
Viral Video : ಚಳಿಗೆ ಮುದುರಿಕೊಂಡು ಕುಸುಕುಸು ಕೆಮ್ಮುತ್ತ, ಸೊರಸೊರ ಮೂಗೇರಿಸುತ್ತ, ಬಿಸಿಬಿಸಿ ಕಾಫೀ ಕುಡಿಯುತ್ತ ಕೆಲಸದಲ್ಲಿ ನೀವೆಲ್ಲ ಮುಳುಗಿರಬಹುದು. ಆದರೆ ಹೊಸ ವರ್ಷಕ್ಕೆ ಹೊಸ ಸೂತ್ಯ ಬಂದಿದ್ದಾನೆ ಒಮ್ಮೆ ಅವನನ್ನು ಕಂಡರೆ ಚಳಿಯೂ ಜ್ವರೂ ಕೆಮ್ಮೂ ನೆಗಡಿಯೂ ಎಲ್ಲವೂ ಓಡಿಹೋಗತ್ತದೆ ಎನ್ನುವ ಸಂದೇಶವನ್ನು ಈ ಪೆಂಗ್ವಿನ್ಗಳ ಹಿಂಡು ನೀಡುತ್ತಿದೆ. ಯಾಕೆ ಇವು ಹೀಗೆ ಒಂದೇ ಸಮ ಜಿಗಿಯುತ್ತಿವೆ? ಇವರ ಪಿಟಿ ಮಾಸ್ಟರ್ ಎಲ್ಲಿ ಕಾಣ್ತಿಲ್ವಲ್ಲ? ಎಂದು ಯೋಚಿಸ್ತಿದೀರಾ? ಅವರ ಪಿಟಿ ಮಾಸ್ಟರ್ ಹೇಳಿದಂತೆ ಅವರು ಕೇಳುತ್ತಿದ್ದಾರೆ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ. ಹೌದು ಪಿಟಿ ಮಾಸ್ಟರ್ ಪಾತರಗಿತ್ತಿಯವರನ್ನು ಇವರೆಲ್ಲರೂ ಹಿಂಬಾಲಿಸುತ್ತಿದ್ದಾರೆ.
ಮನಸ್ಸನ್ನು ಅರಳಿಸುವಂಥ ಈ ವಿಡಿಯೋ ಅನ್ನು ಡಿಸೆಂಬರ್ 31ರಂದು ಪೋಸ್ಟ್ ಮಾಡಲಾಗಿದೆ. ಈತನಕ ಈ ವಿಡಿಯೋ 11.9 ಮಿಲಿಯನ್ ಜನರನ್ನು ಮೋಡಿ ಮಾಡಿದೆ. ಎರಡೇ ಸೆಕೆಂಡುಗಳ ಈ ಪುಟ್ಟ ವಿಡಿಯೋದಲ್ಲಿ ಚಿಟ್ಟೆಯನ್ನು ಹೀಗೆ ಬೆನ್ನಟ್ಟುತ್ತಿರುವ ಈ ಪೆಂಗ್ವಿನ್ ಜಂಪ್ ನೋಡಿದ ನೂರಾರು ಜನರು ಮರುಳಾಗಿದ್ದಾರೆ.
ಇದನ್ನೂ ನೋಡಿ : ಕಾವ್ಯಾತ್ಮಕ ಶೈಲಿಯಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದ ಪೈಲಟ್ ವಿಡಿಯೊ ವೈರಲ್
ನಾನಂತೂ ಮುಂದಿನ ಜನ್ಮದಲ್ಲಿ ಪೆಂಗ್ವಿನ್ ಆಗಿ ಹುಟ್ಟುತ್ತೇನೆ ಎಂದಿದ್ದಾರೆ ಒಬ್ಬರು. ಕುಂಟಾಬಿಲ್ಲೆ ಹುಟ್ಟಿದ್ದು ಇಲ್ಲಿಯೇ ಅನ್ನಿಸುತ್ತದೆ ಎಂದಿದ್ದಾರೆ ಮತ್ತೊಬ್ಬರು. ಚಿಟ್ಟೆ ನೀನು ಇನ್ನಷ್ಟು ಎತ್ತರಕ್ಕೆ ಹಾರು ಆಕಾಶವನ್ನು ಮುಟ್ಟು ಎನ್ನುತ್ತಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು? ಹೊಸ ವರ್ಷಕ್ಕೆ ನೀವು ಹೀಗೆ ಇದೇ ಉತ್ಸಾಹದಿಂದ ಕುಣಿದು ಕುಪ್ಪಳಿಸಬೇಕೆನ್ನುವುದು ನಮ್ಮ ಆಶಯ. ಸಣ್ಣಪುಟ್ಟ ಕನಸು ಆಸೆಗಳೆಂಬ ಚಿಟ್ಟೆಗಳನ್ನು ಹೀಗೆ ಪ್ರಯತ್ನಪೂರ್ವಕವಾಗಿ ಬೆನ್ನಟ್ಟಿ ಖುಷಿ ನಿಮ್ಮದಾಗಿಸಿಕೊಳ್ಳಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:05 pm, Mon, 2 January 23