ಒಂದು ಹೊತ್ತಿನ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಊಟ ಮಾಡಲು ವ್ಯಕ್ತಿಯೊಬ್ಬರು ರೆಸ್ಟೋರೆಂಟ್‌ಗೆ ಹೋಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಅವರ ಕಣ್ಣು ಬೇರೆ ಪ್ರದೇಶವೊಂದಕ್ಕೆ ಬಿದ್ದಿದೆ. ಅವರು ಆ ಪ್ರದೇಶದ ಮೇಲೆ ಕಣ್ಣು ಹಾಯಿಸಲೂ ಒಂದು ಕಾರಣ ಇದೆ. ಅದೇನೆಂದರೆ ಆ ಜಾಗದಲ್ಲಿ ಜಗತ್ತಿನ ಅತಿದೊಡ್ಡ ಪ್ರಾಣಿಯೂ ಆಗಿದ್ದ ಸದ್ಯ ನಶಿಸಿ ಹೋಗಿದೆ ಎಂದು ಭಾವಿಸಲಾಗಿರುವ ಸಂತತಿಯ ಹೆಜ್ಜೆ ಗುರುತು. ಆ ಹೆಜ್ಜೆ ಗುರುತು ಬೇರೆ ಯಾವುದೇ ಪ್ರಾಣಿಯದ್ದು ಅಲ್ಲ, ನೂರು ಮಿಲಿಯನ್ ವರ್ಷಗಳ ಹಿಂದೆ ಭೂಮಿ ಮೇಲೆ ಬದುಕಿದ್ದ ದೈತ್ಯ ಡೈನೋಸಾರ್ (Dinosaur) ಜೀವಿಯದ್ದು.
ಹೌದು, ಚೀನಾದ ಹೊಂಗ್ಟಾವೊ ಎಂಬ ವ್ಯಕ್ತಿ ಇತ್ತೀಚೆಗೆ ಸಿಚುವಾನ್ ಪ್ರಾಂತ್ಯದ ಲೆಶಾನ್‌ನಲ್ಲಿರುವ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ಈ ರೆಸ್ಟೋರೆಂಟ್ನ ಪ್ರದೇಶದಲ್ಲಿ ಹೊಂಡಗಳು ಬಿದ್ದಿರುವ ಒಂದು ಪ್ರದೇಶವನ್ನು ಹೊಂಗ್ಟಾವೊ ನೋಡಿದ್ದಾರೆ. ಆ ಪ್ರದೇಶದಲ್ಲಿ ಇದ್ದ ಹೊಂಡಗಳು ಸಾಮಾನ್ಯವಾಗಿರಲಿಲ್ಲ ಬದಲಾಗಿ ವಿಶೇಷವಾದ ಹೊಂಡಗಳಾಗಿದ್ದವು. ಈ ಹೊಂಡಗಳ ಮೇಲೆ ಸರಿಯಾಗಿ ಕಣ್ಣು ಹಾಯಿಸಿದ ಹೊಂಗ್ಟಾವೊ, ಅದು ಡೈನೋಸಾರ್ ಹೆಜ್ಜೆ ಗುರುತು ಎಂದು ಪತ್ತೆಹಚ್ಚಿದ್ದಾರೆ.
ಡೈನೋಸಾರ್ ಹೆಜ್ಜೆ ಗುರುತು ಪತ್ತೆಯಾದ ಬಗ್ಗೆ ಹೊಂಗ್ಟಾವೊ ಅವರು ಸಂಶೋಧಕರಿಗೆ ಮಾಹಿತಿ ನೀಡುತ್ತಾರೆ. ಅದರಂತೆ ಚೀನಾ ಯೂನಿವರ್ಸಿಟಿ ಆಫ್ ಜಿಯೋಸೈನ್ಸ್ನ ಪ್ರಾಗ್ಜೀವಶಾಸ್ತ್ರಜ್ಞರಾದ ಅಸೋಸಿಯೇಟ್ ಪ್ರೊಫೆಸರ್ ಡಾ. ಲಿಡಾ ಕ್ಸಿಂಗ್ ನೇತೃತ್ವದ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ತಂಡವು 3D ಪ್ರಿಂಟರ್ ಬಳಸಿ ಪತ್ತೆಹಚ್ಚಿದಾಗ ಬ್ರಾಂಟೊಸಾರಸ್ ಸಂತತಿಯ ಎರಡು ಡೈನೋಸಾರ್ ಹೆಜ್ಜೆಗುರುತು ಇದಾಗಿದೆ ಎಂದು ತಿಳಿದುಬಂದಿದೆ. ಇದು ಅತಿ ದೊಡ್ಡ ಕ್ವಾಡ್ರುಪೆಡಲ್ ಸೌರೋಪಾಡ್ ಡೈನೋಸಾರ್ ಜಾತಿಯೆಂದು ತಿಳಿದುಬಂದಿದೆ. ಈ ಡೈನೋಸಾರ್‌ಗಳು 145 ರಿಂದ 66 ಮಿಲಿಯನ್ ವರ್ಷಗಳ ಹಿಂದೆ ಕ್ರಿಟೇಶಿಯಸ್ ಅವಧಿಯಲ್ಲಿ ಭೂಮಿಯ ಮೇಲೆ ಸಂಚರಿಸಿದವು ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಡೈನೋಸಾರ್ ಅನ್ನು ನಾವೆಲ್ಲರು ಸಿನಿಮಾಗಳಲ್ಲಿ ಕಂಡಿದ್ದೇವೆ ಅಷ್ಟೆ. ಅದರ ಗಾತ್ರ ಎಷ್ಟಿದೆ ಎಂದು ಕೇಳಿದರೆ ಒಮ್ಮೆ ನೀವೆಲ್ಲರೂ ದಂಗಾಗುತ್ತೀರ. ಈ ಪ್ರಾಣಿ 122 ಅಡಿ ಉದ್ದ ಮತ್ತು 70 ಟನ್ ತೂಕವಿರುತ್ತದೆ ಎಂದು ಅಂದಾಜಿಸಲಾಗಿದೆ. ಅಂದರೆ ಮೂರು ಬಸ್ಗಳ ಉದ್ದ ಮತ್ತು 10 ಆಫ್ರಿಕನ್ ಆನೆಗಳ ತೂಕದಷ್ಟು ಒಂದು ಡೈನೋಸಾರ್ ಇರುತ್ತದೆ ಎಂದು ಅಂದಾಜಿಸಲಾಗಿದೆ.
Published On - 9:59 am, Sun, 24 July 22