ಸಣ್ಣ ವಯಸ್ಸಿನಲ್ಲಿರುವಾಗ ಅಣ್ಣ ಮತ್ತು ತಂಗಿ ಹೆಚ್ಚಾಗಿ ಜಗಳ ಆಡುತ್ತಾ ಇರುತ್ತಾರೆ. ಬೆಳೆಯುತ್ತಾ ಅವರ ಜಗಳ ಕಮ್ಮಿಯಾಗಿ ಅವರ ಪ್ರೀತಿಯ ಬಂಧ ಹೆಚ್ಚಾಗುತ್ತದೆ. ಈ ಪುಟ್ಟ ಅಣ್ಣ ತಂಗಿಯರ ಜಗಳ ನೋಡೋಕೆ ಒಂಥರಾ ಚೆನ್ನಾಗಿ ಇರುತ್ತೆ. ಜಗಳ ಆಡೋದು ಅಮ್ಮ ಅಪ್ಪನ ಬಳಿ ಚಾಡಿ ಹೇಳಿ ಬೈಗುಳ ತಿನ್ನೊದು ಅಥವಾ ಜಗಳ ಅತಿರೇಕಕ್ಕೆ ಹೋದಾಗ ಪೆಟ್ಟು ತಿನ್ನೋದು ಕೂಡಾ ಇರುತ್ತದೆ. ಎಷ್ಟೇ ಜಗಳವಾಡಿದರೂ ಅಣ್ಣ ಮತ್ತು ತಂಗಿಯ ನಡುವೆ ನಿಷ್ಕಲ್ಮಶವಾದ ಪ್ರೀತಿಯ ಭಾಂದವ್ಯ ಸದಾ ಕಾಲಕ್ಕೂ ಇರುತ್ತೆ. ಅದೇ ರೀತಿ ಅಣ್ಣ ತಂಗಿಯ ಕೋಳಿ ಜಗಳವೂ ಇರುತ್ತದೆ. ಪ್ರತಿ ಮನೆಯಲ್ಲೂ ಅಣ್ಣನಿಗಿಂತ ತಂಗಿಯೇ ಸ್ವಲ್ಪ ಚೂಟಿ ಇರುತ್ತಾಳೆ. ಅಣ್ಣನಿಗೆ ಬೈಯೋದನ್ನೆಲ್ಲಾ ಬೈದು ಕೊನೆಗೆ ತಾನೇ ಅಳುತ್ತಾ ಕೂರುತ್ತಾಳೆ. ಯಾಕೆಂದರೆ ಅಮ್ಮ ಮತ್ತು ಅಪ್ಪನ ಕೈಯಿಂದ ಅಣ್ಣನಿಗೆ ಬೈಗುಳ ತಿನಿಸುವ ಸಲುವಾಗಿ. ಇದೇ ರೀತಿ ಇಲ್ಲೊಂದು ಅಣ್ಣ ಮತ್ತು ತಂಗಿ ಜಗಳವಾಡುವ ಮುದ್ದಾಗ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಸೋಫಾದ ಮೇಲೆ ಕುಳಿತಿದ್ದ ಪುಟ್ಟ ತಂಗಿ ಅಣ್ಣನಿಗೆ ಕೋಪದಲ್ಲಿ ಮುದ್ದು ಮುದ್ದಾಗಿ ಬೈಯುತ್ತಾ ನಿಂತಿರುತ್ತಾಳೆ. ಅತ್ತ ಕಡೆಯಿಂದ ಅಣ್ಣ ಕೂಡಾ ಈಕೆಗೆ ಎದುರು ಮಾತನಾಡುತ್ತಾನೆ. ಇದರಿಂದ ಕೋಪಗೊಂಡ ಪುಟ್ಟ ತಂಗಿ ತನ್ನ ಕೈಯಲ್ಲಿದ ಬಟ್ಟೆಯನ್ನು ಹಿಡಿದುಕೊಂಡು ಅಣ್ಣನಿಗೆ ಪೆಟ್ಟು ಕೊಡಲು ಹೋಗುತ್ತಾಳೆ. ಈಕೆ ಹೋದಾಗ ಅಣ್ಣನೇ ಇವಳಿಗೆ ಪೆಟ್ಟು ಕೊಡಲು ಬಂದಾಗ ಜೋರಾಗಿ ಅಳುತ್ತಾ ವಾಪಾಸ್ ಸೋಫಾದ ಬಳಿ ಓಡಿ ಬರುತ್ತಾಳೆ. ಹೀಗೆ ಸ್ವಲ್ಪ ಸೆಕೆಂಡುಗಳ ಕಾಲ ಅಳುತ್ತಾ ಕುಳಿತಿದ್ದ ಈಕೆ ಮತ್ತೊಮ್ಮೆ ಅಣ್ಣನನ್ನು ಅಟ್ಟಾಡಿಸಿಕೊಂಡು ಹೋಗುತ್ತಾಳೆ.
ಇದನ್ನೂ ಓದಿ: Video Viral : ಅಣ್ಣ-ತಂಗಿ ಮಧ್ಯೆ ಜಗಳ, ಅಮ್ಮ ಬರದಿದ್ರೆ ಮಹಾಯುದ್ಧ ನಡೆಯುತ್ತಿತ್ತು?
ನಿಮ್ಮ ಮನೆಯಲ್ಲೂ ಈ ರೀತಿಯ ಅಣ್ಣ ತಂಗಿ ಜಗಳ ಇರುತ್ತಾ ಎಂದು ಕ್ಯಾಪ್ಷನ್ ಹಾಕಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇನ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಅಣ್ಣ ತಂಗಿಯ ಜಗಳದ ಕ್ಯೂಟ್ ವೀಡಿಯೋ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಹಾಗೂ ತಮಗೆ ಸ್ವಂತ ಅಣ್ಣ ಮತ್ತು ತಂಗಿ ಇರದ ಕೆಲವೊಬ್ಬರು ನಮಗೆ ಈ ಭಾಗ್ಯ ಇಲ್ಲ ಎಂದು ತಮ್ಮ ಬೇಸರವನ್ನು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ.