Viral : ಕದ್ದ ಕಾರನ್ನು ಅರ್ಧದಲ್ಲೇ ಬಿಟ್ಟು ಕ್ಷಮೆಯಾಚನೆ ಪತ್ರ ಅಂಟಿಸಿ ಹೋದ ಕಳ್ಳ, ಹೀಗೂ ಇರ್ತಾರಾ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2024 | 6:37 PM

ಈಗಿನ ಕಾಲದಲ್ಲಿ ಐಷಾರಾಮಿ ಜೀವನ ನಡೆಸಲು ಕಳ್ಳತನ ದಾರಿ ಹಿಡಿಯುತ್ತಿದ್ದಾರೆ. ಆದರೆ ಕೊನೆಗೆ ತಮ್ಮ ತಪ್ಪಿನ ಅರಿವಾಗಿ ತಿದ್ದಿಕೊಳ್ಳುವವರು ಇದ್ದಾರೆ. ಆದರೆ ಇಲ್ಲೊಬ್ಬ ಕಳ್ಳನು ಸ್ಕಾರ್ಪಿಯೋ ಕಾರನ್ನು ಕಳ್ಳತನ ಮಾಡಿದ್ದು ಕೊನೆಗೆ ರಸ್ತೆಯ ಮೇಲೆ ಕಾರನ್ನು ಬಿಟ್ಟು ಹೋಗಿದ್ದಾನೆ. ಅಷ್ಟೇ ಅಲ್ಲದೇ ಕಾರಿನ ಕನ್ನಡಿಯ ಮೇಲೆ ಕ್ಷಮೆಯಾಚನೆ ಪತ್ರವನ್ನು ಅಂಟಿಸಿದ್ದು, ಈ ವಾಹನವನ್ನು ದೆಹಲಿಯ ಪಾಲಂ ವಿಹಾರ್ ಪ್ರದೇಶದಿಂದ ಕಳವು ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಕಳ್ಳರು ಎಷ್ಟೇ ಜಾಣತಣದಿಂದ ಕಳ್ಳತನ ಮಾಡಿದರೂ, ಅದೃಷ್ಣ ಕೆಟ್ಟು ಹೋದರೆ ಒಂದು ದಿನ ಸಿಕ್ಕಿ ಹಾಕಿಕೊಳ್ಳುತ್ತಾರೆ. ಹೀಗೆ ಕಳ್ಳತನ ಮಾಡಲು ಹೋಗಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದರೆ ಮುಗಿದೇ ಹೋಯಿತು. ಆದರೆ ಇಲ್ಲೊಬ್ಬ ಅಮಾಯಕ ಕಳ್ಳನು ಕಾರನ್ನು ಕಳ್ಳತನ ಮಾಡಿ ಅರ್ಧದಲ್ಲೇ ಬಿಟ್ಟು ಹೋಗಿದ್ದಾನೆ. ಅಷ್ಟೇ ಅಲ್ಲದೇ, ಕಾರಿನ ಹಿಂಭಾಗದಲ್ಲಿ ಕ್ಷಮಾಪಣಾ ಪತ್ರವನ್ನು ಬರೆದು ಅಂಟಿಸಿದ್ದಾನೆ.

ರಾಜಸ್ಥಾನದ ಜೈಪುರ ರಸ್ತೆಯಲ್ಲಿರುವ ಗ್ರೀನ್ ಗಾರ್ಡನ್ ಹೊಟೇಲ್ ಬಳಿಯ ರಸ್ತೆಯಲ್ಲಿ ಸ್ಕಾರ್ಪಿಯೋ ನಿಂತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಕಾರನ್ನು ಪರಿಶೀಲಿಸಿದಾಗ ಈ “ಕ್ಷಮಾಪಣೆ ಪತ್ರ” ಸಿಕ್ಕಿದ್ದು ಅಚ್ಚರಿ ಮೂಡಿಸಿದೆ. ನಪಸರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕುತೂಹಲಕಾರಿ ಈ ಕಳ್ಳತನದ ಘಟನೆಯೂ ಎಲ್ಲರ ಗಮನ ಸೆಳೆದಿದೆ.

ಕಾರಿನ ಕನ್ನಡಿಗೆ ಅಂಟಿಸಲಾಗಿರುವ ಈ ಪತ್ರದಲ್ಲಿ ಕಾರು ಕಳ್ಳತನವಾಗಿದೆ ಎಂದು ಬರೆದಿದ್ದು, ಅದರೊಂದಿಗೆ ಕ್ಷಮಿಸಿ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ಈ ಕದ್ದ ಸ್ಕಾರ್ಪಿಯೋವನ್ನು ದೆಹಲಿಯ ಪಾಲಂ ವಿಹಾರ್ ಪ್ರದೇಶದಿಂದ ಕಳವು ಮಾಡಲಾಗಿದೆ ಎನ್ನಲಾಗಿದೆ. ಚೀಟಿಯಲ್ಲಿ ಬರೆದಿದ್ದ ವಾಹನದ ನಂಬರ್ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಎಷ್ಟು ಮುದ್ದಾಗಿದೆ ವಿದ್ಯಾರ್ಥಿಯ ಕೈ ಬರಹ, ನೆಟ್ಟಿಗರು ಫುಲ್ ಫಿದಾ

ಈ ವೇಳೆಯಲ್ಲಿ ಕಾರಿನ ಮಾಲೀಕರನ್ನು ಪತ್ತೆ ಹಚ್ಚಿದಾಗ ಆ.9ರಂದು ಮನೆ ಮುಂಭಾಗದಿಂದ ಕಳ್ಳತನವಾಗಿದ್ದ ವಾಹನವು ಪಾಲಂ ವಿಹಾರ್ ನಿವಾಸಿ ವಿನಯ್ ಕುಮಾರ್ ಅವರದ್ದು ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧ ಪಟ್ಟಂತೆ ವಿನಯ್ ಕುಮಾರ್ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ನಪಾಸರ್ ಠಾಣೆ ಪೊಲೀಸರು ಕಳ್ಳನು ಬಿಟ್ಟು ಹೋದ ಕಾರನ್ನು ವಶಕ್ಕೆ ಪಡೆದಿದ್ದು, ಈ ಅಮಾಯಕ ಕಳ್ಳನ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ