ಕೇರಳ ಮೂಲದ ಎಸ್‌ಡಬ್ಲ್ಯೂಎ ಡೈಮಂಡ್ಸ್ ಅದ್ಭುತ ದಾಖಲೆಯೊಂದನ್ನು ಸೃಷ್ಟಿಸಿದೆ. 24,679 ನೈಸರ್ಗಿಕ ವಜ್ರಗಳನ್ನು ಬಳಸಿ ಅಮಿ ಎಂಬ ಅಣಬೆ ಆಕಾರದ ಉಂಗುರವನ್ನು ತಯಾರಿಸುವ ಮೂಲಕ ಕೇರಳ ಮೂಲದ ಎಸ್‌ಡಬ್ಲ್ಯೂಎ ಡೈಮಂಡ್ಸ್ ಕಂಪನಿ ಗಿನ್ನಿಸ್ ವಿಶ್ವ ದಾಖಲೆ (Guinness World Records) ಬರೆದಿದೆ. ಅಣಬೆಯು ಅಮರತ್ವ ಮತ್ತು ದೀರ್ಘಾಯುಷ್ಯವನ್ನು ಪ್ರತಿನಿಧಿಸುವಂತೆ ಅಮಿ ಎಂಬ ಪದವು ಸಂಸ್ಕೃತದಲ್ಲಿ ಅಮರತ್ವವನ್ನು ಪ್ರತಿನಿಧಿಸುತ್ತದೆ.
ವಿಶ್ವ ದಾಖಲೆ ಬರೆದಿರುವ ಬಗ್ಗೆ ಎಸ್‌ಡಬ್ಲ್ಯೂಎ ಡೈಮಂಡ್ಸ್ ತನ್ನ ಬ್ಲಾಗ್ನಲ್ಲಿ ಬರೆದುಕೊಂಡಿದ್ದು, ಅದರಲ್ಲಿ ಉಂಗುರವನ್ನು ಹೇಗೆ ತಯಾರಿಸಲಾಗಿದೆ ಎಂದು ವಿವರಿಸಲಾಗಿದೆ. ಮೊದಲಿಗೆ 41 ವಿಶಿಷ್ಟವಾದ ಅಣಬೆ ದಳಗಳನ್ನು ಹೊಂದಿರುವ ಉಂಗುರದ ಮೂಲಮಾದರಿಯನ್ನು ಪ್ಲಾಸ್ಟಿಕ್ ಅಚ್ಚು ಬಳಸಿ ವಿನ್ಯಾಸಗೊಳಿಸಲಾಗಿದೆ. ನಂತರ 3D ಮುದ್ರಣದ ಮೂಲಕ ಅದನ್ನು ಮರುಸೃಷ್ಟಿಸಲಾಗಿದೆ. ಅಚ್ಚು ದ್ರವ ಚಿನ್ನದಿಂದ ಕೂಡಿತ್ತು. ಬೇಸ್ ಪೂರ್ಣಗೊಂಡ ನಂತರ ದಳಗಳ ಪ್ರತಿ ಬದಿಯಲ್ಲಿ ವಜ್ರಗಳನ್ನು ಪ್ರತ್ಯೇಕವಾಗಿ ಕೈಯಿಂದ ಇರಿಸಲಾಗುತ್ತದೆ. ಅಂತಿಮವಾಗಿ, ಅಲಂಕೃತ ಅಣಬೆಯ ಆಕಾರವನ್ನು ವೃತ್ತಾಕಾರದ ಬ್ಯಾಂಡ್‌ನಲ್ಲಿ ಇರಿಸಲಾಯಿತು.
SWA ಡೈಮಂಡ್ಸ್ ಪ್ರಕಾರ, ಸಿದ್ಧಪಡಿಸಿದ ಉಂಗುರವು 340 ಗ್ರಾಂ ತೂಗುತ್ತದೆ ಮತ್ತು ಇದರ ಬೆಲೆ $95,243 ಆಗಿದೆ. ಭಾರತದ ಮೌಲ್ಯಕ್ಕೆ ಹೋಲಿಸಿದರೆ ಆ ವಜ್ರದ ಉಂಗುರದ ಅಂದಾಜು ಬೆಲೆ 75,92,838.63 ರೂಪಾಯಿ ಆಗಿದೆ. ಈ ಬಗ್ಗೆ ಮಾತನಾಡಿದ SWA ಡೈಮಂಡ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಗಫೂರ್ ಅನಾದಿಯಾನ್, “ನಾವು ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದಿದ್ದೇವೆ ಎಂದು ತಿಳಿದ ನಂತರ ನಮ್ಮ ತಂಡವು ಸಾಧನೆ ಮತ್ತು ತೃಪ್ತಿಯನ್ನು ಅನುಭವಿಸಿದೆ” ಎಂದು ಹೇಳಿದ್ದಾರೆ.
ಆಭರಣದಲ್ಲಿ ಹೊಸಹೊಸ ಪ್ರಯೋಗಳನ್ನು ಮಾಡುತ್ತಾ ಒಂದಷ್ಟು ವ್ಯಾಪಾರಿಗಳು ವಿಶ್ವ ದಾಖಲೆ ಬರೆಯುತ್ತಿದ್ದಾರೆ. 2020ರಲ್ಲಿ ಹೈದರಾಬಾದ್ ಮೂಲದ ಕೊಟ್ಟಿ ಶ್ರೀಕಾಂತ್ ಎಂಬ ಆಭರಣ ವ್ಯಾಪಾರಿ, ದಿ ಡಿವೈನ್-7801 ಬ್ರಹ್ಮ ವಜ್ರ ಕಮಲಂ ಎಂಬ ಉಂಗುರವನ್ನು ತಯಾರಿಸಿದ್ದರು.
ಹಿಮಾಲಯದಲ್ಲಿ ಕಂಡುಬರುವ ಅಪರೂಪದ ಬ್ರಹ್ಮ ಕಮಲದಿಂದ ಪ್ರೇರೇಪಿತರಾಗಿ ಈ ಉಂಗುರವನ್ನು ತಯಾರಿಸಲಾಗಿದೆ. ಈ ವಜ್ರದ ಉಂಗುರ ತಯಾರಿಕೆಗೆ ಒಟ್ಟು 7,801 ವಜ್ರಗಳನ್ನು ಬಳಸಲಾಗಿದೆ. ಆ ಮೂಲಕ ವಿಶ್ವ ದಾಖಲೆ ಬರೆಯಲಾಗಿತ್ತು. ಅಲ್ಲದೆ ದಕ್ಷಿಣ ಭಾರತದಲ್ಲಿಯೇ ಸಾಧಿಸಿದ ಮೊದಲ ಗಿನ್ನಿಸ್ ದಾಖಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಅಪರೂಪದ ಬ್ರಹ್ಮ ಕಮಲಂ ವಜ್ರದ ಉಂಗುರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Published On - 12:51 pm, Sat, 16 July 22