
ರಾಜಸ್ಥಾನ, ಆಗಸ್ಟ್ 28: ನಾವೆಲ್ಲಾ ಡಿಜಿಟಲ್ ಯುಗದಲ್ಲಿದ್ದೇವೆ. ಪ್ರತಿಯೊಂದು ಕೆಲಸಕ್ಕೂ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಈ ತಂತ್ರಜ್ಞಾನದ ಮೊರೆ ಹೋಗುತ್ತೇವೆ. ಈ ಗೂಗಲ್ ಮ್ಯಾಪ್ (Google map) ಬಳಸುವವರೇ ಹೆಚ್ಚು. ದೂರದ ಊರಿಗೆ ಟ್ರಿಪ್‌ಗೆಂದು ಹೋದರೆ ದಾರಿ ಗೊತ್ತಿರುವುದಿಲ್ಲ, ಹೀಗಾಗಿ ಗೂಗಲ್ ಮ್ಯಾಪ್ ನಂಬಿಕೊಂಡು ಪ್ರಯಾಣಿಸುತ್ತಾರೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ಈ ಮ್ಯಾಪ್ ದಾರಿ ತಪ್ಪಿಸಿದಿದ್ದು ಇದೆ. ಇದೀಗ ಅಂತಹದ್ದೇ ಘಟನೆಯೂ ರಾಜಸ್ಥಾನದ ಚಿತ್ತೋರ್ ಗಢದಲ್ಲಿ (Chittorgarh of Rajasthan) ನಡೆದಿದೆ. ಗೂಗಲ್ ಮ್ಯಾಪ್ ನಂಬಿ ಸೇತುವೆ ಮೇಲೆ ವಾಹನ ಚಲಾಯಿಸಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೇತುವೆಯ ಮೇಲೆ ಸಿಲುಕಿಕೊಂಡ ವಾಹನ
ಕುಟುಂಬವೊಂದು ಭಿಲ್ವಾರದಿಂದ ಧಾರ್ಮಿಕ ಸ್ಥಳಕ್ಕೆ ತೆರಳಿ ಮನೆಗೆ ವಾಪಸ್ಸು ಆಗುವ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಹೌದು, ಮನೆಗೆ ವಾಪಾಸ್ ಬರುತ್ತಿರುವಾಗ ಚಾಲಕ ಗೂಗಲ್ ಮ್ಯಾಪ್ ತೋರಿದ ಮಾರ್ಗವನ್ನೇ ಅನುಸರಿಸಿದ್ದು, ಈ ವೇಳೆಯಲ್ಲಿ ಮ್ಯಾಪ್ ನಂಬಿಕೊಂಡು ನಿಷೇಧಿತ ಸೇತುವೆ ಮೇಲೆ ವಾಹನ ಚಲಾಯಿಸಿ ಎಡವಟ್ಟು ಮಾಡಿಕೊಂಡಿದ್ದಾನೆ. ಹೌದು, ವಾಹನವು ಸೋಮಿ- ಉಪ್ರೇಡಾ ಸೇತುವೆಯ ಮೇಲೆ ವ್ಯಾನ್ ಸಿಲುಕಿಕೊಂಡಿದ್ದು ಈ ದುರಂತದಲ್ಲಿ ನಾಲ್ವರು ಸಾವನ್ನಪ್ಪಿಸಿದರೆ, ಐವರು ವಾಹನದ ಮೇಲೆ ಕುಳಿತು ಜೀವ ಉಳಿಸಿಕೊಂಡಿದ್ದಾರೆ.
ಸಂಬಂಧಿಕರಿಗೆ ಕರೆ ಮಾಡಿದ ಸುದ್ದಿ ತಿಳಿಸಿದ ವ್ಯಕ್ತಿ
ಸೇತುವೆಯ ಮೇಲೆ ವ್ಯಾನ್ ಸಿಲುಕಿಕೊಳ್ಳುತ್ತಿದ್ದಂತೆ ಐವರು ತಲೆ ಓಡಿಸಿದ್ದಾರೆ. ಸಾವು ಕಣ್ಣ ಮುಂದೆ ಇರುವಾಗಲು ಇವರು ವಾಹನದ ಗಾಜು ಒಡೆದು ಛಾವಣಿ ಮೇಲೆ ಹತ್ತಿ ಪ್ರಾಣ ಉಳಿಸಿಕೊಂಡಿದ್ದಾರೆ. ಆ ಬಳಿಕ ಈ ಐವರಲ್ಲಿ ಒಬ್ಬ ವ್ಯಕ್ತಿಯೂ ತಮ್ಮ ಸಂಬಂಧಿಕರಿಗೆ ಫೋನ್ ಮಾಡಿ ಈ ವಿಷಯವನ್ನು ತಿಳಿಸಿದ್ದಾನೆ. ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಚಿತ್ತೋರ್ ಗಢದ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ತ್ರಿಪಾಠಿ ತಿಳಿಸಿದ್ದಾರೆ.
ನಾಲ್ವರು ನೀರುಪಾಲು, ಐವರು ಪ್ರಾಣಾಪಾಯದಿಂದ ಪಾರು
ಠಾಣಾಧಿಕಾರಿ ರಶ್ಮಿ ದೇವೇಂದ್ರ ಸಿಂಗ್ ಸ್ಥಳಕ್ಕೆ ಆಗಮಿಸಿ ಸೇತುವೆಯ ಮೇಲೆ ಸಿಲುಕಿದ್ದ ವಾಹನದಲ್ಲಿದ್ದ ಜನರನ್ನು ಸ್ಥಳಾಂತರಿಸಲು ದೋಣಿ ವ್ಯವಸ್ಥೆ ಮಾಡಿದ್ದು, ಕತ್ತಲಾಗಿದ್ದ ಕಾರಣ ವಾಹನವಿದ್ದ ಸ್ಥಳ ತಲುಪು ಕಷ್ಟವಾಗಿತ್ತು. ಆದರೆ, ಸೇತುವೆಯಲ್ಲಿ ಸಿಲುಕಿದ್ದ ಐವರು ಮೊಬೈಲ್ ಟಾರ್ಚ್ ಹಾಕಿ, ಪೊಲೀಸರಿಗೆ ತಾವು ಇಲ್ಲಿ ಇದ್ದೇವೆ ಎನ್ನುವ ಸುಳಿವು ನೀಡಿದ್ದು, ಈ ಐವರನ್ನು ರಕ್ಷಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಸೈಕಲ್ ಮೇಲೆ ಹೋಗುತ್ತಿದ್ದ ವಿದ್ಯಾರ್ಥಿ ಮೇಲೆ ಬೀದಿ ನಾಯಿ ದಾಳಿ
ಪೊಲೀಸ್ ತಂಡ ಸ್ಥಳಕ್ಕೆ ತಲುಪುವ ಮೊದಲೇ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಕೊಚ್ಚಿ ಹೋಗಿದ್ದರು. ಈಗಾಗಲೇ ಮೂರು ಜನರ ಶವಗಳನ್ನು ಹೊರತೆಗೆಯಲಾಗಿದ್ದು, ಮಗುವಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟವರನ್ನು ಚಂದಾ (21), ಅವರ ಮಗಳು ರುತ್ವಿ (6), ಮಮತಾ (25) ಮತ್ತು ಅವರ ಮಗಳು ಖುಷಿ (4) ಎಂದು ಗುರುತಿಸಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Thu, 28 August 25