ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರೂ ವಿಷಯ, ವಿಡಿಯೋ ವೈರಲ್ ಆಗುತ್ತಿದೆಯೆಂದರೆ ಅದರಲ್ಲೇನೋ ವಿಶೇಷ, ವಿಚಿತ್ರ ಎನ್ನಿಸುವಂಥದ್ದು ಇರಲೇಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಜನರ ಕಣ್ಣಿಗೆ ಅಂತಹ ವಿಚಾರಗಳು ಒಮ್ಮೆ ಬಿದ್ದರೂ ಸಾಕು ಅದನ್ನವರು ನೂರಾರು ಜನರಿಗೆ ಕಳುಹಿಸಿ ಅದು ಅಲ್ಲಿಂದ ಸಾವಿರ, ಲಕ್ಷ ಜನರನ್ನು ತಲುಪಿ ಎಲ್ಲೆಡೆ ವ್ಯಾಪಿಸಿಬಿಡುತ್ತದೆ. ಇಲ್ಲೊಂದು ಅಂಥದ್ದೇ ವೈರಲ್ ವಿಡಿಯೋ ಇದೆ. ಕಾಡಿನಲ್ಲಿ ಚಿತ್ರೀಕರಿಸಲಾಗಿರುವ ಈ ದೃಶ್ಯದಲ್ಲಿ ವ್ಯಕ್ತಿಯೊಬ್ಬ ಮೊಟ್ಟೆ ಬೇಯಿಸುತ್ತಿದ್ದು, ಅನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಅರೆ! ಮೊಟ್ಟೆ ಬೇಯಿಸುವುದರಲ್ಲಿ ವಿಶೇಷ ಏನಿದೆ ಎಂದು ನಿಮಗೆ ಅನ್ನಿಸಬಹುದು. ಆದರೆ ಇಲ್ಲಿ ಆ ಮೊಟ್ಟೆಯೇ ವಿಶೇಷ.
ಈ ವಿಡಿಯೋದಲ್ಲಿರುವ ವ್ಯಕ್ತಿಯ ಕೈಯಲ್ಲಿರುವುದು ಸಣ್ಣಪುಟ್ಟ ಕೋಳಿಮೊಟ್ಟೆ ಅಲ್ಲ. ಅದು ಆಸ್ಟ್ರಿಚ್ ಪಕ್ಷಿಯ ದೈತ್ಯಾಕಾರದ ಮೊಟ್ಟೆ. ನಾರ್ವೆಯ ಕಾಡೊಂದರಲ್ಲಿ ಇದನ್ನು ಚಿತ್ರೀಕರಿಸಲಾಗಿದ್ದು, ಬಲವಾದ ಚಾಕುವನ್ನು ಹಿಡಿದು ದೊಡ್ಡ ಮೊಟ್ಟೆಯನ್ನು ಒಡೆಯುವ ವ್ಯಕ್ತಿ ಅದನ್ನು ಬಾಣಲೆಗೆ ಸುರುವಿ ಉಪ್ಪು, ಮೆಣಸಿನ ಪುಡಿ, ಕಾಳುಮೆಣಸಿನ ಪುಡಿ ಹಾಕಿ ಬೇಯಿಸುವುದು ಕಾಣಿಸುತ್ತದೆ.
ಕಾಡಿನಲ್ಲೇ ಸಿಗುವ ಕಟ್ಟಿಗೆಯ ಸಹಾಯದಿಂದ ಮೊಟ್ಟೆಯನ್ನು ಬೇಯಿಸುವ ವ್ಯಕ್ತಿ, ಅದನ್ನು ವಿಡಿಯೋ ಮೂಲಕ ಹೊರ ಜಗತ್ತಿನೊಂದಿಗೆ ಹಂಚಿಕೊಂಡಿದ್ದಾನೆ. ಅಂದಹಾಗೆ ಕಳೆದ ವರ್ಷ ಫೈರ್ ಕಿಚನ್ ಎಂಬ ಯುಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದ್ದ ಈ ವಿಡಿಯೋ ಈ ಬಾರಿ ವೈರಲ್ ಆಗಿದ್ದು, 10 ಲಕ್ಷಕ್ಕೂ ಅಧಿಕ ವೀಕ್ಷಣೆ ಗಿಟ್ಟಿಸಿಕೊಂಡಿದೆ. ಜೊತೆಗೆ 11 ಸಾವಿರಕ್ಕೂ ಅಧಿಕ ಲೈಕ್ಸ್ ಈ ವಿಡಿಯೋಕ್ಕೆ ಬಂದಿದ್ದು, ಆತನ ಪಾಕ ಪ್ರಾವೀಣ್ಯತೆಯನ್ನು ನೋಡಿದ ನೆಟ್ಟಿಗರು ವ್ಹಾರೆ ವ್ಹಾ! ಅಂದಿದ್ದಾರೆ.
ಆಸ್ಟ್ರಿಚ್ ಮೊಟ್ಟೆಯನ್ನು ಚಾಕುವಿನಿಂದ ಒಡೆದು ಅದರ ಒಳಗಿರುವ ಅಂಶವನ್ನೆಲ್ಲಾ ಬಾಣಲೆಗೆ ಸುರಿದು ಆತ ಆಮ್ಲೆಟ್ ಮಾಡುವ ಪರಿಯನ್ನು ನೋಡ ನೋಡುತ್ತಲೇ ಬಾಯಿ ಚಪ್ಪರಿಸಿರುವ ಜನರಲ್ಲಿ ಕೆಲವರು ಆಸ್ಟ್ರಿಚ್ ಮೊಟ್ಟೆ ಎಲ್ಲಿ ಸಿಗುತ್ತೆ ಹೇಳು ಮಾರಾಯ ಎಂದು ದುಂಬಾಲು ಬಿದಿದ್ದಾರೆ. ಕೋಳಿ ಮೊಟ್ಟೆ ಅಥವಾ ಮಾಮೂಲಿ ಸಣ್ಣ ಪುಟ್ಟ ಮೊಟ್ಟೆಗಳನ್ನು ಒಡೆಯುವುದು ನೋಡಿದ್ದೆವು; ಇಷ್ಟು ದೊಡ್ಡ ಮೊಟ್ಟೆಯನ್ನು ನೋಡಿದ್ದೇ ಇದೇ ಮೊದಲು ಎಂದು ಕೆಲ ಮಂದಿ ಹುಬ್ಬೇರಿಸಿದ್ದಾರೆ.
ಅದೇ ಯುಟ್ಯೂಬ್ ಚಾನೆಲ್ನಲ್ಲಿ ಆತ ಇನ್ನೊಂದು ವಿಡಿಯೋ ಹಂಚಿಕೊಂಡಿದ್ದು, ಆಸ್ಟ್ರಿಚ್ ಹಕ್ಕಿಯ ಮೊಟ್ಟೆಯನ್ನು ಬೇಯಿಸಿ ಅದರ ಮೇಲ್ಪದರವನ್ನು ಬಿಡಿಸುವುದು ಹೇಗೆಂದು ವಿವರಿಸಲಾಗಿದೆ. ಮೊದಲಿನ ವಿಡಿಯೋ ನೋಡಿ ಬಾಯಲ್ಲಿ ನೀರೂರಿಸಿದವರೆಲ್ಲರೂ ಮೊಟ್ಟೆ ಬೇಯಿಸುವ ವಿಡಿಯೋವನ್ನೂ ನೋಡಿ, ನಿನಗೆ ಮಾತ್ರ ಇಷ್ಟು ದೊಡ್ಡ ಮೊಟ್ಟೆಯೆಲ್ಲಾ ಸಿಗುವುದು ಹೇಗೆ? ನೀನೇನಾದರೂ ಆಸ್ಟ್ರಿಚ್ ಸಾಕಿದ್ದೀಯಾ ಎಂದು ಬೆರಗಾಗಿದ್ದಾರೆ. ಅಂದಹಾಗೆ, ಈ ವೈರಲ್ ವಿಡಿಯೋವನ್ನು ನೀವಿನ್ನೂ ನೋಡಿಲ್ಲವಾದರೆ ನೋಡಿ ಕಣ್ತುಂಬಿಕೊಳ್ಳಿ.