ಕಾರ್ಗಿಲ್ ಯುದ್ಧ: 23 ವರ್ಷಗಳ ವಿಜಯದ ಸ್ಮರಣಾರ್ಥ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಬೈಕ್‌ ರ‍್ಯಾಲಿ ಕೈಗೊಂಡ ಭಾರತೀಯ ಸೇನೆ

| Updated By: Rakesh Nayak Manchi

Updated on: Jul 24, 2022 | 3:20 PM

ಪಾಕ್ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯಶಾಲಿಯಾಗಿ 23 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆ ಭಾರತೀಯ ಸೇನೆಯು ಯುದ್ಧ ಸ್ಮಾರಕಕ್ಕೆ ಬೈಕ್ ರ್ಯಾಲಿ ಕೈಗೊಂಡಿದೆ. ಇದರ ಭಾಗವಾಗಿ ನುಬ್ರಾ ಕಣಿವೆಯನ್ನು ತಲುಪಿದ ಸೇನೆಯು ಗಾಲ್ವಾನ್ ಕಣಿವೆಯ ವೀರರಿಗೆ ಗೌರವ ಸಲ್ಲಿಸಿದೆ.

ಕಾರ್ಗಿಲ್ ಯುದ್ಧ: 23 ವರ್ಷಗಳ ವಿಜಯದ ಸ್ಮರಣಾರ್ಥ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಬೈಕ್‌ ರ‍್ಯಾಲಿ ಕೈಗೊಂಡ ಭಾರತೀಯ ಸೇನೆ
ಬೈಕ್ ರ್ಯಾಲಿ ಕೈಗೊಂಡ ಭಾರತೀಯ ಸೇನೆ
Follow us on

ಕಾರ್ಗಿಲ್ ಪ್ರವೇಶಿಸಿದ ಪಾಕಿಸ್ತಾನದ ವಿರುದ್ಧ ಭಾರತ ಹೋರಾಡಿ ವಿಜಯಸಾಧಿಸಿದ್ದು ಎಲ್ಲರಿಗೂ ಗೊತ್ತೇ ಇದೆ. 1999ರಲ್ಲಿ ನಡೆದ ಈ ಕಾರ್ಗಿಲ್ ಯುದ್ಧದಲ್ಲಿ ಪಾಕ್ ವಿರುದ್ಧ ಭಾರತ ಗೆದ್ದು ಜುಲೈ 26ಕ್ಕೆ 23 ವರ್ಷ ಪೂರೈಸುತ್ತದೆ. ಇದರ ಸ್ಮರಣಾರ್ಥವಾಗಿ ಭಾರತೀಯ ಸೇನೆ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಬೈಕ್ ರ‍್ಯಾಲಿ ಕೈಗೊಂಡಿದೆ. ದೆಹಲಿಯಿಂದ ದ್ರಾಸ್ (ಲಡಾಖ್) ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಬೈಕ್ ರ‍್ಯಾಲಿ ಕೈಗೊಳ್ಳಲಾಗಿದ್ದು, ಭಾರತೀಯ ಸೇನೆಯ ನಾರ್ದರ್ನ್ ಕಮಾಂಡ್ ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದೆ. ಲಡಾಖ್‌ನ ಕಠಿಣ ಭೂಪ್ರದೇಶದ ಮೂಲಕ ನುಬ್ರಾ ಕಣಿವೆಯನ್ನು ತಲುಪಿದ ಸೇನೆಯು ಗಾಲ್ವಾನ್ ಕಣಿವೆಯ ವೀರರಿಗೆ ಗೌರವ ಸಲ್ಲಿಸಿದೆ ಎಂದು ಸೇನೆಯ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಭಾನುವಾರ ತಿಳಿಸಿದೆ.

ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಿಂದ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಅವರು ಧ್ವಜಾರೋಹಣ ನೆರವೇರಿಸಿ ರ‍್ಯಾಲಿಗೆ ಚಾಲನೆ ನೀಡಿದರು. ರ‍್ಯಾಲಿಯಲ್ಲಿ ಒಟ್ಟು 30 ಸದಸ್ಯರಿದ್ದಾರೆ. ಯಾತ್ರೆಯನ್ನು ಕೈಗೊಂಡಿರುವ 30 ಸೇವೆಯಲ್ಲಿರುವ ಸಿಬ್ಬಂದಿಗಳ ತಂಡವು ಭಾರತೀಯ ಸೇನೆಗೆ ಸಮಾನಾರ್ಥಕವಾದ ಧೈರ್ಯ ಮತ್ತು ಸಾಹಸದ ಮನೋಭಾವವನ್ನು ಪುನರುಜ್ಜೀವನಗೊಳಿಸುವ ಮೂಲಕ ಕಾರ್ಗಿಲ್ ವೀರರ ಅದಮ್ಯ ಮನೋಭಾವವನ್ನು ಪುನರಾವರ್ತಿಸಲು ಪ್ರಯತ್ನಿಸುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ರ‍್ಯಾಲಿಯು ಹರಿಯಾಣ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಮೂಲಕ ಹಾದುಹೋಗುತ್ತದೆ. ಜುಲೈ 26 ರಂದು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತಲುಪಿ ಕಾರ್ಗಿಲ್ ವೀರರಿಗೆ ಗೌರವ ಸಲ್ಲಿಸುವ ಮೂಲಕ ರ‍್ಯಾಲಿಯು ಮುಕ್ತಾಯಗೊಳ್ಳಲಿದೆ. ಗರಿಷ್ಠ ಪ್ರದೇಶಗಳನ್ನು ಒಳಗೊಳ್ಳುವ ನಿಟ್ಟಿನಲ್ಲಿ ರ‍್ಯಾಲಿಯನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ಇದು ಎರಡು ವಿಭಿನ್ನ ಅಕ್ಷಗಳ ಉದ್ದಕ್ಕೂ ಚಲಿಸಲಿದ್ದು, ಜೊಜಿಲಾ ಮತ್ತು ರೋಹ್ಟಾಂಗ್ ಹಾದಿಗಳಲ್ಲಿ ಕ್ರಮವಾಗಿ 1,400 ಕಿಮೀ ಮತ್ತು 1,700 ಕಿಮೀ ದೂರವನ್ನು ಸಾಗಲಿದೆ. ರ‍್ಯಾಲಿಯು ಎತ್ತರದ ಪರ್ವತದ ಹಾದಿಗಳು ಮತ್ತು ಪ್ರಯಾಸಕರ ಪಥಗಳನ್ನು ಹಾದುಹೋಗಲಿದೆ.

Published On - 3:17 pm, Sun, 24 July 22