World’s Best Cities: ವಿಶ್ವದ ಟಾಪ್ 30 ನಗರಗಳಲ್ಲಿ ಬೆಂಗಳೂರಿಗೂ ಸ್ಥಾನ
ರೆಸೋನೆನ್ಸ್ ಕನ್ಸಲ್ಟೆನ್ಸಿ 2025-26ರ ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯನ್ನು ಪ್ರಕಟಿಸಿದ್ದು, ಬೆಂಗಳೂರು ಟಾಪ್ 30 ನಗರಗಳಲ್ಲಿ 29ನೇ ಸ್ಥಾನ ಗಳಿಸಿದೆ. ಇದು ನಗರಕ್ಕೆ ದೊರೆತ ದೊಡ್ಡ ಗೌರವವಾಗಿದೆ. ತಂತ್ರಜ್ಞಾನ, ಪರಿಸರ, ಆಹಾರ ಸಂಸ್ಕೃತಿ, ಸುರಕ್ಷತೆ ಮತ್ತು ಪ್ರವಾಸೋದ್ಯಮದಂತಹ ಅಂಶಗಳ ಆಧಾರದ ಮೇಲೆ ಈ ಸ್ಥಾನವನ್ನು ನೀಡಲಾಗಿದೆ. ಲಂಡನ್ ಪ್ರಥಮ ಸ್ಥಾನದಲ್ಲಿದ್ದು, ಮುಂಬೈ, ದೆಹಲಿ, ಹೈದರಾಬಾದ್ ಕೂಡ ಪಟ್ಟಿಯಲ್ಲಿವೆ.

ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರು (Bengaluru) ಕೂಡ ಒಂದು ಸ್ಥಾನ ಪಡೆದುಕೊಂಡಿದೆ. ಇದು ಬೆಂಗಳೂರಿಗೆ ದೊಡ್ಡ ಗೌರವ ಎಂದು ಹೇಳಲಾಗಿದೆ. ರೆಸೋನೆನ್ಸ್ ಕನ್ಸಲ್ಟೆನ್ಸಿ ಬಿಡುಗಡೆ ಮಾಡಿದ 30 ಟಾಪ್ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ರೆಸೋನೆನ್ಸ್ ಕನ್ಸಲ್ಟೆನ್ಸಿ ಕೆಲವೊಂದು ಅಂಶಗಳನ್ನು ಇಟ್ಟುಕೊಂಡು ಈ ವರದಿಯನ್ನು ನೀಡಿದೆ. 2025-26ರಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಭೇಟಿ ನೀಡಲು ಯೋಗ್ಯವಾದ ವಿಶ್ವದ ಟಾಪ್ 100 ಅತ್ಯುತ್ತಮ ನಗರಗಳನ್ನು ಈ ಪಟ್ಟಿಯಲ್ಲಿ ತಿಳಿಸಿದೆ. ಅದರಲ್ಲಿ 30 ಅತ್ಯುತ್ತಮ ನಗರಗಳನ್ನು ವಿಭಾಗಿಸಿದೆ. ಇನ್ನು ಈ ವರದಿಯಲ್ಲಿ ಯುರೋಪಿಯನ್ ನಗರಗಳು ಪ್ರಾಬಲ್ಯ ಸಾಧಿಸಿದ್ದು, ಏಷ್ಯಾದ ಎರಡು ನಗರಗಳು ಮಾತ್ರ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದೆ. ಅವುಗಳು ಯಾವುವು? ಬೆಂಗಳೂರಿಗೆ ಎಷ್ಟನೇ ಸ್ಥಾನ ನೀಡಲಾಗಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಈ ವರದಿಯೂ ಸಾರ್ವಜನಿಕ ಗ್ರಹಿಕೆ, ಜನಸಂಖ್ಯೆ, ಆರ್ಥಿಕ ಶಕ್ತಿ, ಪ್ರವಾಸೋದ್ಯಮ ಆಹಾರ ಸಂಸ್ಕೃತಿ, ಸಾರಿಗೆ, ಪರಿಸರ ಮತ್ತು ದೀರ್ಘಕಾಲೀನ ಜೀವನಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸ್ಥಾನವನ್ನು ನೀಡಿರುತ್ತದೆ. ಇದರಲ್ಲಿ ಮೊದಲು ಟಾಪ್ 10 ನಗರಗಳನ್ನು ತಿಳಿಸಿದೆ. ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಲಂಡನ್ ಸತತ 11ನೇ ವರ್ಷವು ಕೂಡ ಮೊದಲ ಸ್ಥಾನದಲ್ಲೇ ಉಳಿದುಕೊಂಡಿದೆ. ಅಮೆರಿಕಾದ ನ್ಯೂಯಾರ್ಕ್ ನಗರ ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ನಂತರ ಫ್ರಾನ್ಸ್ನ ಪ್ಯಾರಿಸ್ ಮೂರನೇ ಸ್ಥಾನ, ಜಪಾನ್ನ ಸಾಂಸ್ಕೃತಿಕ ನಗರ ಟೊಕಿಯೋ ನಾಲ್ಕನೇ ಸ್ಥಾನ, ಸ್ಪೇನ್ನ ರಾಜಧಾನಿ ಮ್ಯಾಡ್ರಿಡ್ ನಗರ ಐದನೇ ಸ್ಥಾನ, ಸಿಂಗಾಪುರ ನಗರ ಆರನೇ ಸ್ಥಾನ, ರೋಮ್ ಏಳನೇ ಸ್ಥಾನ, ದುಬೈ ಎಂಟನೇ ಸ್ಥಾನ, ಜರ್ಮನಿಯ ರಾಜಧಾನಿ ಬರ್ಲಿನ್ ಒಂಬತ್ತನೇ ಸ್ಥಾನ, ಸ್ಪೇನ್ನ ಬಾರ್ಸಿಲೋನಾ 10ನೇ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ: ನಾಯಿ ಕಚ್ಚಿ ಸಾವನ್ನಪ್ಪಿದವರಿಗೆ 5 ಲಕ್ಷ ರೂ.ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ
ವಿಶ್ವದ ಅತ್ಯುತ್ತಮ 30 ನಗರಗಳಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ?
ಬೆಂಗಳೂರು ವಿಶ್ವದ ಅತ್ಯುತ್ತಮ 30 ನಗರಗಳಲ್ಲಿ 29ನೇ ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಳೂರಿಗೆ ತಂತ್ರಜ್ಞಾನ, ಹಸಿರು, ವಿಜ್ಞಾನಕ್ಕೆ ಪ್ರೋತ್ಸಾಹ, ಆಹಾರ ಪದ್ಧತಿಗಳು, ಸುರಕ್ಷತೆ, ಪ್ರವಾಸಿ ತಾಣಗಳನ್ನು ಗಮನದಲ್ಲಿಟ್ಟುಕೊಂಡು ಈ ಸ್ಥಾನವನ್ನು ನೀಡಲಾಗಿದೆ. ಇದರ ಜತೆಗೆ ವನ್ಯಜೀವಿ ಉದ್ಯಾನವನ, ಟೆಕ್ ಪ್ರಯೋಗಾಲಯ, ಇತಿಹಾಸದ ಪುಸ್ತಕ, ಇನ್ನು ಹಲವು ವಿಚಾರದಲ್ಲಿ ಜಗತ್ತಿನ ಗಮನ ಸೆಳೆದಿದೆ. ಇದರ ಜತೆಗೆ ಭಾರತದ ವಾಣಿಜ್ಯ ನಗರಿ ಮುಂಬೈ 40ನೇ ಸ್ಥಾನ ಪಡೆದಿದ್ದು, ರಾಷ್ಟ್ರ ರಾಜಧಾನಿ ದೆಹಲಿ 54ನೇ ಸ್ಥಾನವನ್ನ ಅಲಂಕರಿಸಿದೆ. 82ನೇ ಸ್ಥಾನದಲ್ಲಿ ತೆಲಂಗಾಣದ ರಾಜಧಾನಿ ಹೈದರಾಬಾದ್ ಪಡೆದುಕೊಂಡಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




