ಬರೋಬ್ಬರಿ 35 ಸಾವಿರ ರೂಪಾಯಿ ಕೊಟ್ಟು ಬ್ರ್ಯಾಂಡೆಡ್​ ಬೆಲ್ಟ್​ ಖರೀದಿಸಿದ ಮಗಳಿಗೆ ತಿರುಗೇಟು ಕೊಟ್ಟ ಅಮ್ಮ; ವಿಡಿಯೋ ವೈರಲ್

| Updated By: Digi Tech Desk

Updated on: Jun 15, 2021 | 3:26 PM

ಮೊದಲು ಬೆಲ್ಟ್ ನೋಡಿದ ಯುವತಿಯ ತಾಯಿ ಅದನ್ನು ಎಲ್ಲಾ ರೀತಿಯಲ್ಲೂ ಪರಿಶೀಲಿಸಿ ಇದು ಡೆಲ್ಲಿ ಪಬ್ಲಿಕ್​ ಸ್ಕೂಲ್ ಮಕ್ಕಳ ಯೂನಿಫಾರ್ಮ್​ ಬೆಲ್ಟ್ ಇದ್ದ ಹಾಗಿದೆ ಎಂದು ಒಂದೇ ಮಾತಿನಲ್ಲಿ ತೀರ್ಪು ಕೊಟ್ಟುಬಿಟ್ಟಿದ್ದಾರೆ. ನಂತರ ಅದರ ಮೌಲ್ಯ 35 ಸಾವಿರ ರೂಪಾಯಿ ಎಂದಾಗ ಶಾಕ್​ಗೆ ಒಳಗಾಗಿದ್ದಾರೆ.

ಬರೋಬ್ಬರಿ 35 ಸಾವಿರ ರೂಪಾಯಿ ಕೊಟ್ಟು ಬ್ರ್ಯಾಂಡೆಡ್​ ಬೆಲ್ಟ್​ ಖರೀದಿಸಿದ ಮಗಳಿಗೆ ತಿರುಗೇಟು ಕೊಟ್ಟ ಅಮ್ಮ; ವಿಡಿಯೋ ವೈರಲ್
ವೈರಲ್ ಆದ ವಿಡಿಯೋ
Follow us on

ತಲೆಮಾರುಗಳ ನಡುವಿನ ಅಂತರವನ್ನು ಬರೀ ಸಮಯದಲ್ಲಿ ಅಳೆಯುವುದು ಸಾಧ್ಯವಿಲ್ಲ. ಸಮಯದೊಟ್ಟಿಗೆ ಆಲೋಚಿಸುವ ರೀತಿ, ಬದುಕಿನ ಕ್ರಮ, ಆಸೆ, ಆಕಾಂಕ್ಷೆ, ಜೀವನದ ಉದ್ದೇಶ ಎಲ್ಲವೂ ಬದಲಾಗುತ್ತಲೇ ಬಂದಿರುತ್ತವೆ. ಈಗಿನ ಯುವಕ, ಯುವತಿಯರು ಹೆಚ್ಚು ಹಣ ಕೊಟ್ಟು ಕೊಳ್ಳುವ ಬ್ರ್ಯಾಂಡೆಡ್ ಐಟಮ್ಸ್ ಅವರ ಪೋಷಕರ ಪಾಲಿಗೆ ಬರೀ ಹಣ ವ್ಯರ್ಥ ಮಾಡುವ ಅನಾವಶ್ಯಕ ವಸ್ತುಗಳ ರೀತಿ ಕಾಣುತ್ತವೆ. ಅಷ್ಟೆಲ್ಲಾ ದುಡ್ಡು ಕೊಟ್ಟು ಖರೀದಿಸುವುದಕ್ಕಿಂತ ಕಡಿಮೆ ಬೆಲೆಗೆ ಇನ್ನೂ ಚೆನ್ನಾಗಿರೋದು ಸಿಗುತ್ತೆ ಎಂದು ಮಕ್ಕಳಿಗೆ ಬುದ್ಧಿವಾದ ಹೇಳಿಯೇ ಹೇಳುತ್ತಾರೆ. ಏಕೆಂದರೆ, ಹಣ ಉಳಿತಾಯ ಮಾಡಬೇಕು, ಕೈಯಲ್ಲಿದ್ದ ದುಡ್ಡನ್ನೆಲ್ಲಾ ಖರ್ಚು ಮಾಡಿಕೊಳ್ಳಬಾರದು ಎನ್ನುವುದು ಅವರ ನಂಬಿಕೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಮಾಷೆ ವಿಡಿಯೋ ಒಂದು ಈ ತಲೆಮಾರುಗಳ ನಡುವಿನ ಆಲೋಚನೆ ಎಷ್ಟು ಅಜಗಜಾಂತರ ಎಂದು ಹೇಳುವುದಕ್ಕೆ ಕೈಗನ್ನಡಿಯಂತಿದೆ. ಯುವರ್​ ರೆಗ್ಯುಲರ್ ಮಾಮ್ ಎಂಬ ಇನ್​ಸ್ಟಾಗ್ರಾಂ ಪೇಜ್​ ಒಂದರಲ್ಲಿ ಹಂಚಲ್ಪಟ್ಟ ವಿಡಿಯೋದಲ್ಲಿ ತಾಯಿಯೊಬ್ಬರು ತನ್ನ ಮಗಳು ಕೊಂಡುಕೊಂಡ 35 ಸಾವಿರ ರೂಪಾಯಿ ಮೌಲ್ಯದ ಬ್ರ್ಯಾಂಡೆಂಟ್ ಬೆಲ್ಟ್​ ಅನ್ನು ಸ್ಕೂಲ್​ ಬೆಲ್ಟ್ ಥರ ಇದೆ ಎಂದು ಹೇಳುವ ದೃಶ್ಯ ಎಲ್ಲರ ಮುಖದಲ್ಲೂ ನಗು ಮೂಡಿಸಿದೆ.

ಎರಡು ದಿನಗಳ ಹಿಂದೆ (ಜೂನ್ 13) ಪೋಸ್ಟ್ ಮಾಡಲಾಗಿದ್ದ ವಿಡಿಯೋ ಈಗಾಗಲೇ ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದ್ದು, ಲಕ್ಷಾಂತರ ವೀಕ್ಷಕರನ್ನು ಗಿಟ್ಟಿಸಿಕೊಂಡಿದೆ. ಚಬಿ ಗುಪ್ತಾ ಎಂಬ ಯುವತಿ ಈ ವಿಡಿಯೋ ಚಿತ್ರೀಕರಿಸಿದ್ದು, ಆಕೆ ತನ್ನ ತಾಯಿ ಅನಿತಾ ಗುಪ್ತಾ ಅವರ ಬಳಿ ತಾನು ಖರೀದಿಸಿದ ದುಬಾರಿ ಬೆಲ್ಟ್ ಹೇಗಿದೆ ಎಂದು ಕೇಳಿದ್ದಾರೆ. ಆದರೆ, ಅದನ್ನು ನೋಡಿ ಆಕೆಯ ತಾಯಿ ಹೇಳಿದ ಮಾತುಗಳು ಈಗ ವಿಡಿಯೋ ವೈರಲ್ ಆಗಲು ಕಾರಣವಾಗಿದೆ.

ಮೊದಲು ಬೆಲ್ಟ್ ನೋಡಿದ ಯುವತಿಯ ತಾಯಿ ಅದನ್ನು ಎಲ್ಲಾ ರೀತಿಯಲ್ಲೂ ಪರಿಶೀಲಿಸಿ ಇದು ಡೆಲ್ಲಿ ಪಬ್ಲಿಕ್​ ಸ್ಕೂಲ್ ಮಕ್ಕಳ ಯೂನಿಫಾರ್ಮ್​ ಬೆಲ್ಟ್ ಇದ್ದ ಹಾಗಿದೆ ಎಂದು ಒಂದೇ ಮಾತಿನಲ್ಲಿ ತೀರ್ಪು ಕೊಟ್ಟುಬಿಟ್ಟಿದ್ದಾರೆ. ನಂತರ ಅದರ ಮೌಲ್ಯ 35 ಸಾವಿರ ರೂಪಾಯಿ ಎಂದಾಗ ಶಾಕ್​ಗೆ ಒಳಗಾದ ಯುವತಿಯ ಅಮ್ಮ, ಇದಕ್ಯಾಕೆ ಅಷ್ಟೊಂದು ದುಡ್ಡು? 150 ರೂಪಾಯಿಗೆ ಈ ಥರದ್ದು ಸಿಗುತ್ತಿತ್ತು ಎಂದು ಹೇಳಿ ಮಗಳನ್ನೇ ದಿಟ್ಟಿಸಿದ್ದಾರೆ.

ಆದರೆ, ಇದನ್ನೆಲ್ಲಾ ವಿಡಿಯೋ ಮಾಡಿಕೊಳ್ಳುತ್ತಿದ್ದ ಮಗಳು ಮಾತ್ರ ಅಮ್ಮನ ಮಾತು ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ. ಈ ವಿಡಿಯೋವನ್ನು ನೋಡಿದ ಅನೇಕರು ಅಮ್ಮನ ಮಾತಿಗೆ ಚಪ್ಪಾಳೆ ತಟ್ಟಿದ್ದು, ಯಾವುದೇ ಜಾಗತಿಕ ಮಟ್ಟದ ಉತ್ಪನ್ನದ ಹೆಸರನ್ನೂ ಕ್ಷಣಾರ್ಧದಲ್ಲಿ ಮಣ್ಣುಪಾಲು ಮಾಡುವ ಶಕ್ತಿ ಅಮ್ಮಂದಿರಿಗಿದೆ ಎಂದು ನಕ್ಕಿದ್ದಾರೆ. ಇನ್ನು ಕೆಲವರು 35 ಸಾವಿರ ರೂ. ಹಣವನ್ನು ಕೇವಲ ಒಂದು ಬೆಲ್ಟ್​ಗೆ ಖರ್ಚು ಮಾಡಿದ್ದಕ್ಕಾಗಿ ಯುವತಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: