ಪುರಾತನ ಕಟ್ಟಡ, ರಚನೆಗಳನ್ನು ಉತ್ಖನನ ಮಾಡುವಾಗ ಚಿನ್ನ, ಬೆಳ್ಳಿ, ಪುರಾತನ ನಾಣ್ಯಗಳು ಸಿಗುವುದನ್ನು ನಾವು ಆಗಾಗ ಸುದ್ದಿಯಲ್ಲಿ ನೋಡುತ್ತಿರುತ್ತೇವೆ. ಇಲ್ಲಿ ಮನೆ ನಿರ್ಮಾಣಕ್ಕೆ ಅಗೆಯುವಾಗ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ನಿಧಿ, ಪುರಾತನ ನಾಣ್ಯಗಳು ಪತ್ತೆಯಾಗಿವೆ. ಆದರೆ ಈ ಮಾಹಿತಿಯನ್ನು ಗೌಪ್ಯವಾಗಿರಿಸಿಕೊಂಡ ಕಾರ್ಮಿಕರು ಯಾವುದೇ ಗೊಂದಲ ಗದ್ದಲ ಮಾಡದೆ ತಮ್ಮೊಳಗೆ ಸರಿಸಮಾನವಾಗಿ ಹಂಚಿಕೊಂಡಿದ್ದಾರೆ. ಅಷ್ಟರಲ್ಲೇ ಆ ಕಾರ್ಮಿಕರಿಗೆ ಕಾದಿತ್ತು ಆಘಾತದೊಂದಿಗೆ ಸಂಕಷ್ಟ. ಏನದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮಧ್ಯಪ್ರದೇಶದ ಧಾರ್‌ನಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಾಣ ಮುಂದಾಗಿದ್ದರು. ಅದಕ್ಕಾಗಿ ಕೂಲಿಕಾರರನ್ನು ಏರ್ಪಡಿಸಿದರು. ಆದರೆ, ಪೌಂಡೇಶನ್ಗಾಗಿ ಸ್ಥಳವನ್ನು ಅಗೆಯುತ್ತಿದ್ದಾಗ ಕಾರ್ಮಿಕರಿಗೆ ಚಿನ್ನದ ನಿಧಿ ಪತ್ತೆಯಾಗಿದೆ. ಅದರಲ್ಲಿ ಅಪಾರ ಪ್ರಮಾಣದ ಚಿನ್ನ ಮತ್ತು ಪುರಾತನ ನಾಣ್ಯಗಳು ಇದ್ದುದರಿಂದ ಅವರ ನಡುವಿನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಸಿಕ್ಕ ಚಿನ್ನ, ನಾಣ್ಯಗಳನ್ನು ಯಾವುದೇ ತಕರಾರು ಇಲ್ಲದೇ ಎಲ್ಲ ಕೆಲಸಗಾರರೂ ಸಮಾನವಾಗಿ ಹಂಚಿಕೊಂಡರು. ಆದರೆ ನಿಧಿ ಪತ್ತೆಯಾದ ಬಗ್ಗೆ ಮಾಹಿತಿ ಪೊಲೀಸರಿಗೆ ತಲುಪಿದೆ. ಅದರಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಎಂಟು ಮಂದಿ ಕೆಲಸಗಾರರ ಸಹಿತ ನಿಧಿಯ ಒಂದು ಭಾಗವನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದೆ.
ಮನೆ ನವೀಕರಣ ಕೆಲಸ ಮಾಡುತ್ತಿದ್ದ ಎಂಟು ಮಂದಿ ಕಾರ್ಮಿಕರನ್ನು ಬಂಧಿಸಿರುವ ಪೊಲೀಸರು ಆರು ಲಕ್ಷ ಮೌಲ್ಯದ ಚಿನ್ನ, ಕಬ್ಬಿಣದಂತಹ ಲೋಹ ಸೇರಿದಂತೆ ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ನಿಧಿಯನ್ನು ಹಂಚಿಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೊತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ಸಮೀರ್ ಪಾಟಿದಾರ್ ತಿಳಿಸಿದ್ದಾರೆ. ನಿಧಿ ಪತ್ತೆಯಾದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪೊಲೀಸರು ಶೀಘ್ರದಲ್ಲೇ ಬಹಿರಂಗಪಡಿಸುವ ಸಾಧ್ಯತೆಯಿದೆ.
ಮಾಹಿತಿ ಪ್ರಕಾರ, ನಲ್ಚಾ ದರ್ವಾಜ ಬಳಿಯ ಚಿಟ್ನಿಸ್ ಚೌಕ್‌ನಲ್ಲಿರುವ ಶಿವನಾರಾಯಣ ರಾಠೋಡ್ ಅವರ ಮನೆಯನ್ನು ಎರಡು ಭಾಗಗಳಲ್ಲಿ ನಿರ್ಮಿಸಲಾಗಿದೆ, ಕುಟುಂಬವು ಒಂದು ಭಾಗದಲ್ಲಿ ವಾಸಿಸುತ್ತಿದೆ. ಇನ್ನೊಂದು ಭಾಗ ಪಾಳು ಬಿದ್ದಿದೆ. ಒಂದು ತಿಂಗಳಿನಿಂದ ಈ ಭಾಗವನ್ನು ಪುನರ್ ನಿರ್ಮಾಣಕ್ಕಾಗಿ ಕೆಡವಲಾಗುತ್ತಿದೆ. ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಗೋಡೆಯೊಂದನ್ನು ಕೆಡವಿ ಹಾಕುತ್ತಿದ್ದಾಗ ಹಳೆಯ ಚಿನ್ನದ ನಾಣ್ಯಗಳು ಮತ್ತು ಚಿನ್ನದ ಆಭರಣಗಳು ಕಂಡುಬಂದಿವೆ. ಇದನ್ನು ಯಾರಿಗೂ ತಿಳಿಯದಂತೆ ತಮ್ಮ ತಮ್ಮಲ್ಲೇ ಹಂಚಿಕೊಂಡರು. ಆದರೆ, ಕೆಲ ಹಳೆಯ ಆಭರಣಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆ ಪೊಲೀಸರು ಕಾರ್ಯಪ್ರವೃತ್ತರಾದರು.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ