ಇಟಾಲಿಯನ್ ಕಾನ್ಸುಲ್ ಜನರಲ್ ಹೃದಯ ಗೆದ್ದ ಬೆಂಗಳೂರು ಮಸಾಲೆ ದೋಸೆ

ಬೆಂಗಳೂರು ವಿಶ್ವದ ಅತ್ಯುತ್ತಮ ನಗರಗಳಲ್ಲಿ 29ನೇ ಸ್ಥಾನ ಪಡೆದಿದೆ. ಇಲ್ಲಿನ ಆಹಾರ ವೈವಿಧ್ಯತೆ, ಅದರಲ್ಲೂ ಮಸಾಲೆ ದೋಸೆ ಇಟಲಿಯ ರಾಜತಾಂತ್ರಿಕ ಜಿಯಾಂಡೊಮೆನಿಕೊ ಮಿಲಾನೊ ಅವರ ಮನ ಗೆದ್ದಿದೆ. ಇಟಾಲಿಯನ್ ಪಾಕಪದ್ಧತಿ ವಾರದ ಆಚರಣೆ ವೇಳೆ ಮಿಲಾನೊ, ಬೆಂಗಳೂರಿನ ಮಸಾಲೆ ದೋಸೆ ತಮ್ಮ ನೆಚ್ಚಿನ ಉಪಹಾರ ಎಂದು ಹೇಳಿದ್ದಾರೆ.

ಇಟಾಲಿಯನ್ ಕಾನ್ಸುಲ್ ಜನರಲ್ ಹೃದಯ ಗೆದ್ದ ಬೆಂಗಳೂರು ಮಸಾಲೆ ದೋಸೆ
ಬೆಂಗಳೂರು ಮಸಾಲೆ ದೋಸೆ

Updated on: Nov 22, 2025 | 3:10 PM

ಬೆಂಗಳೂರು ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ 29ನೇ ಸ್ಥಾನವನ್ನು (Bengaluru Masala Dosa) ಪಡೆದಿದೆ. ತಂತ್ರಜ್ಞಾನ, ಹಸಿರು, ವಿಜ್ಞಾನಕ್ಕೆ ಪ್ರೋತ್ಸಾಹ, ಸುರಕ್ಷತೆ, ಪ್ರವಾಸಿ ತಾಣ ಇತರ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಸ್ಥಾನವನ್ನು ನೀಡಲಾಗಿದೆ. ಇದರಲ್ಲಿ ಆಹಾರ ಪದ್ಧತಿ ಹಾಗೂ ರುಚಿ ಕೂಡ ಸೇರಿಕೊಂಡಿದೆ. ಬೆಂಗಳೂರು ವಿವಿಧ ಶೈಲಿಯ ಹಾಗೂ ಬೇರೆ ಬೇರೆ ಜಿಲ್ಲೆ, ರಾಜ್ಯಗಳ ಆಹಾರಕ್ಕೂ ಪ್ರೋತ್ಸಾಹ ಕೂಡ ನೀಡುತ್ತದೆ. ಹೀಗಾಗಿ ದೇಶ, ವಿದೇಶದ ಜನರಿಗೆ ಬೆಂಗಳೂರಿನ ಆಹಾರ ತುಂಬಾ ಇಷ್ಟ. ಇದೀಗ ಇಟಲಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ಬೆಂಗಳೂರಿನ ಆಹಾರದ ರುಚಿಯನ್ನು ಇಷ್ಟಪಟ್ಟಿದ್ದಾರೆ. ಇಟಲಿಯಲ್ಲಿ ಈ ವರ್ಷ(2025) ನಡೆದ ಸೆಟ್ಟಿಮಾನ ಡೆಲ್ಲಾ ಕುಸಿನಾ ಇಟಾಲಿಯಾನ ನೆಲ್ ಮಾಂಡೋ (ಇಟಾಲಿಯನ್​​ನಲ್ಲಿ ವಿಶ್ವದ ಪಾಕಪದ್ಧತಿಯ ವಾರ) ಆಚರಣೆಯ 10ನೇ ವಾರದಂದು ಕಾನ್ಸುಲ್ ಜನರಲ್ ಜಿಯಾಂಡೊಮೆನಿಕೊ ಮಿಲಾನೊ ಅವರು ಬೆಂಗಳೂರಿನ ಅತ್ಯಂತ ಪ್ರಸಿದ್ಧ ಭಕ್ಷ್ಯಗಳಲ್ಲಿ ಒಂದಕ್ಕೆ ತಾನು ತುಂಬಾ ಆಕರ್ಷಿತನಾಗಿದ್ದೇನೆ ಎಂದು ಹೇಳಿದ್ದಾರೆ.

“ನಾನು ಪ್ರತಿದಿನ ಮಸಾಲೆ ದೋಸೆ ತಿನ್ನಬಲ್ಲೆ, ಬೆಂಗಳೂರಿನಲ್ಲಿ ಅದು ನನ್ನ ನೆಚ್ಚಿನ ಉಪಹಾರ” ಎಂದು ಹೇಳಿದ್ದಾರೆ. ಜಗತ್ತಿನ ಬೇರೆ ಬೇರೆ ದೇಶಗಳ ಆಹಾರಗಳನ್ನು ಇಷ್ಟಪಡುವ ಜಿಯಾಂಡೊಮೆನಿಕೊ ಮಿಲಾನೊ ಅವರು ಬೆಂಗಳೂರಿನ ಆಹಾರದ ಬಗ್ಗೆಯೂ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ . ಇಟಲಿಯ ಜಾಗತಿಕ ಪಾಕ ಪದ್ಧತಿಯನ್ನು ಜಗತ್ತಿನ ಮುಂದೆ ತೋರಿಸುವ ಈ ವಿಶೇಷ ಆಚರಣೆಯನ್ನು ಈ ವರ್ಷವು ಸಂಪ್ರದಾಯಕವಾಗಿ ಆಚರಣೆ ಮಾಡಲಾಯಿತು. ಇಟಲಿಯ ಆಹಾರದಲ್ಲಿ ನಾವೀನ್ಯತೆ, ಆರೋಗ್ಯ ಮತ್ತು ಸುಸ್ಥಿರತೆ ಎಷ್ಟಿದೆ ಎಂಬುದನ್ನು ತೋರಿಸಬೇಕು ಎಂಬುದು ಈ ಆಚರಣೆಯ ಉದ್ದೇಶವಾಗಿದೆ.

ಇದನ್ನೂ ಓದಿ: ವಿಶ್ವದ ಟಾಪ್ 30 ನಗರಗಳಲ್ಲಿ ಬೆಂಗಳೂರಿಗೂ ಸ್ಥಾನ

ಇಟಾಲಿಯನ್ ಪಾಕಪದ್ಧತಿಯನ್ನು ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿಯಲ್ಲಿ ಸೇರ್ಪಡೆಗೆ ನಾಮನಿರ್ದೇಶನ ಮಾಡಲಾಗಿರುವುದರಿಂದ 2025ರ ಈ ಆಚರಣೆ ತುಂಬಾ ವಿಶೇಷವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಬಗ್ಗೆ ಮಾತನಾಡಿದ ಜಿಯಾಂಡೊಮೆನಿಕೊ ಮಿಲಾನೊ, ” ಇಟಾಲಿಯನ್ ಆಹಾರವು ಕೇವಲ ರುಚಿಯಲ್ಲ, ಸಾಂಸ್ಕೃತಿಕ ಉಸ್ತುವಾರಿ, ರುಚಿಕರವಾದ, ಆರೋಗ್ಯಕರ, ಗ್ರಹಿಕೆ ಸ್ನೇಹಿ ಮತ್ತು ಭವಿಷ್ಯವನ್ನು ನೋಡುವ ಪಾಕಪದ್ಧತಿಯನ್ನು ಬೆಂಬಲಿಸುವ ಜವಾಬ್ದಾರಿಯಾಗಿದೆ. ಇಟಲಿಯ ಆಹಾರ ಪದ್ಧತಿಯ  ಜತೆಗೆ ಬೇರೆ ಬೇರೆ ದೇಶಗಳ ಆಹಾರವನ್ನು ಕೂಡ ಈ ಆಚರಣೆಯಲ್ಲಿ ಪ್ರದರ್ಶನ ಮಾಡಲಾಗುವುದು. ನಾನು ಬೆಂಗಳೂರಿಗೆ ಹೋದ ಸಮಯದಲ್ಲಿ ಅಲ್ಲಿ ಮಸಾಲೆ ದೋಸೆಯನ್ನೇ ಸೇವನೆ ಮಾಡುವುದು. ನನಗೆ ಮಸಾಲೆ ದೋಸೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ