ಮಧ್ಯಪ್ರದೇಶ: ನಡುರಸ್ತೆಯಲ್ಲಿ ಚಿರತೆಯೊಂದು ಓಡಾಡಿ ಅವಾಂತರ ಸೃಷ್ಟಿಸಿರುವ ಘಟನೆ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ನಡೆದಿದೆ. ರಾತ್ರಿ ಬೀದಿಗಳಲ್ಲಿ ಚಿರತೆ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಚಿರತೆ ಶಿಯೋಪುರ್ ರಸ್ತೆಯಲ್ಲಿ ನಡೆಯುವುದನ್ನು ಕಾಣಬಹುದು. ಅದರ ಹಿಂದೆ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ.
ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆಯನ್ನು ಕುನೊ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಬಿಟ್ಟುಹೋದ ‘ಅಗ್ನಿ’ ಎಂದು ಗುರುತಿಸಲಾಗಿದೆ. ಚಿರತೆ ದಾರಿ ತಪ್ಪಿ ನಗರಕ್ಕೆ ಬಂದು ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆ ಅಮರಲ್ ನದಿಯನ್ನು ದಾಟಿ ನಗರಕ್ಕೆ ನುಗ್ಗಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಮಂಗಳವಾರ ಮತ್ತು ಬುಧವಾರ ರಾತ್ರಿ ನಗರದ ಜನವಸತಿ ಪ್ರದೇಶದಲ್ಲಿ ಚರತೆ ತಿರುಗಾಡುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಿರತೆ ಬೀದಿನಾಯಿಯನ್ನು ಆಹಾರಕ್ಕಾಗಿ ಬೇಟೆಯಾಡಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಅಂಗಾಂಗ ದಾನಕ್ಕೂ ಜಿಎಸ್‌ಟಿ; ತಮಾಷೆಯಾಗಿ ವಿತ್ತ ಸಚಿವೆಯ ಕಾಲೆಳೆದ ಇನ್‌ಫ್ಲುಯೆನ್ಸರ್
ಚಿರತೆಯ ಚಲನವಲನದ ಬಗ್ಗೆ ಜಾಗರೂಕರಾಗಿರಿ ಎಂದು ಅರಣ್ಯ ಇಲಾಖೆ ಶಿಯೋಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಮನವಿ ಮಾಡಿದೆ. ಜನರು ಅನಾವಶ್ಯಕವಾಗಿ ಗದ್ದೆ, ಅರಣ್ಯಕ್ಕೆ ಹೋಗದಂತೆ ಹಾಗೂ ಹೊರಗೆ ತಿರುಗಾಡದಂತೆ ಎಚ್ಚರಿಕೆ ನೀಡಲಾಗಿದೆ. ಆದರೆ ಕುನೋ ಚಿರತೆಗಳು ರಾಷ್ಟ್ರೀಯ ಉದ್ಯಾನವನದಿಂದ ಹೊರಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೆಲ ಚಿರತೆಗಳು ಈ ರೀತಿ ಬಡಾವಣೆಗಳಿಗೆ ನುಗ್ಗಿವೆ ಎನ್ನುತ್ತಾರೆ ಸ್ಥಳೀಯರು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Thu, 26 December 24