೆ ಕಣ್ಣೀರು ಹಾಕಿದ ಪುಟ್ಟ ಸ್ವಾಮಿ; ಮನಕಲಕುವ ವಿಡಿಯೋ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 13, 2023 | 12:38 PM

ಕಳೆದ ಕೆಲವು ದಿನಗಳಿಂದ ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ  ದೇವಾಲಯದ ಆಡಳಿತ ಮಂಡಳಿ ಭಕ್ತಾದಿಗಳಿಗಾಗಿ  ಯಾವುದೇ ಸರಿಯಾದ ವ್ಯವಸ್ಥೆಯನ್ನು ಜಾರಿಗೊಳಿಸದ ಕಾರಣ ನೂಕುನುಗ್ಗಲು ಕೂಡಾ ಹೆಚ್ಚಾಗಿದೆ. ಈ ನಡುವೆ ಶಬರಿಮಲೆಯಲ್ಲಿ ನಡೆದಂತಹ ಮನಕಲಕುವ ಘಟನೆಯ ವಿಡಿಯೋವೊಂದು ಹರಿದಾಡುತ್ತಿದ್ದು, ಶಬರಿಮಲೆಗೆ ದೇವರ ದರ್ಶನಕ್ಕೆಂದು ತಂದೆಯೊಂದಿಗೆ ಬಂದಿದ್ದ, ಪುಟ್ಟ ಅಯ್ಯಪ್ಪ ಸ್ವಾಮಿ ಮಾಲಾಧಾರಿ, ನೂಕುನುಗ್ಗಲಿನ ನಡುವೆ ತಂದೆಯಿಂದ ಬೇರ್ಪಟ್ಟಿದ್ದು,  ತಂದೆಯನ್ನು ಕಾಣದೆ ಕಣ್ಣೀರಿಡುತ್ತಾ, ಅಪ್ಪಾ…  ಎಲ್ಲಿದ್ದೀಯಾ ಎಂದು ಜೋರಾಗಿ  ಕೂಗಾಡಿದ್ದಾನೆ.  ಮಗುವಿನ ಈ ಅಸಹಾಯಕ   ಪರಿಸ್ಥಿತಿ ಎಂತಹ ಕಲ್ಲು ಹೃದಯವನ್ನು ಕೂಡಾ ಕರಗಿಸುವಂತಿದೆ.

ಅಪ್ಪ ಎಲ್ಲಿದ್ದೀಯಾಪ್ಪ... ಶಬರಿಮಲೆಯಲ್ಲಿ ತಂದೆಯನ್ನು ಕಾಣದೆ ಕಣ್ಣೀರು ಹಾಕಿದ ಪುಟ್ಟ ಸ್ವಾಮಿ; ಮನಕಲಕುವ ವಿಡಿಯೋ ಇಲ್ಲಿದೆ
ವೈರಲ್​​ ವಿಡಿಯೋ
Follow us on

ಪ್ರತಿವರ್ಷ  ಹೆಚ್ಚಾಗಿ ಡಿಸೆಂಬರ್, ಜನವರಿ ತಿಂಗಳಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಶಬರಿಮಲೆಗೆ  ದೇವರ ದರ್ಶನಕ್ಕಾಗಿ ಹೋಗುತ್ತಾರೆ. ಆದರೆ ಈ ವರ್ಷ ಮಾತ್ರ ಎಂದಿಗಿಂತ ಹೆಚ್ಚಿನ ಭಕ್ತಾದಿಗಳು  ದೇವರ ದರ್ಶನಕ್ಕಾಗಿ ಬಂದಿದ್ದು,   ಅದರಲ್ಲೂ ಕಳೆದ ಐದು ದಿನಗಳಿಂದ ಶಬರಿಮಲೆಗೆ ಭಕ್ತರ ದಂಡೇ ಹರಿದುಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿ  ದೇವಾಲಯದ ಆಡಳಿತ ಮಂಡಳಿ ಭಕ್ತರನ್ನು ನಿರ್ವಹಿಸಲು ಸರಿಯಾದ ವ್ಯವಸ್ಥೆಯನ್ನು ಜಾರಿಗೊಳಿಸದ ಕಾರಣ ವಿರುದ್ಧ ವಿರೋಧ ಪಕ್ಷಗಳು ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಅಲ್ಲದೆ ವಿಪರೀತ ಜನದಟ್ಟನೆಯ ಕಾರಣದಿಂದ ಅನೇಕ ಯಾತ್ರಾರ್ಥಿಗಳು ಶಬರಿಮಲೆ ದೇವಸ್ಥಾನಕ್ಕೆ ಬಂದು ಅಯ್ಯಪ್ಪ ದೇವರ ದರ್ಶನವನ್ನು ಪಡೆಯದೆ, ಪಂದಳಂನಿಂದ ಹಿಂದಿರುಗಿದ್ದಾರೆ. ಈ ನಡುವೆ ಶಬರಿಮಲೆಯಲ್ಲಿ ನಡೆದಂತಹ ಮನಕಲಕುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆಂದು ತಂದೆಯೊಂದಿಗೆ ಬಂದಿದ್ದಂತಹ ಪುಟ್ಟ ಮಾಲಾಧಾರಿ ಸ್ವಾಮಿ  ನೂಕುನುಗ್ಗಲಿನ ನಡುವೆ ತಂದೆಯಿಂದ ಬೇರ್ಪಟ್ಟಿದ್ದು, ತಂದೆಯನ್ನು ಕಾಣದೆ,  ಆ ಬಾಲಕ ಅಪ್ಪಾ.. ಅಪ್ಪಾ ಎಂದು ಜೋರಾಗಿ ಕೂಗಿದ್ದಾನೆ. ತಂದೆಯನ್ನು ಕಾಣದೆ ಗಾಬರಿಯಲ್ಲಿ ಅಳುತ್ತಿರುವ ಈ ಮಗುವಿನ ಅಸಹಾಯಕ ಸ್ಥಿತಿ ಎಂತಹ ಕಲ್ಲು ಹೃಯದವನ್ನು ಸಹ ಕರಗಿಸುವಂತಿದೆ.

@sabarimala_edits ಎಂಬ ಇನ್ಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ, ಶಬರಿಮಲೆಯಲ್ಲಿ ದೇವರ ದರ್ಶನಕ್ಕೆಂದು ಬಂದಂತಹ ಪುಟ್ಟ ಅಯ್ಯಪ್ಪಸ್ವಾಮಿ ಮಾಲಾಧಾರಿ ತನ್ನ ತಂದೆಯಿಂದ ಬೇರ್ಪಟ್ಟು, ತಂದೆಗಾಗಿ ಜೋರಾಗಿ ಅಳುತ್ತಿರುವ  ದೃಶ್ಯವನ್ನು ಕಾಣಬಹುದು.

ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋದಲ್ಲಿ ಶಬರಿಮಲೆಯಲ್ಲಿ ನೂಕುನುಗ್ಗಲಿನ ಕಾರಣ, ಬಸ್ಸಿನ ಒಳಗಡೆಯೇ  ನಿಂತಿದ್ದ ಪುಟ್ಟ ಬಾಲಕನೊಬ್ಬ ತನ್ನ ತಂದೆ ಕಾಣಿಸುತ್ತಿಲ್ಲವೆಂದು ಗಾಬರಿಗೊಂಡು ಕಣ್ಣೀರಿಡುತ್ತಾ  ಅಪ್ಪಾ ಅಪ್ಪಾ…. ಎಂದು ಜೋರಾಗಿ ಕೂಗಿ ಕರೆಯುತ್ತಾನೆ. ಮಗುವಿನ ಈ ಅಸಹಾಯಕ ಸ್ಥಿತಿಯನ್ನು ನೋಡಲಾರದೆ ಅಲ್ಲಿಗೆ ಪೋಲಿಸರೊಬ್ಬರು ಬಂದು, ಏನೆಂದು ವಿಚಾರಿಸುತ್ತಾರೆ. ಆ ಸಂದರ್ಭದಲ್ಲಿ ಆ ಬಾಲಕ  ಕಣ್ಣೀರಿಡುತ್ತಾ, ಅಪ್ಪ ಎಲ್ಲಿ ಎಂದು ಪೋಲಿಸರ ಬಳಿ ಕೈ ಮುಗಿದು ಬೇಡಿಕೊಳ್ಳುತ್ತಿರುವ ಮನಕಲಕುವ ದೃಶ್ಯವನ್ನು ಕಾಣಬಹುದು.  ಈ ಒಂದು  ದೃಶ್ಯ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.

ಇದನ್ನೂ ಓದಿ: ಪಾನಿಪುರಿ ವ್ಯಾಪರಿಗಳ ತಿಂಗಳ ಆದಾಯ ಎಷ್ಟು? ದಿನದ ಗಳಿಕೆ ಕೇಳಿದ್ರೆ ದಂಗಾಗೋದು ಗ್ಯಾರಂಟಿ

ಈ  ವಿಡಿಯೋ ಕ್ಲಿಪ್​​ನ್ನು ಇನ್ಸ್ಟಾಗ್ರಾಮ್​​​ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇಲ್ಲಿಯವರೆಗೆ 2.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಮಗುವಿನ ಸ್ಥಿತಿಯನ್ನು ಕಂಡು ಹಲವರು ಮರುಕ ವ್ಯಕ್ತಪಡಿಸಿದ್ದಾರೆ.  ಒಬ್ಬ ಬಳಕೆದಾರರು ಮಕ್ಕಳು ನೋವಿನಿಂದ ಕಣ್ಣೀರಿಡುತ್ತಾ ಕೈ ಮುಗಿದು ಬೇಡಿಕೊಳ್ಳುವುದನ್ನು ನೋಡಿದರೆ ತುಂಬಾ ಬೇಜಾರಾಗುತ್ತದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಯಾವುದೇ ಪುಣ್ಯ ಕ್ಷೇತ್ರಕ್ಕೆ ಹೋದರೂ ಮಕ್ಕಳನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳುವುದು ತುಂಬಾ ಮುಖ್ಯʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇನ್ನೂ ಹಲವರು ʼತಂದೆಯೇ ಮಕ್ಕಳಿಗೆ ಪ್ರಪಂಚವಲ್ಲವೇʼ ಎಂದು ಈ ಮಗುವಿನ ನೋವನ್ನು  ಕಂಡು ಮರುಕ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:35 pm, Wed, 13 December 23