ದವಡೆ ಹಲ್ಲು ಉದುರಿಸಿಕೊಂಡು ಹೋಗಬೇಕು… ಗಗನಯಾತ್ರಿಯಾಗಲು ಬೇಕು ದಂತ ತ್ಯಾಗ; ಯಾಕೆ ಗೊತ್ತಾ?

Indian astronaut Shubhanshu Shukla reveals surprising fact: ಹಿಂದೆಲ್ಲಾ ಮಕ್ಕಳು ಪೈಲಟ್ ಆಗಲು ಬಯಸುತ್ತಿದ್ದರು. ಈಗ ಬಹಳಷ್ಟು ಮಕ್ಕಳಿಗೆ ತಾವು ಗಗನಯಾತ್ರಿಗಳಾಗಬೇಕು ಎನ್ನುವ ಅಭಿಲಾಷೆ ಹುಟ್ಟಿಕೊಂಡಿದೆ. ಆದರೆ, ಗಗನಯಾತ್ರಿಯಾಗುವುದು ಅಷ್ಟು ಸುಲಭವಲ್ಲ. ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣಿಸಿ ಬಂದ ಶುಭಾಂಶು ಶುಕ್ಲ ಒಂದು ಅಚ್ಚರಿ ಸಂಗತಿ ಬಿಚ್ಚಿಟ್ಟಿದ್ದಾರೆ. ಗಗನಯಾತ್ರಿಗಳಾಗಬೇಕೆನ್ನುವವರು ಕೆಲ ಹಲ್ಲುಗಳನ್ನು ತ್ಯಾಗ ಮಾಡಬೇಕಾಗಬಹುದಂತೆ.

ದವಡೆ ಹಲ್ಲು ಉದುರಿಸಿಕೊಂಡು ಹೋಗಬೇಕು... ಗಗನಯಾತ್ರಿಯಾಗಲು ಬೇಕು ದಂತ ತ್ಯಾಗ; ಯಾಕೆ ಗೊತ್ತಾ?
ಗಗನಯಾತ್ರಿ

Updated on: Dec 24, 2025 | 10:52 PM

ಮುಂಬೈ, ಡಿಸೆಂಬರ್ 24: ಸುನೀತಾ ವಿಲಿಯಮ್ಸ್, ಕಲ್ಪನಾ ಚಾವ್ಲಾ ಮತ್ತು ಶುಭಾಂಶು ಶುಕ್ಲಾ (Shubhanshu Shukla) ಅವರು ಗಗನಕ್ಕೆ ಹೋಗಿ ಬಂದ ಬಳಿಕ ಕೋಟ್ಯಂತರ ಭಾರತೀಯರಿಗೆ ಗಗನಯಾತ್ರಿಗಳಾಗಬೇಕೆಂಬ ಹಂಬಲ ಉಂಟಾಗಿರಬಹುದು. ಆದರೆ, ಆಸ್ಟ್ರೋನಾಟ್ (Astronaut) ಆಗುವುದು ವಿಮಾನದ ಪೈಲಟ್ ಆಗುವುದಕ್ಕಿಂತ ಬಹಳ ಕಠಿಣದ ಕೆಲಸ. ಬಹಳಷ್ಟು ಶ್ರಮ, ತರಬೇತಿ, ಸಹನೆ, ದೈಹಿಕ ಕ್ಷಮತೆ, ಮಾನಸಿಕ ಕ್ಷಮತೆ ಇವೆಲ್ಲವೂ ಬೇಕು. ಇತ್ತೀಚೆಗಷ್ಟೇ ಗಗನಯಾನ ಮಾಡಿಬಂದ ಭಾರತದ ಶುಭಾಂಶು ಶುಕ್ಲಾ ಅವರು ದಂತತ್ಯಾಗದ ಅಚ್ಚರಿಯ ವಿಚಾರ ಪ್ರಸ್ತಾಪಿಸಿದ್ದಾರೆ.

ಇಂದು ಬುಧವಾರ ಐಐಟಿ ಬಾಂಬೆಯಲ್ಲಿ ಮಾತನಾಡುತ್ತಿದ್ದ ಶುಭಾಂಶು ಶುಕ್ಲಾ, ಗಗನಯಾತ್ರಿಗಳಾಗಬೇಕೆನ್ನುವವರು ಹಲ್ಲುಗಳ ತ್ಯಾಗಕ್ಕೆ ಸಿದ್ಧ ಇರಬೇಕೆಂದು ಹೇಳಿದ್ದಾರೆ. ಸಾಮಾನ್ಯವಾಗಿ ಗಗನಯಾತ್ರಿಗಳ ದವಡೆ ಹಲ್ಲುಗಳನ್ನು ಕಿತ್ತು ಕಳುಹಿಸುತ್ತಾರಂತೆ. ಶುಭಾಂಶು ಶುಕ್ಲ ಅವರ ಎರಡು ದವಡೆ ಹಲ್ಲುಗಳನ್ನು ಕೀಳಲಾಗಿತ್ತಂತೆ.

ಇದನ್ನೂ ಓದಿ: ಮುಸ್ಲಿಂ ದೇಶದಲ್ಲಿ 4500 ವರ್ಷ ಪ್ರಾಚೀನ ಸೂರ್ಯ ದೇವಾಲಯ ಪತ್ತೆ; ಎಲ್ಲಿದೆ ಈ ದೇವಸ್ಥಾನ?

ಗಗನಯಾತ್ರಿಗಳ ಹಲ್ಲು ಕಿತ್ತುಹಾಕುವುದು ಯಾಕೆ?

ಗಗನಯಾತ್ರೆ ಎಂಬುದು ಸಾಧಾರಣ ವಿಷಯವಲ್ಲ. ಭೂಮಿಯಿಂದ ಬಹಳ ದೂರದಲ್ಲಿ, ಗುರುತ್ವಾಕರ್ಷಣೆ ಶಕ್ತಿ ತೀರಾ ನಗಣ್ಯವಾಗಿರುವಂತಹ ಸ್ಪೇಸ್​ಗೆ ಹೋಗಲಾಗುತ್ತದೆ. ಅಲ್ಲಿ ಯಾರಿಗಾದರೂ ಅನಾರೋಗ್ಯ ಸಂಭವಿಸಿದರೆ ಅದಕ್ಕೆ ಚಿಕಿತ್ಸೆ ಹೇಗೆ ಪಡೆದುಕೊಳ್ಳುವುದು ಇತ್ಯಾದಿಯ ತರಬೇತಿ ಕೊಟ್ಟು ಕಳುಹಿಸಲಾಗುತ್ತದೆ. ಆದರೆ, ಹಲ್ಲಿನ ಸಮಸ್ಯೆ ಬಂದರೆ ಅದಕ್ಕೆ ಚಿಕಿತ್ಸೆ ನೀಡುವುದು ಕಷ್ಟವಂತೆ. ಅದರಲ್ಲೂ ಗಗನನೌಕೆಯೊಳಗೆ ದಂತ ಶಸ್ತ್ರಚಿಕಿತ್ಸೆ ಅಸಾಧ್ಯವೇ ಅಂತೆ. ಗಗನಯಾತ್ರಿಗಳಿಗೆ ಸ್ವಲ್ಪ ಹಲ್ಲಿನ ಸಮಸ್ಯೆ ಬಂದರೂ ಅದರು ಗಂಭೀರ ಸ್ವರೂಪಕ್ಕೆ ತಿರುಗುವ ಅಪಾಯ ಇರುತ್ತದೆ.

‘ನಿಮ್ಮ ದಂತ ಆರೋಗ್ಯ ಬಹಳ ಮುಖ್ಯ. ಗಗನಯಾತ್ರಿ ಆಯ್ಕೆ ಮತ್ತು ತರಬೇತಿ ವೇಳೆ ಹಲವು ಅಭ್​ಯರ್ಥಿಗಳು ತಮ್ಮ ಹಲ್ಲು ಕೀಳಿಸಿಕೊಳ್ಳುತ್ತಾರೆ. ಅದರಲ್ಲೂ ದವಡೆ ಹಲ್ಲನ್ನು ಮುಂಜಾಗ್ರತೆಯಾಗಿ ತೆಗೆಯಲಾಗುತ್ತದೆ’ ಎಂಬು ಬಾಂಬೆ ಐಐಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಭಾಂಶು ಶುಕ್ಲಾ ವಿವರಿಸಿದ್ದಾರೆ.

ಇದನ್ನೂ ಓದಿ: ಹಿಂದೂ ದೇವಾಲಯದ ಧ್ವಂಸಕ್ಕೆ ಭಾರತ ಕಳವಳ; ಯುದ್ಧ ನಿಲ್ಲಿಸುವಂತೆ ಥೈಲ್ಯಾಂಡ್, ಕಾಂಬೋಡಿಯಾಕ್ಕೆ ಒತ್ತಾಯ

ಶುಭಾಂಶು ಶುಕ್ಲಾ ಅವರು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಬಂದಿದ್ದರು. ಗಗನನೌಕೆಯ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ್ದರು. ಭಾರತದ ಗಗನಯಾನ ಮಿಷನ್​ನಲ್ಲಿ ಶಾರ್ಟ್​ಲಿಸ್ಟ್ ಆದ ಮೂವರು ಗಗನಯಾತ್ರಿಕರಲ್ಲಿ ಶುಕ್ಲಾ ಕೂಡ ಒಬ್ಬರು. ಪ್ರಶಾಂತ್ ನಾಯರ್ ಮತ್ತು ಅಂಗದ್ ಪ್ರತಾಪ್ ಅವರು ಇತರ ಇನ್ನಿಬ್ಬರು. ತರಬೇತಿ ವೇಳೆ, ನಾಯರ್ ಅವರ ಮೂರು ಹಲ್ಲನ್ನು ಕೀಳಲಾಗಿದೆ. ಅಂಗದ್ ಪ್ರತಾಪ್ ಅವರ ನಾಲ್ಕು ದವಡೆ ಹಲ್ಲುಗಳನ್ನು ತೆಗೆಯಲಾಗಿದೆಯಂತೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ