Jwala Gutta: ಟ್ರೋಲಿಗರಿಗೆ ಝಾಡಿಸಿದ ಜ್ವಾಲಾ ಗುಟ್ಟಾ, ಎರಡು ವರ್ಷಗಳ ನಂತರ ಮತ್ತೆ ವೈರಲ್ ಆದ ವಿಡಿಯೋ
Jwala Gutta Viral Video: ಜ್ವಾಲಾ ಗುಟ್ಟಾರ ತಾಯಿಯ ಮೂಲ ಚೀನಾ ಆಗಿದ್ದರಿಂದ ಈ ಯುವಕ ಜ್ವಾಲಾರ ಬಗ್ಗೆ ಚೀನಾ ಮಾಲ್ ಎಂದು ಕೀಳಾಗಿ ಕಮೆಂಟ್ ಮಾಡಿದ್ದ. ಅದನ್ನೇ ಇಟ್ಟುಕೊಂಡು ಮರುಪ್ರಶ್ನೆ ಕೇಳಿದ ಜ್ವಾಲಾ ಹಾಗೂ ನಿರೂಪಕ ರಣ್ವಿಜಯ್ ಸಿಂಗ್ ಆತನ ಉದ್ದೇಶದ ಕುರಿತು ಗಂಭೀರವಾಗಿ ಪ್ರಶ್ನಿಸಿ ಬೆವರಿಳಿಸಿದ್ದಾರೆ.
ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ (Jwala Gutta) ಮತ್ತೆ ಸುದ್ದಿಯಲ್ಲಿದ್ದಾರೆ. ವಿವಿಧ ಕಾರಣಗಳಿಗಾಗಿ ಹಲವು ಬಾರಿ ಟ್ರೋಲ್ ಆಗಿದ್ದ ಜ್ವಾಲಾ ಗುಟ್ಟಾ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದಷ್ಟು ಜನ ಕೀಳು ಪರಿಭಾಷೆಯಲ್ಲಿ ಈ ಹಿಂದೆ ಕಮೆಂಟ್ ಮಾಡಿದ್ದರು. ಅಷ್ಟೇ ಅಲ್ಲದೇ ಜ್ವಾಲಾ ಗುಟ್ಟಾ ಅವರ ಬಟ್ಟೆ, ಆಟದ ಶೈಲಿ, ಮೂಲ, ಚರ್ಮದ ಬಣ್ಣ ಹೀಗೆ ತೀರಾ ವೈಯಕ್ತಿಕ ವಿಚಾರಗಳನ್ನೂ ಎಳೆದು ತಂದು ಟೀಕಿಸಿದ್ದರು. ಇದನ್ನೆಲ್ಲಾ ಇಟ್ಟುಕೊಂಡು ಎಂಟಿವಿ ವಾಹಿನಿಯ ಟ್ರೋಲ್ ಪೊಲೀಸ್ ಕಾರ್ಯಕ್ರಮದಲ್ಲಿ ಜ್ವಾಲಾ ಗುಟ್ಟಾ ತನ್ನನ್ನು ಟ್ರೋಲ್ ಮಾಡಿದ ಶಿವಂ ಎಂಬ ಯುವಕನಿಗೆ ನೇರಾನೇರ ಪ್ರಶ್ನೆ ಕೇಳಿ ನೀರಿಳಿಸಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಟ್ರೋಲ್ ಮಾಡುವವರಿಗೆ ಹೀಗೇ ಮಂಗಳಾರತಿ ಮಾಡಬೇಕೆಂದು ಜನ ಅಭಿಪ್ರಾಯಪಟ್ಟಿದ್ದಾರೆ.
ಜ್ವಾಲಾ ಗುಟ್ಟಾರನ್ನು ಟ್ರೋಲ್ ಮಾಡಿದ 19 ವರ್ಷದ ಶಿವಂ ಎಂಬಾತನನ್ನು ಕಾರ್ಯಕ್ರಮದ ಸೆಟ್ಗೆ ಕರೆತರಲಾಗುತ್ತದೆ. ಕಾರ್ಯಕ್ರಮದ ನಿರೂಪಕ ಮತ್ತು ಜ್ವಾಲಾ ಗುಟ್ಟಾ ಇಬ್ಬರೂ ಶಿವಂ ಎಂಬಾತನನ್ನು ನಿಧಾನಕ್ಕೆ ಮಾತಿಗೆಳೆಯುತ್ತಾರೆ. ನನ್ನನ್ನು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಟ್ರೋಲ್ ಮಾಡಿದ್ದು ನೀವೇ ಅಲ್ಲವೇ? ಎಂಬಲ್ಲಿಂದ ತುಸು ಖಾರವಾಗಿ ಮಾತು ಆರಂಭಿಸುವ ಜ್ವಾಲಾ, ನನಗೆ ಬ್ಯಾಡ್ಮಿಂಟನ್ ಆಟದಲ್ಲಿ 25 ವರ್ಷದ ಅನುಭವ ಇದೆ. ಆದರೆ, ನಿಮಗೆ ಅಷ್ಟು ವಯಸ್ಸೂ ಆಗಿಲ್ಲ ಎಂದು ಝಾಡಿಸಲಾರಂಭಿಸಿದ್ದಾರೆ. ಅವರಿಗೆ ಸಾಥ್ ನೀಡಿದ ಕಾರ್ಯಕ್ರಮ ನಿರೂಪಕ ರಣ್ವಿಜಯ್ ಸಿಂಗ್ ಟ್ರೋಲ್ ಮಾಡಿದಾತನಿಗೆ ತಿರುಗುಬಾಣ ಬಿಟ್ಟು ಉತ್ತರ ಕೇಳಿದ್ದಾರೆ.
ಒಂದಷ್ಟು ಪ್ರಶ್ನೆಗಳಿಗೆ ಶಿವಂ ಉತ್ತರಿಸಿ, ಸಮಜಾಯಿಷಿ ನೀಡಲು ಯತ್ನಿಸಿದ್ದರೂ ನಿಧಾನಕ್ಕೆ ಆತನಿಗೆ ತನ್ನ ತಪ್ಪಿನ ಅರಿವಾಗಲು ಆರಂಭಿಸಿದೆ. ಮೇಲಿಂದ ಮೇಲೆ ಎದುರಾಗುತ್ತಿದ್ದ ಪ್ರಶ್ನೆಗಳು, ತಾನೇ ಮಾಡಿದ ಹಳೆಯ ಟ್ರೋಲ್ಗಳ ಸಾಕ್ಷಿ ತನಗೆ ತಿರುಗುಬಾಣವಾಗಲು ಆರಂಭಿಸಿದಾಗಿ ಸಹಜವಾಗಿ ಬೆವರಿಳಿಯಲು ಆರಂಭವಾಗಿದೆ. ಜ್ವಾಲಾರ ಮೇಕಪ್ ಬಗ್ಗೆ ಮಾತನಾಡಿದ್ದ ಯುವಕನಿಗೆ ನೀವು ಗಡ್ಡ ಬಿಟ್ಟಿದ್ದೇಕೆ? ನಾನು ಹೇಗಿದ್ದರೂ ನಿಮಗೇನು ಸಮಸ್ಯೆ ಎಂದು ತಿರುಗೇಟು ನೀಡಿದ್ದಾರೆ.
ಅಷ್ಟೇ ಅಲ್ಲದೇ ಜ್ವಾಲಾರ ತಾಯಿಯ ಮೂಲ ಚೀನಾ ಆಗಿದ್ದರಿಂದ ಈ ಯುವಕ ಜ್ವಾಲಾರ ಬಗ್ಗೆ ಚೀನಾ ಮಾಲ್ ಎಂದು ಕೀಳಾಗಿ ಕಮೆಂಟ್ ಮಾಡಿದ್ದ. ಅದನ್ನೇ ಇಟ್ಟುಕೊಂಡು ಮರುಪ್ರಶ್ನೆ ಕೇಳಿದ ಜ್ವಾಲಾ ಹಾಗೂ ನಿರೂಪಕ ರಣ್ವಿಜಯ್ ಸಿಂಗ್ ಆತನ ಉದ್ದೇಶದ ಕುರಿತು ಗಂಭೀರವಾಗಿ ಪ್ರಶ್ನಿಸಿ ಬೆವರಿಳಿಸಿದ್ದಾರೆ. ಹೀಗೆ ಒಂದಾದ ಮೇಲೊಂದು ಬೆಂಕಿ ಉಂಡೆಯಂತಹ ಪ್ರಶ್ನೆಗಳು ಬಂದ ನಂತರ ಯುವಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ವಿಡಿಯೋ ಸುಮಾರು ಎರಡು ವರ್ಷ ಹಳೆಯದಾದರೂ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನು ನೋಡಿದ ಜನಸಾಮಾನ್ಯರು ಟ್ರೋಲ್ ಮಾಡುವವರಿಗೆ ಹೀಗೇ ಬೆವರಿಳಿಸಬೇಕೆಂದು ಸಹಮತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಸರ್ಕಾರದ ಆಲೋಚನೆ; ಬಿಜೆಪಿ ನಾಯಕ ರಾಮ್ ಮಾಧವ್