AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sleep Competition: ಜಪಾನ್‌ನಲ್ಲಿ ವಿಚಿತ್ರ ಸ್ಪರ್ಧೆ: ಯಾರು ಚೆನ್ನಾಗಿ ನಿದ್ರೆ ಮಾಡುತ್ತಾರೋ ಅವರಿಗೆ 12 ಲಕ್ಷ!

ನಿದ್ದೆ ಮಾಡಿದರೆ ಹಣ ಸಿಗುತ್ತದೆ ಎಂದರೆ ನಂಬುತ್ತೀರಾ? ಜಪಾನ್‌ನ ಟೋಕಿಯೊದಲ್ಲಿ ನಡೆದ ಮ್ಯಾಟ್ ರೇಸ್ ಎಂಬ ವಿಶಿಷ್ಟ ಸ್ಪರ್ಧೆಯಲ್ಲಿ ಭಾಗವಹಿಸಿದವರು 90 ನಿಮಿಷಗಳ ಕಾಲ ನಿದ್ದೆ ಮಾಡುವ ಮೂಲಕ ಪೈಪೋಟಿ ನಡೆಸಿದ್ದಾರೆ. ನಿದ್ದೆಯ ವೇಗ, ಆಳ, ಗುಣಮಟ್ಟ ಮತ್ತು ಸ್ಥಿರತೆಯನ್ನು ಆಧರಿಸಿ ವಿಜೇತರನ್ನು ಆಯ್ಕೆ ಮಾಡಲಾಗಿದ್ದು, ಗೆದ್ದವರಿಗೆ 2.22 ಮಿಲಿಯನ್ ಯೆನ್ ಬಹುಮಾನ ನೀಡಲಾಗಿದೆ.

Sleep Competition: ಜಪಾನ್‌ನಲ್ಲಿ ವಿಚಿತ್ರ ಸ್ಪರ್ಧೆ: ಯಾರು ಚೆನ್ನಾಗಿ ನಿದ್ರೆ ಮಾಡುತ್ತಾರೋ ಅವರಿಗೆ 12 ಲಕ್ಷ!
Japan Sleep Competition
ಸಾಯಿನಂದಾ
| Edited By: |

Updated on: Oct 07, 2026 | 12:16 PM

Share

ಮುಖ್ಯಾಂಶಗಳು

  • ಮಲಗಿದ್ರೆ ಸಾಕು, 12 ಲಕ್ಷ ಗೆಲ್ಲಬಹುದು!
  • ಜಪಾನ್‌ನ ‘ಸ್ಲೀಪ್ ರೇಸ್’ ವೈರಲ್
  • ಯಾರು ಚೆನ್ನಾಗಿ ನಿದ್ದೆ ಮಾಡ್ತಾರೋ ಅವರೇ ವಿನ್ನರ್

ಸಾಮಾನ್ಯವಾಗಿ ಸ್ಪರ್ಧೆ ಎಂದರೆ ಓಟ, ಆಟ, ಹಾಡು ಅಥವಾ ಬುದ್ಧಿವಂತಿಕೆಗೆ ಸಂಬಂಧಿಸಿದ್ದಾಗಿರುತ್ತದೆ. ಆದರೆ ಜಪಾನ್‌ನಲ್ಲಿ ನಡೆದ ವಿಚಿತ್ರ ಸ್ಪರ್ಧೆಯೊಂದರಲ್ಲಿ ಗೆಲ್ಲಲು ಮಾಡಬೇಕಾಗಿದ್ದದ್ದು ಮಾತ್ರ ಒಂದೇ—ಚೆನ್ನಾಗಿ ನಿದ್ದೆ ಮಾಡುವುದು! ಟೋಕಿಯೊದಲ್ಲಿ ನಡೆದ ‘ಮ್ಯಾಟ್ ರೇಸ್’ ಎಂಬ ಈ ಸ್ಪರ್ಧೆಯಲ್ಲಿ ಭಾಗವಹಿಸಿದವರು 90 ನಿಮಿಷಗಳ ಕಾಲ ನಿದ್ದೆ ಮಾಡುವ ಮೂಲಕ ಪರಸ್ಪರ ಪೈಪೋಟಿ ನಡೆಸಿದ್ದಾರೆ. ವಿಜೇತರಿಗೆ 2.22 ಮಿಲಿಯನ್ ಯೆನ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 12-13 ಲಕ್ಷದ ಬಹುಮಾನ ಸಿಕ್ಕಿದೆ.

ಅಕ್ಟೋಬರ್ 5ರಂದು ಟೋಕಿಯೊದಲ್ಲಿ ನಡೆದ ಈ ವಿಶಿಷ್ಟ ಸ್ಪರ್ಧೆಯನ್ನು ಹಾಸಿಗೆ ಮತ್ತು ಮ್ಯಾಟ್ರೆಸ್ ತಯಾರಿಕಾ ಕಂಪನಿ ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದವರು ಆರಾಮದಾಯಕ ಮ್ಯಾಟ್ರೆಸ್‌ಗಳ ಮೇಲೆ ಮಲಗಿ ನಿದ್ದೆಗೆ ಜಾರಬೇಕಿತ್ತು. ಆದರೆ ಯಾರು ಮೊದಲು ಕಣ್ಣು ಮುಚ್ಚಿದರು ಎಂಬುದಷ್ಟೇ ಇಲ್ಲಿ ಮುಖ್ಯವಾಗಿರಲಿಲ್ಲ. ಸ್ಪರ್ಧಿಗಳ ನಿದ್ದೆಯ ಗುಣಮಟ್ಟವನ್ನು ವಿಶೇಷ ಸಾಧನಗಳ ಮೂಲಕ ಮೇಲ್ವಿಚಾರಣೆ ಮಾಡಲಾಗಿತ್ತು.

90 ನಿಮಿಷ ನಿದ್ದೆ, ಆದರೆ ಗೆಲುವು ಅಷ್ಟು ಸುಲಭವಲ್ಲ!

ಸ್ಪರ್ಧಿಗಳ ತಲೆಗೆ ನಿದ್ದೆ ಮೇಲ್ವಿಚಾರಣೆ ಮಾಡುವ ಸಾಧನಗಳನ್ನು ಅಳವಡಿಸಲಾಗಿತ್ತು. ಅವರು ಎಷ್ಟು ಬೇಗ ನಿದ್ದೆಗೆ ಜಾರಿದರು, ಎಷ್ಟು ಆಳವಾಗಿ ನಿದ್ದೆ ಮಾಡಿದರು, ನಿದ್ದೆ ಎಷ್ಟು ಸ್ಥಿರವಾಗಿತ್ತು ಮತ್ತು ಒಟ್ಟಾರೆ ನಿದ್ದೆಯ ಗುಣಮಟ್ಟ ಹೇಗಿತ್ತು ಎಂಬ ಅಂಶಗಳನ್ನು ಪರಿಗಣಿಸಿ ಅಂಕ ನೀಡಲಾಗಿತ್ತು. ಹೀಗಾಗಿ ಮೊದಲು ಮಲಗಿದವರೇ ಗೆಲ್ಲುತ್ತಾರೆ ಎಂಬ ನಿಯಮ ಇರಲಿಲ್ಲ.

ಅಷ್ಟೇ ಅಲ್ಲ, ಸ್ಪರ್ಧಿಗಳ ನಿದ್ದೆಯ ಸ್ಥಿರತೆಯನ್ನು ಪರೀಕ್ಷಿಸಲು ಮಧ್ಯದಲ್ಲಿ ಕೆಲವು ಅಡ್ಡಿಪಡಿಸುವ ಪ್ರಯತ್ನಗಳನ್ನೂ ಮಾಡಲಾಗಿತ್ತು. ಆದರೂ ನಿದ್ದೆಯಿಂದ ಎಚ್ಚರಗೊಳ್ಳದೆ ಉತ್ತಮ ಗುಣಮಟ್ಟದ ನಿದ್ದೆ ಮುಂದುವರಿಸುವುದು ಗೆಲುವಿಗೆ ಪ್ರಮುಖವಾಗಿತ್ತು.

ಸ್ಪರ್ಧೆಯ ಬಗ್ಗೆ ತಿಳಿದುಬಂದಂತೆ, ಈ ಕಾರ್ಯಕ್ರಮಕ್ಕೆ 45 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅಂತಿಮವಾಗಿ ಆಯ್ಕೆಯಾದ ಸ್ಪರ್ಧಿಗಳು ಟೋಕಿಯೊದಲ್ಲಿ ನಡೆದ ವಿವಿಧ ಸುತ್ತುಗಳಲ್ಲಿ ಭಾಗವಹಿಸಿದ್ದರು. ಕೆಲವರು ನಿದ್ದೆಗೆ ಹೋಗುವ ಮುನ್ನ ತಮ್ಮ ನೆಚ್ಚಿನ ಆಟಿಕೆಗಳನ್ನೂ ಜೊತೆಗೆ ತಂದಿದ್ದರು.

ಜಪಾನ್‌ನಲ್ಲಿ ನಿದ್ದೆಗೇ ಇಷ್ಟೊಂದು ಮಹತ್ವ ಏಕೆ?

ನಿದ್ದೆ ಸ್ಪರ್ಧೆಯ ಹಿಂದೆ ಕೇವಲ ಮನರಂಜನೆಯ ಉದ್ದೇಶವಿರಲಿಲ್ಲ. ಜಪಾನ್‌ನಲ್ಲಿ ನಿದ್ದೆಯ ಕೊರತೆ ಒಂದು ಗಂಭೀರ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಜನರಲ್ಲಿ ಉತ್ತಮ ನಿದ್ದೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವೂ ಈ ಕಾರ್ಯಕ್ರಮಕ್ಕಿತ್ತು. ಆಯೋಜಕರ ಪ್ರಕಾರ, ನಿದ್ದೆಯನ್ನು ಒಂದು ಕಾರ್ಯಕ್ರಮವನ್ನಾಗಿ ಮಾಡುವ ಮೂಲಕ ಜನರು ತಮ್ಮ ವಿಶ್ರಾಂತಿಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂಬ ಸಂದೇಶ ನೀಡುವುದು ಉದ್ದೇಶವಾಗಿತ್ತು.

ಈ ಸ್ಪರ್ಧೆಯಲ್ಲಿ ಅಂತಿಮವಾಗಿ ‘Suimii’ ಎಂಬ ಅಡ್ಡಹೆಸರಿನಿಂದ ಗುರುತಿಸಲ್ಪಟ್ಟ ಸ್ಪರ್ಧಿ ವಿಜೇತರಾಗಿದ್ದಾರೆ. ಬಹುಮಾನದ ಹಣವನ್ನು ಸ್ವಂತವಾಗಿ ಮನೆಗೆ ಸ್ಥಳಾಂತರಗೊಳ್ಳುವ ವೆಚ್ಚಕ್ಕೆ ಬಳಸುವುದಾಗಿ ಅವರು ಹೇಳಿದ್ದಾರೆ. ಜೊತೆಗೆ ತಮಗೆ ಇಷ್ಟವಾದ ‘ಪ್ರಿನ್ಸೆಸ್ ಬೆಡ್’ ಖರೀದಿಸುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಹಣಕ್ಕಾಗಿ ಜನರು ಓಡುವುದನ್ನು ನೋಡಿರುವ ನಮಗೆ, ಹಣಕ್ಕಾಗಿ ಜನರು ಮಲಗುವ ಸ್ಪರ್ಧೆ ನಡೆದಿರುವುದು ಅಚ್ಚರಿ ಮೂಡಿಸುವಂತಿದೆ. ಆದರೆ ಈ ವಿಚಿತ್ರ ಸ್ಪರ್ಧೆಯ ಮೂಲಕ ಉತ್ತಮ ನಿದ್ದೆಯ ಮಹತ್ವದ ಬಗ್ಗೆಯೂ ಗಮನ ಸೆಳೆಯಲಾಗಿದೆ.

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More