
ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ತುಂಬ ಸರಳ ವ್ಯಕ್ತಿ. ಅಷ್ಟು ದೊಡ್ಡ ಸ್ಟಾರ್ ಆದರೂ ಸಾಮಾನ್ಯರಂತೆ ಇರುತ್ತಾರೆ. ಇದೇ ಕಾರಣಕ್ಕೆ ಅಭಿಮಾನಿಗಳಿಗೂ ಹತ್ತಿರವಾಗಿದ್ದಾರೆ. ಅಜಿತ್ ಸಿನಿಲೋಕಕ್ಕೆ ಬಂದ ಪ್ರಾರಂಭದ ದಿನಗಳಲ್ಲಿ ಬಹುತೇಕ ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರ ಬಹುತೇಕ ಸಿನಿಮಾಗಳು ತೆಲುಗು ಭಾಷೆಯಲ್ಲಿ ಡಬ್ ಆಗಿವೆ. ಎಷ್ಟೇ ದೊಡ್ಡ ನಟನಾದರೂ ಇವರು ಮ್ಯಾನ್ ಆಫ್ ಸಿಂಪ್ಲಿಸಿಟಿ (ಸರಳ ವ್ಯಕ್ತಿ)ಎಂದೇ ಪ್ರಸಿದ್ಧರಾಗಿದ್ದಾರೆ. ಇವರ ಸರಳತೆಗೆ ಸಾಕ್ಷಿಯಾಗುವ ವಿಡಿಯೋಗಳನ್ನು ಅವರ ಅಭಿಮಾನಿಗಳು ಆಗಾಗ ಟ್ವಿಟರ್, ಇನ್ಸ್ಟಾಗ್ರಾಂನಲ್ಲಿ ಆಗಾಗ ಶೇರ್ ಮಾಡುತ್ತಿರುತ್ತಾರೆ.
ಇತ್ತೀಚೆಗಷ್ಟೇ ಹೈದರಾಬಾದ್ನ ರಸ್ತೆಗಳಲ್ಲಿ ಅಜಿತ್ ಅವರು ಸೈಕಲ್ ಹೊಡೆಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಹಾಗೇ ಇದೀಗ ಅಜಿತ್ ಸಾಮಾನ್ಯರಂತೆ ಆಟೋದಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಸದ್ದುಮಾಡುತ್ತಿದೆ. ಅಜಿತ್ ನಟನೆಯ ಥ್ರಿಲ್ಲರ್ ಸಿನಿಮಾ ವಲಿಮೈ ಮುಂಬರುವ ಆಗಸ್ಟ್ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
ಬೋನಿಕಪೂರ್ ನಿರ್ಮಾಣ ಮಾಡಿ, ಎಚ್.ವಿನೋದ್ ನಿರ್ದೇಶಿಸಿರುವ ವಲಿಮೈ ಬಿಡುಗಡೆಗೆ ಕೊವಿಡ್-19 ಅಡ್ಡಿಯಾಗುತ್ತಿದೆ. ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ಸ್ ಸಿಗುತ್ತಿಲ್ಲ ಎಂದು ಬೇಸರದಲ್ಲಿದ್ದ ಅಭಿಮಾನಿಗಳು ಅಜಿತ್ ಕುಮಾರ್ರನ್ನು ಚೆನ್ನೈನಲ್ಲಿ ಆಟೋದಲ್ಲಿ ನೋಡಿ ಫುಲ್ ಖುಷಿಯಾಗಿದ್ದಾರೆ. ಸಂಪೂರ್ಣ ಕಪ್ಪು ಬಟ್ಟೆಯನ್ನೇ ಧರಿಸಿದ್ದ ಅಜಿತ್ ಕುಮಾರ್, ಮುಖಕ್ಕೆ ಮಾಸ್ಕ್ ಹಾಕಿದ್ದರು. ಆಟೋದಲ್ಲಿ ಒಬ್ಬರೇ ಇದ್ದ ಅವರ ವಿಡಿಯೋವನ್ನು ಸಾರ್ವಜನಿಕರು ಯಾರೋ ಚಿತ್ರೀಕರಿಸಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದನ್ನೀಗ ಅನೇಕರು ಶೇರ್ ಮಾಡಿಕೊಂಡಿದ್ದಾರೆ.
ವಲಿಮೈ ಬಗ್ಗೆ ಅಜಿತ್ ಅಭಿಮಾನಿಗಳು ಸಿಕ್ಕಾಪಟೆ ಕಾತರದಿಂದ ಕಾಯುತ್ತಿದ್ದು, ಮೇ 1, ಅಜಿತ್ ಕುಮಾರ್ ಅವರ 50ನೇ ಹುಟ್ಟುಹಬ್ಬದ ದಿನ ಚಿತ್ರದ ಫಸ್ಟ್ ಲುಕ್ನ್ನು ಬಿಡುಗಡೆ ಮಾಡುವುದಾಗಿ ಬೋನಿಕಪೂರ್ ಇತ್ತೀಚೆಗಷ್ಟೇ ತಿಳಿಸಿದ್ದಾರೆ.