Fact Check: ನೀರು ತುಂಬಿರುವ ಬೆಂಗಳೂರಿನ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹತ್ತಿರುವುದು ನಿಜವೇ?

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 18, 2024 | 10:22 AM

ಸಾಮಾಜಿಕ ಜಾಲತಾಣಗಳಲ್ಲಿ 26-ಸೆಕೆಂಡ್‌ಗಳ ವಿಡಿಯೋ ಒಂದು ವೈರಲ್ ಆಗುತ್ತಿದೆ. ಪ್ರವಾಹಕ್ಕೆ ಒಳಗಾದ ರಸ್ತೆಯಲ್ಲಿ ವಿದ್ಯುತ್ ತಂತಿಗಳು ನೆಲಕ್ಕೆ ಬಿದ್ದು ಬೆಂಕಿ ಕಾಣಿಸಿಕೊಂಡಿದೆ. ಇದು ಬೆಂಗಳೂರಿನಲ್ಲಿ ನಡೆದಿರುವ ಘಟನೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋದ ನಿಜಾಂಶ ಏನು?, ಇಲ್ಲಿದೆ.

Fact Check: ನೀರು ತುಂಬಿರುವ ಬೆಂಗಳೂರಿನ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹತ್ತಿರುವುದು ನಿಜವೇ?
Follow us on

ಅನಿರೀಕ್ಷಿತ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಮಹಾನಗರ ತತ್ತರಿಸಿಹೋಗಿದೆ. ಹಲವು ಏರಿಯಾಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನಗರ ಜಿಲ್ಲೆಗೆ ಯಲ್ಲೋ ಅಲರ್ಟ್​ ನೀಡಿದ್ದು, ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ. ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಖಾಸಗಿ / ಅನುದಾನಿತ ಪ್ರಾಥಮಿಕ/ ಪ್ರೌಢಶಾಲೆಗಳಿಗೆ ರಜೆಯನ್ನು ಕೂಡ ಘೋಷಿಸಲಾಗಿದೆ.

ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ 26-ಸೆಕೆಂಡ್‌ಗಳ ವಿಡಿಯೋ ಒಂದು ವೈರಲ್ ಆಗುತ್ತಿದೆ. ಪ್ರವಾಹಕ್ಕೆ ಒಳಗಾದ ರಸ್ತೆಯಲ್ಲಿ ವಿದ್ಯುತ್ ತಂತಿಗಳು ನೆಲಕ್ಕೆ ಬಿದ್ದು ಬೆಂಕಿ ಕಾಣಿಸಿಕೊಂಡಿದೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ ಆದಂತೆ ಕಾಣುತ್ತಿದೆ. ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಅಪ್ಲೋಡ್ ಮಾಡಿ, ‘ಬ್ರಾಂಡ್ ಬೆಂಗಳೂರು ಬಿಸಿ ನೀರು ಭಾಗ್ಯ ಅಷ್ಟೇ.. ಯಾರಿಗೆ ಏನಾದ್ರೆ ನಮಗೇನು ಅಂತಿದೆ ಕಾಸಿಲ್ಲದ ಸರ್ಕಾರ,’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋ ಬೆಂಗಳೂರಿನದ್ದೇ ಅಲ್ಲ, ಇದು ವಿ ಯೆಟ್ನಾಂನಿಂದ ಬಂದಿದೆ. ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ.
ಆಗ ಎಕ್ಸ್ ಬಳಕೆದಾರರೊಬ್ಬರು ಅಕ್ಟೋಬರ್ 16, 2024 ರಂದು ‘ವಿಯೆಟ್ನಾಂ’ ಎಂಬ ಶೀರ್ಷಿಕೆಯೊಂದಿಗೆ ಇದೇ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಹೀಗಾಗಿ ಇದು ಭಾರತದ ಹೊರಗಿನ ವೀಡಿಯೊ ಎಂಬ ಬಗ್ಗೆ ಸುಳಿವು ಸಿಕ್ಕಿತು.

ಇದಲ್ಲದೆ, ಕೀವರ್ಡ್ ಹುಡುಕಾಟ ನಡೆಸಿದಾಗ ವಿಯೆಟ್ನಾಂ ಸ್ಥಳೀಯ ವೆಬ್​ಸೈಟ್ ವಿಯೆಟ್ನಾಮೀಸ್ ಈ ಕುರಿತು ವರದಿ ಮಾಡಿರುವುದು ಕಂಡುಬಂದಿದೆ. ಅಕ್ಟೋಬರ್ 16, 2024 ರಂದು ಪಬ್ಲಿಶ್ ಆದ ಸುದ್ದಿಯ ಪ್ರಕಾರ, ;ಕ್ಯಾನ್ ಥೋದಲ್ಲಿ ವಿದ್ಯುತ್ ತಂತಿಗಳು ಜಲಾವೃತಗೊಂಡ ರಸ್ತೆಯ ಮೇಲೆ ಬಿದ್ದಾಗ ಸಂಭವಿಸಿದ ಆಘಾತಕಾರಿ ದೃಶ್ಯ. ತುಂಡಾದ ವಿದ್ಯುತ್ ತಂತಿಯು ನೀರಿನ ಮೇಲ್ಮೈಯಲ್ಲಿ ಅಪಾಯಕಾರಿಯಾಗಿ ಕಾಣುವ ಕಿಡಿಗಳನ್ನು ಕಂಡು ಜನರು ಭಯಭೀತರಾಗಿದ್ದರು,’ ಎಂದು ಬರೆಯಲಾಗಿದೆ.

ಇದು ವಿಯೆಟ್ನಾಂನ ಕ್ಯಾನ್ ಥೋ ಎಂಬ ನಗರದಲ್ಲಿ ಈ ಘಟನೆ ನಡೆದಿರುವುದು ದೃಢಪಟ್ಟಿದೆ. ಭಾರೀ ಚಂಡಮಾರುತದ ಸಮಯದಲ್ಲಿ, ಹೈವೋಲ್ಟೇಜ್ ವಿದ್ಯುತ್ ತಂತಿಯೊಂದು ತುಂಡಾಗಿ ನೀರಿನ ಮೇಲೆ ಮುಳುಗಿದ ಬೀದಿಯಲ್ಲಿ ಬೆಂಕಿ ಎದ್ದಿದೆ ಎಂದು ವರದಿ ವಿವರಿಸಿದೆ.

ಹಾಗೆಯೆ ಇದೇ ವೀಡಿಯೊವನ್ನು ವಿಯೆಟ್ನಾಂನ ಸ್ಥಳೀಯ ಯೂಟ್ಯೂಬ್ ಚಾನೆಲ್ KÊNH VTC14 ​ನಲ್ಲಿ ಅಕ್ಟೋಬರ್ 17, 2024 ರಂದು ಅಪ್ಲೋಡ್ ಮಾಡಲಾಗಿದೆ. ಇದಕ್ಕೆ ‘‘ತುಂಡಾದ ವಿದ್ಯುತ್ ತಂತಿಗಳು ಜಲಾವೃತಗೊಂಡ ರಸ್ತೆಗೆ ಬೀಳುವ ಭಯಾನಕ ದೃಶ್ಯ, ಇದರಿಂದ ಕಿಡಿಗಳು ಹಾರಿವೆ,’’ ಎಂದು ಶೀರ್ಷಿಕೆ ನೀಡಲಾಗಿದೆ.

ಈ ಎಲ್ಲ ವರದಿಯ ಆಧಾರದ ಮೇಲೆ ಬೆಂಗಳೂರಿನಲ್ಲಿ ಈ ಘಟನೆ ಸಂಭವಿಸಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಅನಿರೀಕ್ಷಿತ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ತತ್ತರಿಸಿರುವುದು ನಿಜ. ಆದರೆ, ವೈರಲ್ ವಿಡಿಯೋ ವಿಯೆಟ್ನಾಂನ ಕ್ಯಾನ್ ಥೋದಿಂದ ಬಂದ ದೃಶ್ಯಾವಳಿಗಳಾಗಿವೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:19 pm, Wed, 23 October 24