ಈ ಭೂಮಿಯಲ್ಲಿ ಹಲವಾರು ಬಗೆಯ ಹಾವುಗಳಿವೆ. ಅದರಲ್ಲಿ ಕೆಲವೊಂದು ಹಾವುಗಳು ತುಂಬಾ ವಿಷಪೂರಿತವಾಗಿದ್ದರೆ, ಇನ್ನೂ ಕೆಲವು ಹಾವುಗಳು ಅಷ್ಟೇನೂ ವಿಷಪೂರಿತವಾಗಿರುವುದಿಲ್ಲ. ಇನ್ನೊಂದು ತಮಾಷೆಯ ವಿಷಯ ಏನಪ್ಪಾ ಅಂದ್ರೆ, ಕೆಲವೊಂದು ಹಾವುಗಳು ಅವುಗಳ ಚಿತ್ರವಿಚಿತ್ರ ಬಣ್ಣಗಳ ಕಾರಣದಿಂದಾಗಿ ನೋಡಲು ಹಾವಿನಂತಿರದೆ, ಯಾವುದೋ ಒಂದು ವಸ್ತುವಿನ ತರಹ ಕಾಣಿಸುತ್ತವೆ. ಅಂತಹ ಹಲವು ಹಾವುಗಳಿವೆ. ಇಂತಹ ಸರ್ಪಗಳ ಕುರಿತ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಅರೇ ಇದೇನಿದು ನಿಜ ಸರ್ಪವೇ? ನೋಡಲು ಥೇಟ್ ಸ್ಪೀಡ್ ಬ್ರೇಕರ್ನಂತಿದೆ ಎಂದು ಹಳದಿ ಮತ್ತು ಕಪ್ಪು ಬಣ್ಣದ ವಿಷಪೂರಿತ ಕಟ್ಟು ಹಾವನ್ನು ಕಂಡು ನೆಟ್ಟಿಗರು ಫುಲ್ ಕನ್ಫ್ಯೂಸ್ ಆಗಿದ್ದಾರೆ.
ಈ ವೈರಲ್ ವೀಡಿಯೋವನ್ನು ಜಾರ್ಖಾಂಡ್ ಮೂಲದ ಪ್ರಾಣಿಪ್ರಿಯ ಸಂದೀಪ್ ಜೋಷಿ (@sandeepjoshi.22) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಅಪರೂಪವಾಗಿ ಕಾಣಸಿಗುವ ಹಳದಿ ಮತ್ತು ಕಪ್ಪು ಬಣ್ಣದ ಕಟ್ಟು ಹಾವುಗಳೆರಡು ನದಿದಡದಲ್ಲಿ ಸರಸರನೇ ತೆವಳಿಕೊಂಡು ಹೋಗುವುದನ್ನು ಕಾಣಬಹುದು.
ವಿಡಿಯೋದಲ್ಲಿ ಥೇಟ್ ರಸ್ತೆಗಳಲ್ಲಿರುವ ಸ್ಪೀಡ್ ಬ್ರೇಕರ್ನಂತೆಯೇ ಕಾಣುವ ಹಳದಿ ಮತ್ತು ಕಪ್ಪು ಬಣ್ಣದ ಅಪರೂಪದ ಪಟ್ಟೆ ಹಾವುಗಳೆರಡು ನಾ ಮುಂದು ತಾ ಮುಂದು ಎಂದುಕೊಂಡು ನದಿ ದಡಲ್ಲಿನ ನೀರಿನಲ್ಲಿ ಸರಸರನೆ ತೇಳಿಕೊಂಡು ಹೋಗುತ್ತವೆ. ನಂತರ ಅದರಲ್ಲಿ ಒಂದು ಪಟ್ಟೆ ಹಾವು ಸಂದೀಪ್ ಅವರ ಮೈಮೇಲೆ ಹತ್ತಿಕೊಂಡು ಬರುವುದನ್ನು ಕಾಣಬಹುದು. ಆದರೂ ಈ ಹಾವಿಗೆ ಭಯಪಡದೆ ಧೈರ್ಯದಿಂದ ಸಂದೀಪ್ ಅವರು ಕ್ಯಾಮರಾಗೆ ಪೋಸ್ ನೀಡುತ್ತಾರೆ. ಈ ವಿಚಿತ್ರ ಹಾವನ್ನು ಕಂಡು ಇಂತಹ ಬಣ್ಣಬಣ್ಣದ ಹಾವುಗಳಿರುತ್ತವೆಯೇ ಎಂದು ಹಲವರು ಆಶ್ಚರ್ಯಚಕಿತರಾಗಿದ್ದರೆ.
ಇದನ್ನೂ ಓದಿ: ಪ್ಲಾಸ್ಟಿಕ್ ಸರ್ಜರಿಯ ಬಳಿಕ ಡ್ರೈವಿಂಗ್ ಲೈಸೆನ್ಸ್ ರಿನಿವಲ್ ಮಾಡಲು ಸಾಧ್ಯವಾಗದೇ ಸಮಸ್ಯೆಗೆ ಸಿಲುಕಿದ ಮಹಿಳೆ
ಐದು ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 9.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 433K ಲೈಕ್ಸ್ಗಳನ್ನು ಪಡೆದುಕೊಂಡಿವೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಈ ಹಾವು ರಸ್ತೆಗಳಲ್ಲಿರುವ ಸ್ಪೀಡ್ ಬ್ರೇಕರ್ನಂತಿದೆʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಹಾವು ರಸ್ತೆಗಳಲ್ಲಿ ಇರುವ ಜೀಬ್ರಾ ಕ್ರಾಸಿಂಗ್ ಚಿಹ್ನೆಯಂತಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಅತ್ಯಂತ ಅಪಾಯಕಾರಿ ಹಾವು, ಸಹೋದರ ನೀನು ಸಾವಿನೊಂದಿಗೆ ಆಟವಾಡುತ್ತಿದ್ದೀಯಾ ಜೋಪಾನʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: