Cat : ಪ್ರೀತಿ ಎಂದರೆ ಹೀಗೆ. ಅದು ಯಾವಾಗಲೂ ಸಪಾಟಾಗಿರುವುದಿಲ್ಲ. ನಿಮ್ಮನ್ನು ತೇಲಿಸುತ್ತಲೇ ಇನ್ನೊಂದು ಕಡೆ ‘ಗಕ್ಕನೆ’ ಗಂಟಲಲ್ಲಿ ಹಿಡಿದಿಟ್ಟುಕೊಂಡುಬಿಡುತ್ತದೆ. ಈಗ ನೀವು ಮನೆಯಲ್ಲಿ ಬೆಕ್ಕೋ ನಾಯಿಯನ್ನೋ ಸಾಕಿದ್ದರೆ ಈ ‘ಗಕ್ಕನೆ’ ಎನ್ನುವ ಪದದ ಅರ್ಥ ಆ್ಯಕ್ಷನ್ ಸಮೇತ ಅನುಭವಕ್ಕೆ ಬಂದಿರುತ್ತದೆ. ಇನ್ನು ಸಾಕದೆ ಇರುವವರಿಗೆ? ಇಲ್ಲೊಬ್ಬ ಮಹಾನ್ ಕಲಾವಿದರ ಈ ಕಲಾಕೃತಿ ನೋಡುವ ಮೂಲಕ ಸಾಕುವ ಸೌಭಾಗ್ಯವನ್ನು ಕಲ್ಪಿಸಿಕೊಳ್ಳಿ. ಪದರಪದರಗಳಲ್ಲಿ ಒಡಮೂಡಿರುವ ಇವರ ಸಂವೇದನೆಯನ್ನು ಯಾವೆಲ್ಲ ಕೋನದಿಂದೆಲ್ಲ ಅರಗಿಸಿಕೊಳ್ಳುತ್ತೀರೋ ಅದು ಪೂರ್ತಿ ನಿಮ್ಮ ನಿಮ್ಮ ಹೃದಯದ ಆಳಕ್ಕೆ ಬಿಟ್ಟಿದ್ದು. ಯಾಕೆಂದರೆ ಇವರ ಕಲೆಗಾರಿಕೆಯ ಆಳ ಹಾಗಿದೆ! ನೋಡಿ ಕಣ್ತುಂಬಿಕೊಳ್ಳಿ.
ಮಾಡುವುದನ್ನೆಲ್ಲ ಮಾಡಿದ ನಂತರ ಈ ಕಲಾವಿದರು ‘ನಾನೇನೂ ಮಾಡಿಲ್ಲಪ್ಪ, ನಂದೇನೂ ತಪ್ಪಿಲ್ಲಪ್ಪ’ ಎನ್ನುವಂಥ ಆ ನಿಚ್ಚಳಗಣ್ಣಿನಿಂದ ತೂರಿದ ನೋಟ ಇದೆಯಲ್ಲ! ಯಾವತ್ತಾದರೂ ಅದು ಕಣ್ಣಿಂದ ಸರಿದೀತೇ? ಅಬ್ಬಾ ಮುದ್ದಿನಿಂದ ಜೀವ ಹೋಗುವಂಥದ್ದು. ಇದು ಈ ಕಲಾವಿದರ ಸಾರ್ಥಕತೆ! ಇವರ ಈ ಸಾರ್ಥಕ ಕಲೆಯನ್ನು ಮೆಚ್ಚಿದವರ ಸಂಖ್ಯೆ ಇನ್ನೇನು 8 ಲಕ್ಷ ತಲುಪಲಿದೆ.
ಇದನ್ನು ಯಾವುದಾದರೂ ಆರ್ಟ್ ಗ್ಯಾಲರಿಯಲ್ಲಿಟ್ಟರೆ ಕಲಾತಜ್ಞರು ಮತ್ತು ಪ್ರಾಣಿಪ್ರಿಯರು ಅದೆಷ್ಟೆಷ್ಟು ಥಿಯರಿಗಳಿಂದ ಇದನ್ನು ವಿಮರ್ಶಿಸುತ್ತಿದ್ದರೋ ಆ ಮಾರ್ಜಾಲದೇವರೇ ಬಲ್ಲ. ಮ್ಯಾಕ್ಸೀಟ್ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಕಳೆದ ತಿಂಗಳು ಹಂಚಿಕೆಯಾಗಿದೆ. ಹೇಗಿದೆ ಕ್ಯಾಟ್ಆರ್ಟ್, ಗೆಬರಾರ್ಟ್, ಗೀರಾರ್ಟ್!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:29 pm, Mon, 22 August 22