ನಾನ್ ವೆಜ್ ಪ್ರಿಯರು ಕಬಾಬ್ನ್ನು ಇಷ್ಟಪಡದೆ ಇರಲಾರರು. ಅದೆಷ್ಟೋ ಮಾಂಸಾಹಾರ ಇಷ್ಟಪಡುವವರ ನೆಚ್ಚಿನ ತಿಂಡಿ ಇದು. ಇಂಥ ಕಬಾಬ್ ಈಗ ಬಾಹ್ಯಾಕಾಶ ಯಾತ್ರೆ ಕೈಗೊಂಡಿದ್ದು ಸಿಕ್ಕಾಪಟೆ ಸುದ್ದಿಯಾಗಿದೆ. ಅಂದಹಾಗೇ, ಕಬಾಬ್ ಆಕಾಶಕ್ಕೆ ಹಾರಿದ ವಿಡಿಯೋ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ತಿದೆ. ಕಬಾಬ್ ಆಕಾಶಕ್ಕೆ ಅದರಷ್ಟಕ್ಕೇ ಅದು ಹಾರಿಹೋಯಿತು ಎಂದೆಲ್ಲ ತಿಳಿದುಕೊಳ್ಳಬೇಡಿ, ಟರ್ಕಿಯ ರೆಸ್ಟೋರೆಂಟ್ವೊಂದು ಕಬಾಬ್ನ್ನು ಆಕಾಶಕ್ಕೆ ಕಳಿಸಿದೆ. ಅದಕ್ಕೊಂದು ಕಾರಣವೂ ಇದೆ.
ನೀವು ಯೂರಿ ಅಲೆಕ್ಸಾ ವಿಚ್ ಗಗಾರಿನ್ ಹೆಸರು ಕೇಳಬಹುದು. ಇವರು ರಷ್ಯಾದ ಒಬ್ಬ ಪೈಲಟ್. ಬಾಹ್ಯಾಕಾಶ ಪ್ರವಾಸ (ಅಂತರಿಕ್ಷಯಾನ) ಮಾಡಿದ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1961ರ ಏಪ್ರಿಲ್ 12ರಂದು ಇವರು ಅಂತರಿಕ್ಷ ಪ್ರವಾಸಕ್ಕೆ ತೆರಳಿದರು. ಹೀಗೆ ಯೂರಿ ಅಲೆಕ್ಸಾ ಬಾಹ್ಯಾಕಾಶಕ್ಕೆ ಪ್ರವಾಸ ನಡೆಸಿ 61ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದನ್ನು ಟರ್ಕಿ ರೆಸ್ಟೋರೆಂಟ್ ಹೀಗೆ ಆಚರಿಸಿದೆ. ಯೂರಿ ಅಲೆಕ್ಸಾ ವಿಚ್ ಗಗಾರಿನ್ ಅವರಿಗೆ ತುಂಬ ಇಷ್ಟವಾಗಿದ್ದ ಕಬಾಬ್ನ್ನು ಒಂದು ಟ್ರೇನಲ್ಲಿ ಇಟ್ಟು, ಅದಕ್ಕೊಂದು ಕ್ಯಾಮರಾ ಅಳವಡಿಸಿ, ಜತೆಗೊಂದು ಟರ್ಕಿಶ್ ಧ್ವಜವನ್ನೂ ಇಟ್ಟು ಬಾಹ್ಯಾಕಾಶಕ್ಕೆ ಹಾರಿಸಿದೆ.
ಕಬಾಬ್ ಸುಮಾರು 38 ಕಿಮೀ ಎತ್ತರದವರೆಗೆ ಹಾರಿದ ಬಳಿಕ ನಿಧಾನವಾಗಿ ಕೆಳಗೆ ಇಳಿಯಲು ಶುರುವಾಯಿತು ಮತ್ತು ಮೆಡಿಟರೇನಿಯನ್ ಸಾಗರಕ್ಕೆ ಬಿದ್ದಿದೆ. ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿದ ರೆಸ್ಟೋರೆಂಟ್, ನಾವು ಪೈಪ್ ಕಬಾಬ್ನ್ನು ಬಾಹ್ಯಾಕಾಶಕ್ಕೆ ಕಳಿಸಿದ್ದೆವು. ಅದು ಹಾರಲು ಅಳವಡಿಸಿದ್ದ ಬಲೂನ್ ಸುಮಾರು 40 ಕಿಮೀ ಎತ್ತರದಲ್ಲಿ ಒಡೆಯಿತು. ಬಳಿಕ ಕಬಾಬ್ ಹಟೇ ಡೋರ್ಟಿಯೋಲ್ ಸಾಗರದಲ್ಲಿ ಬಿತ್ತು. ಕಬಾಬ್ನಲ್ಲಿ ನಾವು ಟ್ರ್ಯಾಕಿಂಗ್ ಡಿವೈಸ್ ಅಳವಿಸಿದ್ದರಿಂದ, ಅದು ಎಲ್ಲಿ ಬಿತ್ತು ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಹೀಗೆ ಕಬಾಬ್ನ್ನು (ತಿಂಡಿಯನ್ನು) ಬಾಹ್ಯಾಕಾಶಕ್ಕೆ ಹಾರಿಸಿದ್ದು ಜಗತ್ತಿನಲ್ಲೇ ಇದೇ ಮೊದಲು ಎಂಬುದನ್ನು ಕೇಳಿ ತುಂಬ ಖುಷಿಯಾಯಿತು ಎಂದು ರೆಸ್ಟೋರೆಂಟ್ ಹೇಳಿದೆ.
ನಾವು ಕಳಿಸಿದ ಕಬಾಬ್ ಸಾಗರದಲ್ಲಿ ಬಿದ್ದಿರಬಹುದು. ಆದರೆ ಅದನ್ನು ಬಾಹ್ಯಾಕಾಶಕ್ಕೆ ಕಳಿಸಿದ ಸುದ್ದಿ ಟರ್ಕಿಯನ್ನು ದಾಟಿ ಹಲವು ದೇಶಗಳಿಗೆ ತಲುಪಿದೆ. ವಿದೇಶಿ ಸುದ್ದಿ ವಾಹಿನಗಳೂ ಸುದ್ದಿ ಮಾಡಿವೆ. ಜಗತ್ತಿನ ಅತ್ಯಂತ ದೊಡ್ಡದೊಡ್ಡ ಸುದ್ದಿ ಮಾಧ್ಯಮಗಳಲ್ಲೂ ವರದಿಯಾಗಿದೆ. ಇದು ಟರ್ಕಿಗೆ ಹೆಮ್ಮೆ ತರುವ ವಿಚಾರ. ಹಾಗೇ, ನಮ್ಮ ರೆಸ್ಟೋರೆಂಟ್ ಕಬಾಬ್ಗೆ ಪ್ರಮೋಶನ್ ಕೂಡ ಸಿಕ್ಕಂತಾಯಿತು. ನಮ್ಮ ಯೋಜನೆ ಯಶಸ್ವಿಯಾಯಿತು ಎಂದೂ ಹೇಳಿಕೊಂಡಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ; ಬೆಂಗಳೂರಿನಲ್ಲಿ ಮತ್ತೆ ಮುಂದುವರೆಯಲಿದೆ ವರುಣನ ಆರ್ಭಟ