AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್‌ಹೋಸ್ಟೆಸ್ ತರಬೇತಿ ಬಿಟ್ಟು ಟ್ರಕ್ ಚಾಲಕಿಯಾದ ಹಿಮಾಚಲದ ಯುವತಿ: ದೇಶದ ಮೊದಲ ಮಹಿಳಾ ಟ್ರಕ್ ಡ್ರೈವರ್ ನೇಹಾ ಠಾಕೂರ್

ಏರ್‌ಹೋಸ್ಟೆಸ್ ಆಗುವ ಕನಸನ್ನು ತ್ಯಜಿಸಿ, ಹಿಮಾಚಲದ ನೇಹಾ ಠಾಕೂರ್ ಭಾರತದ ಮೊದಲ ಮಹಿಳಾ ಟ್ರಕ್ ಡ್ರೈವರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. 12 ಟನ್ ಟ್ರಕ್ ಚಲಾಯಿಸುತ್ತಾ, ಕಠಿಣ ರಸ್ತೆಗಳಲ್ಲಿ ಸಾಗಿ, ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಗಳಿಸಿರುವ ಇವರು, ಸಾಂಪ್ರದಾಯಿಕ ಅಡೆತಡೆಗಳನ್ನು ಮೀರಿ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ. ಕೋವಿಡ್ ನಂತರ ಅವರ ವೃತ್ತಿ ಬದುಕಿನ ಹಾದಿ ಬದಲಾಯಿತಾದರೂ, ಆತ್ಮವಿಶ್ವಾಸದಿಂದ ಮುನ್ನಡೆದು ಯಶಸ್ಸು ಕಂಡಿದ್ದಾರೆ.

ಏರ್‌ಹೋಸ್ಟೆಸ್ ತರಬೇತಿ ಬಿಟ್ಟು ಟ್ರಕ್ ಚಾಲಕಿಯಾದ ಹಿಮಾಚಲದ ಯುವತಿ: ದೇಶದ ಮೊದಲ ಮಹಿಳಾ ಟ್ರಕ್ ಡ್ರೈವರ್ ನೇಹಾ ಠಾಕೂರ್
ನೇಹಾ ಠಾಕೂರ್
ಅಕ್ಷಯ್​ ಪಲ್ಲಮಜಲು​​
|

Updated on:Oct 09, 2026 | 8:48 AM

Share

ಶಿಮ್ಲಾ, ಅ.9: ಆಕಾಶ ಎತ್ತರದಲ್ಲಿ ವಿಮಾನದ ಏರ್‌ಹೋಸ್ಟೆಸ್ ಆಗಿ ಹಾರಾಡಬೇಕಿದ್ದ ಯುವತಿಯೊಬ್ಬಳು, ಇಂದು 12 ಟನ್ ತೂಕದ ಬೃಹತ್ ವಾಣಿಜ್ಯ ಟ್ರಕ್‌ನ ಸ್ಟೀರಿಂಗ್ ಹಿಡಿದು ದೇಶಾದ್ಯಂತ ಹೆದ್ದಾರಿಗಳಲ್ಲಿ ಅಬ್ಬರಿಸುತ್ತಿದ್ದಾಳೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಗಾಟ್ ತಾಲೂಕಿನ ಖುಡ್ಲಾ ಗ್ರಾಮದ 25 ವರ್ಷದ ನೇಹಾ ಠಾಕೂರ್ ಎಂಬ ಯುವತಿ, ತಮ್ಮ ವೃತ್ತಿ ಬದುಕಿನ ಹಾದಿಯನ್ನು ಸಂಪೂರ್ಣವಾಗಿ ಬದಲಿಸಿಕೊಂಡು ದೇಶದ ಮೊದಲ ಮಹಿಳಾ ಟ್ರಕ್ ಡ್ರೈವರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ.

ನೇಹಾ ಅವರ ತಂದೆ ಮನೋಜ್ ಠಾಕೂರ್ ಕಳೆದ ಎರಡು ದಶಕಗಳಿಂದ ಸಾರಿಗೆ (ಟ್ರಾನ್ಸ್‌ಪೋರ್ಟ್) ಉದ್ಯಮದಲ್ಲಿದ್ದಾರೆ. ಚಿಕ್ಕಂದಿನಿಂದಲೇ ತಂದೆಯ ಜೊತೆ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದ ನೇಹಾ ಅವರಿಗೆ ಈ ಬೃಹತ್ ವಾಹನಗಳ ಮೇಲೆ ವಿಶೇಷ ಪ್ರೀತಿ ಬೆಳೆದಿತ್ತು. ಶಾಲೆಯ ದಿನಗಳಲ್ಲಿ ತಂದೆ ತಮ್ಮ ಟ್ರಕ್‌ನಲ್ಲೇ ನೇಹಾ ಅವರನ್ನು ಶಾಲೆಗೆ ಬಿಡುತ್ತಿದ್ದುದ್ದು ಅವರ ನೆನಪಿನಲ್ಲಿ ಇಂದಿಗೂ ಹಸಿರಾಗಿದೆ.

ಕೋವಿಡ್‌ ನೀಡಿದ ಟ್ವಿಸ್ಟ್: ಏರ್‌ಹೋಸ್ಟೆಸ್‌ನಿಂದ ‘ರಸ್ತೆ ರಾಣಿ’ಯಾದ ಕಥೆ

ಪದವಿ ಮುಗಿಸಿದ ನಂತರ ನೇಹಾ ಏರ್‌ಹೋಸ್ಟೆಸ್ ಆಗುವ ಕನಸಿನೊಂದಿಗೆ ಚಂಡೀಗಢಕ್ಕೆ ತೆರಳಿ ತರಬೇತಿ ಪಡೆಯಲಾರಂಭಿಸಿದ್ದರು. ಆದರೆ, ಅದೇ ವೇಳೆಗೆ ಅಪ್ಪಳಿಸಿದ ಕೋವಿಡ್-19 ಸಾಂಕ್ರಾಮಿಕ ಮಹಾಮಾರಿ ವಿಮಾನಯಾನ ಕ್ಷೇತ್ರಕ್ಕೆ ತೀವ್ರ ಹೊಡೆತ ನೀಡಿತು. ಇದರಿಂದಾಗಿ ತರಬೇತಿ ಅರ್ಧಕ್ಕೆ ನಿಂತಾಗ ನೇಹಾ ತಮ್ಮ ಸ್ವಗ್ರಾಮಕ್ಕೆ ಮರಳಿದರು. ತಂದೆಯ ಬೆಂಬಲದೊಂದಿಗೆ ಡ್ರೈವಿಂಗ್ ಶಾಲೆಗೆ ಸೇರಿದ ನೇಹಾ, ಹೆವಿ ಮೋಟರ್ ವೆಹಿಕಲ್ ಚಾಲನಾ ಪರವಾನಗಿ (ಲೈಸೆನ್ಸ್) ಪಡೆದರು. ಕೇವಲ 21ನೇ ವಯಸ್ಸಿನಲ್ಲಿ (2023 ರಲ್ಲಿ) ಬೃಹತ್ ಟ್ರಕ್ ಓಡಿಸುವುದನ್ನು ಕರಗತ ಮಾಡಿಕೊಂಡರು. ಒಬ್ಬ ಯುವತಿ ಟ್ರಕ್ ಡ್ರೈವರ್ ಆಗುವುದನ್ನು ಸಮಾಜ ಮತ್ತು ಸುತ್ತಮುತ್ತಲಿನ ಜನರು ಸಂಶಯ ಹಾಗೂ ಟೀಕೆಯಿಂದ ನೋಡಿದರೂ, ತಂದೆ ಮನೋಜ್ ಠಾಕೂರ್ ಮಗಳ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದರು.

ಆರಂಭದಲ್ಲಿ ಸ್ಥಳೀಯ ರಸ್ತೆಗಳಲ್ಲಿ ಟ್ರಕ್ ಚಲಾಯಿಸುತ್ತಿದ್ದ ನೇಹಾ, ಈಗ 12 ಟನ್ ತೂಕದ ಟಾಟಾ ಬೃಹತ್ ಟ್ರಕ್ ನಲ್ಲಿ ನಿರ್ಮಾಣ ಸಾಮಗ್ರಿಗಳು ಹಾಗೂ ಕೃಷಿ ಉತ್ಪನ್ನಗಳನ್ನು ಹೊತ್ತು ರಾಜ್ಯದಿಂದ ರಾಜ್ಯಕ್ಕೆ ನೂರಾರು ಕಿಲೋಮೀಟರ್ ಪ್ರಯಾಣಿಸುತ್ತಾರೆ. ಕಡಿದಾದ ಬೆಟ್ಟಗುಡ್ಡಗಳ ರಸ್ತೆಗಳು, ಮಂಜು, ಮಳೆ ಹಾಗೂ ಸತತ ಗಂಟೆಗಳ ಕಾಲ ಏಕಾಗ್ರತೆಯಿಂದ ಚಾಲನೆ ಮಾಡುವುದು ಸುಲಭದ ಮಾತಲ್ಲ. ಆದರೂ ನೇಹಾ ಇದನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿಯಾಗಿದ್ದಾರೆ.

ಸೋಷಿಯಲ್ ಮೀಡಿಯಾ ಸ್ಟಾರ್ – ಲಕ್ಷಾಂತರ ಫಾಲೋವರ್ಸ್:

ತಮ್ಮ ದೈನಂದಿನ ಟ್ರಕ್ ಚಾಲನೆ, ಪ್ರಯಾಣದ ಅನುಭವಗಳು ಹಾಗೂ ಹೆದ್ದಾರಿ ಜೀವನದ ವ್ಲಾಗ್‌ಗಳನ್ನು ನೇಹಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. 2026ರ ವರದಿಗಳ ಪ್ರಕಾರ, ಅವರ ಯೂಟ್ಯೂಬ್ ಚಾನೆಲ್ 4.5 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹಾಗೂ ಇನ್‌ಸ್ಟಾಗ್ರಾಮ್ ಖಾತೆ 8 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದೆ. ಇದರಿಂದಾಗಿ ಪ್ರಸಿದ್ಧ ಬ್ರ್ಯಾಂಡ್‌ಗಳು ಕೂಡ ಅವರಿಗೆ ಸ್ಪಾನ್ಸರ್‌ಶಿಪ್ ನೀಡುತ್ತಿವೆ.

ಇದನ್ನೂ ಓದಿ: ಕಣ್ಣೆದುರಲ್ಲೇ ಮಗುವಿಗೆ ಜನ್ಮ ನೀಡುವ ಬೊಂಬೆ: ‘ಝುರು’ ಕಂಪನಿಯ ವಿಚಿತ್ರ ಆಟಿಕೆ ವೀಡಿಯೋ ವೈರಲ್

“ಜನರ ಮಾತಿಗಾಗಿ ನಿಮ್ಮ ಕನಸುಗಳನ್ನು ಕೊಲ್ಲಬೇಡಿ” – ನೇಹಾ

ತಮ್ಮ ಸ್ಪೂರ್ತಿದಾಯಿಕ ಯಶೋಗಾಥೆಯ ಬಗ್ಗೆ ಮಾತನಾಡಿದ ನೇಹಾ, “ಸಾಂಪ್ರದಾಯಿಕವಾಗಿ ಹೆಣ್ಣುಮಕ್ಕಳಿಗೆ ಸೂಕ್ತವಲ್ಲ ಎಂದು ಸಮಾಜ ಭಾವಿಸುವ ಕ್ಷೇತ್ರಕ್ಕೆ ಯಾವುದೇ ಯುವತಿ ಹೋಗಲು ಬಯಸಿದರೆ, ಜನರು ಏನು ಅನ್ನುತ್ತಾರೋ ಎಂಬ ಒಂದೇ ಕಾರಣಕ್ಕೆ ತನ್ನನ್ನು ತಾನು ತಡೆದುಕೊಳ್ಳಬಾರದು. ನನ್ನ ಪಯಣದಲ್ಲೂ ಸವಾಲುಗಳಿದ್ದವು, ಆದರೆ ನಾನು ನನ್ನ ಮೇಲೆ ನಂಬಿಕೆ ಇಟ್ಟು ಮುನ್ನಡೆದೆ. ನಿಮಗೆ ಯಾವುದೇ ಕೆಲಸದಲ್ಲಿ ಆಸಕ್ತಿ ಇದ್ದರೆ, ಆತ್ಮವಿಶ್ವಾಸದಿಂದ ಅದನ್ನು ಮಾಡಿ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ” ಎಂದು ದೇಶದ ಯುವತಿಯರಿಗೆ ಕರೆ ನೀಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:48 am, Fri, 9 October 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More