ಹಮೀರ್‌ಪುರ: ಗುಟ್ಕಾ ಸೇವನೆಯ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳ ಪ್ರಾರಂಭವಾಗಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಕರ್ವಾ ಚೌತ್ನಂದು ದಿನವಿಡೀ ಉಪವಾಸದಲ್ಲಿದ್ದ ಮಹಿಳೆ ಸಂಜೆಯ ವೇಳೆ ಪತ್ನಿಗೆ ಪೂಜೆ ಮಾಡಲು ಬಂದಿದ್ದಾಳೆ. ಈ ವೇಳೆಯೂ ಆತ ಗುಟ್ಕಾ ಜಗಿಯುತ್ತಿದನ್ನು ಕಂಡು ಬೇಸರಗೊಂಡಿದ್ದಾಳೆ. ಜೊತೆಗೆ ಈ ವಿಚಾರವಾಗಿ ಜಗಳ ನಡೆದಿದ್ದು, ಬಳಿಕ ಪೂಜಾ ವಿಧಿವಿಧಾನ ಮುಗಿಸಿ ರಾತ್ರಿ 12 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಭಾನುವಾರ (ಅಕ್ಟೋಬರ್ 20) ರಾತ್ರಿ ಹಮೀರ್‌ಪುರದ ಜಲಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಲಾಲ್‌ಪುರ ಗ್ರಾಮದ ಸರಿಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸಾರಿಕಾ(24) ಎಂದು ಗುರುತಿಸಲಾಗಿದ್ದು, ಈಕೆ ಜಲಾಲ್‌ಪುರ ನಿವಾಸಿಯಾದ ಸುಲಭ್ ನಾಮದೇವ್‌ನನ್ನು 2021 ರಲ್ಲಿ ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಪತಿಯ ಗುಟ್ಕಾ ಜಗಿಯುವ ಚಟಕ್ಕೆ ಬೇಸತ್ತು ಸಾಕಷ್ಟು ಸಲ ಆತನೊಂದಿಗೆ ಜಗಳವಾಡಿದ್ದಳು.
ಇದನ್ನೂ ಓದಿ: ಆನ್ಲೈನ್ನಲ್ಲಿ ಪಾಕಿಸ್ತಾನದ ಯುವತಿಯನ್ನು ಮದುವೆಯಾದ ಬಿಜೆಪಿ ಕಾರ್ಪೊರೇಟರ್ ಪುತ್ರ
ಇತ್ತೀಚಿಗಷ್ಟೇ ಕರ್ವಾ ಚೌತ್ನಂದು ಮತ್ತೆ ಜಗಳ ನಡೆದಿದೆ. ಬಳಿಕ ಪತಿ ಪತ್ನಿ ಇಬ್ಬರೂ ರಾತ್ರಿಯ ಊಟವನ್ನೂ ಮಾಡದೆ ಬೇರೆ ಬೇರೆ ಕೋಣೆಗಳಲ್ಲಿ ಮಲಗಿದ್ದರು. ಸೋಮವಾರ ಬೆಳಗ್ಗೆ ಪತಿ ಎದ್ದು ನೋಡಿದಾಗ ಪತ್ನಿ ಮಲಗುವ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ