ಡಾ. ಡಿಂಪಲ್ ಅರೋರಾ ಚಾವ್ಲಾ ದಂತ ವೈದ್ಯರು. ಏಪ್ರಿಲ್ನಲ್ಲಿ ಕೊವಿಡ್ ಪರೀಕ್ಷೆಗೆ ಒಳಗಾದಾಗ ಅವರು 7 ತಿಂಗಳ ಗರ್ಭಿಣಿ. ಪರೀಕ್ಷೆಯ ವರದಿಯ ಪ್ರಕಾರ ವೈದ್ಯೆ ಡಿಂಪಲ್ ಅರೋರಾ ಚಾವ್ಲಾ ಅವರಿಗೆ ಕೊವಿಡ್ ಪಾಸಿಟಿವ್ ಬಂತು. ಈಗ ತಾನೆ ಜಗತ್ತು ನೋಡಲಿರುವ ಮಗುವನ್ನು 34ನೇ ವಯಸ್ಸಿನಲ್ಲಿರುವ ಅವರು ಕಳೆದುಕೊಂಡರು. ಆ ನೋವಿನಲ್ಲಿಯೂ ದೃತಿಗೆಡದೇ ಕೊರೊನಾ ವೈರಸ್ ವಿರುದ್ಧ ಹೋರಾಡಿದರು. ಆದರೆ ದುರಾದೃಷ್ಟವಶಾತ್ ತನ್ನ ಮೂರು ವರ್ಷದ ಮಗು ಮತ್ತು ಗಂಡನನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.
ಸಾವಿಗೆ ಕೆಲವು ದಿನಗಳ ಹಿಂದೆ ದೆಹಲಿ ಮೂಲದ ವೈದ್ಯರಾದ ಇವರು ತನ್ನ ಕುಟುಂಬ ಮತ್ತು ಸ್ನೇಹಿತರಿಗೆ ಕೊರೊನಾ ವೈರಸ್ಅನ್ನು ಲಘುವಾಗಿ ತೆಗೆದುಕೊಳ್ಳದಂತೆ ಎಚ್ಚರಿಕೆಯ ಮಾತುಗಳನ್ನಾಡಿ ವಿಡಿಯೋ ಸಂದೇಶವನ್ನು ಕಳುಹಿಸಿದ್ದರು. ‘ಬಹಳ ಕಷ್ಟದಿಂದ ಈ ವಿಡಿಯೋ ಮಾಡುತ್ತಿದ್ದೇನೆ. ಎಲ್ಲರಿಗೂ ಹೇಳಬಯಸುವುದೇನೆಂದರೆ, ದಯವಿಟ್ಟು ಕೊರೊನಾ ಸೋಂಕನ್ನು ಅಷ್ಟು ಲಘುವಾಗಿ ತೆಗೆದುಕೊಳ್ಳಬೇಡಿ. ಆರೋಗ್ಯಕ್ಕೆ ತುಂಬಾ ಗಂಭೀರವಾದ ಲಕ್ಷಣಗಳನ್ನು ಬೀರುತ್ತದೆ. ನನಗೆ ಮಾತನಾಡಲು ಸಹ ಆಗುತ್ತಿಲ್ಲ. ನನ್ನ ಈ ಸಂದೇಶ ಎಲ್ಲರಿಗೆ ಮನಮುಟ್ಟಿದೆ ಎಂದು ನಾನು ಬಯಸುತ್ತೇನೆ. ಈ ಸಂದೇಶವನ್ನು ಎಲ್ಲರಿಗೂ ತಿಳಿಸಿ’ ಎಚ್ಚರಿಕೆ ನೀಡಿದ ಸಂದೇಶವನ್ನು ಏಪ್ರಿಲ್ 7ರಂದು ರೆಕಾರ್ಡ್ ಮಾಡಿದ 2 ನಿಮಿಷ 20 ಸೆಕೆಂಡುಗಳ ವಿಡಿಯೋದಲ್ಲಿ ನೋಡಬಹುದಾಗಿದೆ.
‘ನಿಮ್ಮ ಆತ್ಮೀಯರೊಂದಿಗೆ, ಸ್ನೇಹಿತರೊಂದಿಗೆ, ಮನೆಯವರೊಂದಿಗೆ ಅಥವಾ ಹೊರಗೆ ಹೋಗುವಾಗ ದಯವಿಟ್ಟು ಮುಖಗವಸನ್ನು ಧರಿಸಿ’ ಎಂದು ಡಾ. ಡಿಂಪಲ್ ಅರೋರಾ ಚಾವ್ಲಾ ಎಚ್ಚರಿಸಿದ್ದರು. ಈ ವಿಡಿಯೋವನ್ನು ಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಸಾವಿರಾರು ಜನರು ಸಂತಾಪ ಸೂಚಿಸಿದ್ದಾರೆ.
ಎನ್ಡಿಟಿವಿಯೊಂದಿಗೆ ಮಾತನಾಡಿದ ರವೀಶ್ ಚಾವ್ಲಾ ಅವರು, ಜನರು, ನನ್ನ ಹೆಂಡತಿಯ ಕೊನೆಯ ಆಶಯಗಳನ್ನು ಗೌರವಿಸುತ್ತಿದ್ದಾರೆ. ಆಕೆ ಹೇಳಿದ ಮಾತುಗಳೆಲ್ಲವೂ ಜಾಗೃತಿ ಮೂಡಿಸುವ ಸಂದೇಶಗಳಾಗಿವೆ. ಆದ್ದರಿಂದ ಯಾರೂ ಕೂಡಾ ಸಾಂಕ್ರಾಮಿಕವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಮಾತನಾಡಿದರು.
‘ಮುನ್ನೆಚ್ಚರಿಕೆಯ ಕುರಿತಾಗಿ ಜನರಿಗೆ ತಿಳಿಸುವುದು ಡಾ. ಡಿಂಪಲ್ ಚಾವ್ಲಾ ಅವರಿಗೆ ಸಹಜ ಸ್ವಭಾವವಾಗಿತ್ತು. ಹಾಗಾಗಿ ತನ್ನ ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗಾಗಿ ವಿಡಿಯೋ ರೆಕಾರ್ಡ್ ಮಾಡಿದ್ದರು. ಆದರೆ ಅವರ ಅಕಾಲಿಕ ಮರಣವು, ಈ ಸಂದೇಶವನ್ನು ಜಗತ್ತಿಗೆ ಪೋಸ್ಟ್ ಮಾಡುವಂತೆ ಮಾಡಿತು. ಕೊವಿಡ್ಅನ್ನು ದಯಮಾಡಿ ಲಘುವಾಗಿ ಪರಿಗಣಿಸಬೇಡಿ ಎಂದು ತಮ್ಮ ನೋವನ್ನು ಹಂಚಿಕೊಳ್ಳುವುದರ ಮೂಲಕ ಜನರಿಗೆ ಸೂಚನೆ ನೀಡಿದರು. ನಿಮಗಾಗಿ ಮಾತ್ರವಲ್ಲದೇ ಸುತ್ತ-ಮುತ್ತಲಿನ ಜನರಿಗಾಗಿ ನೀವು ಮುಖಗವಸನ್ನು ಧರಿಸಬೇಕು. ವಯಸ್ಸಾದವರು, ಗರ್ಭಿಣಿಯರಿರುತ್ತಾರೆ ಅವರಿಗೋಸ್ಕರ ನೀವು ಮುಖಗವಸನ್ನು ಧರಿಸಲು ಮರೆಯದಿರಿ ಎಂದು ಅವರು ಸಂದೇಶ ಸಾರಿದರು.
ಕೊವಿಡ್ನಿಂದ ತನ್ನ ಹೆಂಡತಿ ಹೋರಾಡಿದ ಘಟನೆಯನ್ನು ಹೇಳಿದ ಚಾವ್ಲಾ ಅವರು, ಕೊವಿಡ್ ಪಾಸಿಟಿವ್ ಬಂದ 10 ದಿನಗಳ ಬಳಿಕ ಅವರಿಗೆ ಉಸಿರಾಡಲು ಕಷ್ಟವಾಗತೊಡಗಿತು. ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದೆವು. ಆಸ್ಪತ್ರೆಯಲ್ಲಿ ರೆಮ್ಡೆಸಿವಿರ್ ನೀಡಲಾಯಿತು. ಜೊತೆಗೆ ಎರಡು ಸುತ್ತಿನ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕು: ಮಂಗಳೂರಿನಲ್ಲಿ ಗರ್ಭಿಣಿ ವೈದ್ಯೆ ಬಲಿ; ಮುಳಬಾಗಿಲಿನಲ್ಲಿ ಸ್ಟುಡಿಯೋ ಮಾಲೀಕ-ಪತ್ನಿ ಸಾವು
Published On - 5:01 pm, Wed, 12 May 21