ದೀಪಾವಳಿ ದಿನ ಹೋಳಿ ಹಬ್ಬದ ಶುಭಾಶಯ ಹೇಳಿದ ಪಾಕಿಸ್ತಾನದ ಮುಖ್ಯಮಂತ್ರಿ! ಟ್ವಿಟರ್​ನಲ್ಲಿ ಟ್ರಾಲ್

Deepavali 2021: ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ದೀಪಾವಳಿ ಶುಭ ಹಾರೈಕೆಯ ಬದಲು ಹೋಳಿ ಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ.

ದೀಪಾವಳಿ ದಿನ ಹೋಳಿ ಹಬ್ಬದ ಶುಭಾಶಯ ಹೇಳಿದ ಪಾಕಿಸ್ತಾನದ ಮುಖ್ಯಮಂತ್ರಿ! ಟ್ವಿಟರ್​ನಲ್ಲಿ ಟ್ರಾಲ್
Edited By:

Updated on: Nov 05, 2021 | 11:01 PM

ಪಾಕಿಸ್ತಾನದ ಸಿಂಧ್ ಪ್ರದೇಶದ ಮುಖ್ಯಮಂತ್ರಿ ದೀಪಾವಳಿ ದಿನದಂದು ಜನತೆಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ ಎಂಬ ಬಗ್ಗೆ ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು. ಹೌದು, ಈ ಸುದ್ದಿ ನಿಜವೇ ಆಗಿದೆ. ದೀಪಾವಳಿಯನ್ನು ಭಾರತ ದೇಶದಾದ್ಯಂತ ಮಾತ್ರವಲ್ಲ ವಿಶ್ವದ ವಿವಿಧ ಭಾಗಗಳಲ್ಲಿ ಆಚರಣೆ ಮಾಡಲಾಗುತ್ತದೆ. ಅಮೆರಿಕಾ ಸಹಿತ ಹಲವು ದೇಶಗಳಲ್ಲಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಅಲ್ಲಿನ ಜನರು ಕೂಡ ದೀಪಾವಳಿಯ ಸಂಭ್ರಮದಲ್ಲಿ, ಶುಭಹಾರೈಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಮಧ್ಯೆ ಪಾಕಿಸ್ತಾನದಲ್ಲಿ ಒಂದು ಅಚಾತುರ್ಯ ಸಂಭವಿಸಿದೆ. ಪಾಕಿಸ್ತಾನದ ಸಿಂಧ್ ಪ್ರದೇಶದ ಮುಖ್ಯಮಂತ್ರಿ ಜನರಿಗೆ ದೀಪಾವಳಿ ದಿನದಂದು ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ.

ವಿಶ್ವದ ಎಲ್ಲೆಡೆ, ದೀಪಗಳನ್ನು ಹಚ್ಚಿ ಬೆಳಕಿನ ಹಬ್ಬದ ಆಚರಣೆಯಲ್ಲಿ ಜನರು ಇರುವಾಗ ಈ ಘಟನೆ ನೆಟ್ಟಿಗರ ಗಮನ ಸೆಳೆದಿದೆ. ಈ ಬಗ್ಗೆ ಹಲವರು ಕಮೆಂಟ್ ಕೂಡ ಮಾಡಿದ್ದಾರೆ. ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ದೀಪಾವಳಿ ಶುಭ ಹಾರೈಕೆಯ ಬದಲು ಹೋಳಿ ಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ.

ಮುರಾದ್ ಅಲಿ ಶಾ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಹಬ್ಬಕ್ಕೆ ಶುಭಹಾರೈಸುವ ಚಿತ್ರ ಅದಾಗಿದೆ. ಅದರಲ್ಲಿ ಹ್ಯಾಪಿ ಹೋಳಿ ಎಂದು ಬರೆಯಲಾಗಿತ್ತು. ಆದರೆ, ತಪ್ಪು ತಿಳಿದ ಬಳಿಕ ಆ ಪೋಸ್ಟ್​ನ್ನು ಡಿಲೀಟ್ ಮಾಡಲಾಗಿದೆ. ಆದರೆ ಆ ಬಗ್ಗೆ ನೆಟ್ಟಿಗರು ನಂತರವೂ ಟ್ರಾಲ್, ಕಮೆಂಟ್ ಮಾಡುತ್ತಿದ್ದಾರೆ. ಅವರ ಪೋಸ್ಟ್​ನ ಸ್ಕ್ರೀನ್​ಶಾಟ್​ನ್ನು ಹಂಚಿಕೊಳ್ಳುತ್ತಿದ್ದಾರೆ.

ಪಾಕಿಸ್ತಾನದ ಜರ್ನಲಿಸ್ಟ್ ಮುರ್ತಾಜಾ ಸೋಲಂಗಿ ಈಗ ಡಿಲೀಟ್ ಆಗಿರುವ ಸಿಂಧ್ ಮುಖ್ಯಮಂತ್ರಿ ಟ್ವಿಟರ್ ಪೋಸ್ಟ್​ನ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯ ಹಿಂದೂಗಳು ಇದ್ದಾರೆ. ಅಲ್ಲಿನ ಹಲವು ಸ್ಥಳಗಳಲ್ಲಿ ಹಿಂದೂಗಳ ಸಂಖ್ಯೆಯೇ ಅಧಿಕವಾಗಿದೆ. ಆದರೆ, ಸಿಂಧ್ ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿಗೆ ಹೋಳಿ ಹಾಗೂ ದೀಪಾವಳಿ ವ್ಯತ್ಯಾಸ ಗೊತ್ತಿಲ್ಲ ಎನ್ನುವುದು ಬಹಳ ಬೇಸರದ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.

ತಪ್ಪಾಗಿ ಹಬ್ಬದ ಶುಭಾಶಯ ಕೋರಿ ಬಳಿಕ ಕ್ಷಮೆ, ಸ್ಪಷ್ಟೀಕರಣ ನೀಡದೆ ಆ ಪೋಸ್ಟ್​ ಡಿಲೀಟ್ ಮಾಡಲಾಗಿದೆ. ಇದು ಸಣ್ಣ ತಪ್ಪು ಅಲ್ಲ. ಒಬ್ಬರಿಂದ ಮಾಡಲ್ಪಟ್ಟ ತಪ್ಪು ಇದು. ಹಾಗಾಗಿ ಕ್ಷಮೆ ಕೇಳಬೇಕಿತ್ತು ಎಂಬಂತೆ ಕೂಡ ಮುರ್ತಾಜಾ ಹೇಳಿದ್ದಾರೆ. ಅಲ್ಲಿನ ಮುಖ್ಯಮಂತ್ರಿ ಪೋಸ್ಟ್​ ಮಾತ್ರ ನೆಟ್ಟಿಗರಿಗೆ ವಸ್ತುವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Viral Photo: ನಿಮ್ಮ ಕಣ್ಣಿಗೆ ಸವಾಲೊಡ್ಡುವ ಪ್ರಶ್ನೆಯಿದು; ಈ ಚಿತ್ರದಲ್ಲಿ ಬೆಕ್ಕು ಅಡಗಿದೆ! ಬೆಕ್ಕನ್ನು ಗುರುತಿಸಬಲ್ಲಿರಾ?

ಇದನ್ನೂ ಓದಿ: Viral Video: ಮದುವೆಯ ದಿನ ವಧು ಸಂತೋಷದಿಂದ ಕುಣಿದು ಕುಪ್ಪಳಿಸಿದ ವಿಡಿಯೊ ನೋಡಿ

Published On - 10:54 pm, Fri, 5 November 21