9 ಗಂಟೆ ವಿಳಂಬ ಮಾಡಿ ಪ್ರಯಾಣಿಕರ ಬಳಿ ಕ್ಷಮೆ ಕೇಳಿ ಉಡುಗರೆ ನೀಡಿದ ಇಂಡಿಗೋ

ಇಂಡಿಗೋ ವಿಮಾನಗಳ ವಿಳಂಬ ಮತ್ತು ರದ್ದತಿ ದೇಶಾದ್ಯಂತ ಪ್ರಯಾಣಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿತ್ತು. ಈ ಗೊಂದಲದ ನಡುವೆ, 9 ಗಂಟೆಗಳ ವಿಳಂಬಕ್ಕೆ ಕ್ಷಮೆ ಕೋರಿ ಇಂಡಿಗೋ ಸಿಬ್ಬಂದಿ ಉಡುಗೊರೆ ನೀಡಿದ ವೀಡಿಯೊ ವೈರಲ್ ಆಗಿದೆ. ಆದರೂ, ಇದು ಕೇವಲ ಸಾಂಸ್ಥಿಕ ನಡೆ ಎಂದು ಹಲವರು ಟೀಕಿಸಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ ಈ ಅವ್ಯವಸ್ಥೆ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ.

9 ಗಂಟೆ ವಿಳಂಬ ಮಾಡಿ ಪ್ರಯಾಣಿಕರ ಬಳಿ ಕ್ಷಮೆ ಕೇಳಿ ಉಡುಗರೆ ನೀಡಿದ ಇಂಡಿಗೋ
ವೈರಲ್​​ ಪೋಸ್ಟ್

Updated on: Dec 10, 2025 | 10:15 AM

ಭಾರತದ ದೊಡ್ಡ ವಿಮಾನಯಾನ ಕಂಪನಿ ಇಂಡಿಗೋ (Indigo Flight), ಬೆಂಗಳೂರು ಸೇರಿದಂತೆ ದೇಶದ ಅನೇಕ ಕಡೆ ತನ್ನ ಪಯಣವನ್ನು ರದ್ದು ಮಾಡಿ, ಭಾರೀ ವಿವಾದಕ್ಕೆ ಕಾರಣವಾಗಿತ್ತು. ವಿಮಾನ ರದ್ದಾಗಿರುವ ಕಾರಣ ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಬಗ್ಗೆ ಇಂಡಿಗೋ ವಿರುದ್ಧ ಕೇಂದ್ರ ಸರ್ಕಾರ ಸೇರಿದಂತೆ ಪ್ರಯಾಣಿಕರು ಕೂಡ ಅಕ್ರೋಶ ವ್ಯಕ್ತಪಡಿಸಿದ್ದರು. ಇಂಡಿಗೋದಿಂದ ಆಗಿರುವ ಅವ್ಯವಸ್ಥೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಒಂದು ಕಡೆ ಪ್ರಯಾಣಿಕರು ವಿಮಾನಯಾನ ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರೇ, ಇನ್ನು ಕೆಲವು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಭಜನೆ ಮಾಡಿರುವ ವಿಡಿಯೋಗಳು ವೈರಲ್​​ ಆಗಿತ್ತು. ಆದರೆ ಇದರ ನಡುವೆ ಒಂದು ಸಕಾರಾತ್ಮಕ ವಿಡಿಯೋ ವೈರಲ್​ ಆಗಿದೆ. ಆಯಿರಾ ಗೌರವ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್​​​​ ಖಾತೆಯಲ್ಲಿ ಇಂಡಿಗೋ ವಿಮಾನ 9 ಗಂಟೆಗಳ ವಿಳಂಬ ಮಾಡಿದ್ದಕ್ಕೆ ಉಡುಗರೆಯನ್ನು ನೀಡಿ ಕ್ಷಮೆ ಕೇಳಿರುವ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಆಯಿರಾ ಗೌರವ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೀಗೆ ಹಂಚಿಕೊಂಡಿದ್ದಾರೆ. “ಇಂಡಿಗೋ ವಿಮಾನ ಪ್ರಯಾಣಿಕರನ್ನು 9 ತಾಸುಗಳ ಕಾಲ ಕಾಯಿಸಿದೆ. ಈ ಕಾರಣಕ್ಕೆ ವಿಮಾನ ಸಿಬ್ಬಂದಿ ಕ್ಷಮೆ ಕೇಳಿ ಉಡುಗರೆಯನ್ನು ನೀಡಿದ್ದಾರೆ. ಈ ಉಡುಗರೆಯನ್ನು ತೆರೆದು ನೋಡಿದಾಗ ಅದರಲ್ಲಿ ಗೌರ್ಮೆಟ್ ಪಾಪ್‌ಕಾರ್ನ್, ಮೆಥಿ ಮಾತ್ರಿ, ಮಿಶ್ರ-ಹಣ್ಣಿನ ಜ್ಯೂಸ್​​​ ಮತ್ತು ಸ್ಯಾಮ್‌ಸಂಗ್ ಕಾರ್ಡ್ ಇತ್ತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇದು ಭಾರತದ ಅತ್ಯಂತ ನಿಧಾನವಾಗಿ ಚಲಿಸುವ ರೈಲು: ಸೈಕಲ್‌ಗಿಂತ ನಿಧಾನವಾಗಿ ಓಡುವ ಟ್ರೈನ್ ಎಲ್ಲಿದೆ ಗೊತ್ತಾ?

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇನ್ನು ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಮೆಂಟ್​​ ಮಾಡಿದ್ದಾರೆ. ಒಬ್ಬರು ಒಟ್ಟು ಇನ್ನೂರು ರೂಪಾಯಿಗಳಂತೆ ಎಂದು ಕಮೆಂಟ್​​ ಮಾಡಿದ್ದಾರೆ. ಇನ್ನೊಬ್ಬರು ಕ್ಷಮೆಯಾಚನೆ ಸ್ವೀಕರಿಸಲಾಗಿಲ್ಲ ಎಂದು ಕಮೆಂಟ್​ ಮಾಡಿದ್ದಾರೆ. ಇಂಡಿಗೋ ಉಡುಗೊರೆಯನ್ನು ನೀಡುವುದಲ್ಲ, ಅದು ಕಾರ್ಪೊರೇಟ್ ಬುಕಿಂಗ್ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳು ನೀಡುತ್ತವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇಂಡಿಗೋ ಪ್ರತಿದಿನ ಸುಮಾರು 2,200 ವಿಮಾನಗಳನ್ನು ನಿರ್ವಹಿಸುತ್ತದೆ. ಸಿಬ್ಬಂದಿ ಕೊರತೆಯಿಂದಾಗಿ ಕಂಪನಿಯಲ್ಲಿ ಗೊಂದಲಗಳು ಕಂಡು ಬಂದಿದೆ. ಇದು ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಜೈಪುರದಂತಹ ನಗರಗಳ ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆಗೆ ಕಾರಣವಾಯಿತು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ