ಇಂದು ಇಡೀ ವಿಶ್ವದಾದ್ಯಂತ ಪೋಷಕರ ದಿನವನ್ನು ಆಚರಿಸಲಾಗುತ್ತಿದೆ. ಈ ಮಹತ್ವದ ದಿನದಂದು ಪೋಷಕರ ಪ್ರೀತಿಗೆ ಹಾಗೂ ಕಾಳಜಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ನೂರಾರು ಪ್ರೇಕ್ಷಕರು ಸೇರಿಕೊಂಡಿದ್ದಾಗ ವೇದಿಕೆಯಲ್ಲಿ ಡಾನ್ಸ್ ಮಾಡುತ್ತಿದ್ದ ಯುವತಿ ಎಡವಿ ಬಿದ್ದಿದ್ದಾಳೆ. ಈ ವೇಳೆ ವೇದಿಕೆಯ ಬಳಿ ಬಂದ ಆಕೆಯ ತಂದೆ ಯಾವ ರೀತಿ ಕಾಳಜಿಯನ್ನು ವಹಿಸುತ್ತಾರೆ ಎಂಬುದನ್ನು ವೈರಲ್ ವಿಡಿಯೋ (Viral Video) ತೋರಿಸುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಯಾವುದೇ ಕ್ಷಣದಲ್ಲೂ ಯಾವ ವಯಸ್ಸಿನಲ್ಲೂ ತೋರಿಸಬೇಕಾದ ಕಾಳಜಿಯನ್ನು ತೋರಿಸುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ವೈರಲ್ ವಿಡಿಯೋದಲ್ಲಿ ಇರುವಂತೆ, ಇಬ್ಬರು ಯುವತಿಯರು ವೇದಿಕೆಯಲ್ಲಿ ಡಾನ್ಸ್ ಮಾಡುತ್ತಿದ್ದಾಗ ಒಬ್ಬಳು ಎಡವಿ ಬೀಳುತ್ತಾಳೆ. ಈ ವೇಳೆ ವೇದಿಕೆಯಲ್ಲಿದ್ದ ಇತರರು ಆಕೆಯ ನೆರವಿಗೆ ದಾವಿಸಿ ಮೇಲೆಬ್ಬಿಸುತ್ತಾರೆ. ಕೂಡಲೇ ಆಕೆ ಡಾನ್ಸ್ ಮಾಡುವುದನ್ನು ಮುಂದುವರಿಸುತ್ತಾಳೆ. ಅದಾಗ್ಯೂ ಆಕೆಯ ತಂದೆ ವೇದಿಕೆ ಮೇಲೆ ಬಂದು ಅವಳು ಮತ್ತೊಮ್ಮೆ ಬೀಳದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಆಕೆಯ ಹಿಂದೆ ನಿಲ್ಲುತ್ತಾರೆ ಮತ್ತು ಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಇದನ್ನೇ ವೈರಲ್ ವಿಡಿಯೋದಲ್ಲಿ ಹೆಚ್ಚು ಹೈಲೈಟ್ ಮಾಡಲಾಗಿದೆ.
ಈ ವಿಡಿಯೋವನ್ನು ಅನಿಶಾ ನಿಶಾ ಎಂಬ ಮಾಡೆಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ತಂದೆ ನನ್ನ ಮೊದಲ ಪ್ರೀತಿ ಎಂದು ಶೀರ್ಷಿಕೆ ಬರೆದಿದ್ದಾರೆ. ಅನಿಶಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 33,000 ಅನುಯಾಯಿಗಳನ್ನು ಹೊಂದಿದ್ದು, ನಿರ್ದಿಷ್ಟ ವಿಡಿಯೋಗಳು ಹೆಚ್ಚಿನ ಲೈಕ್ಗಳನ್ನು ಹಾಗೂ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತವೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋ 4.51 ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ.
ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, “ಇದು ತುಂಬಾ ಸುಂದರವಾಗಿದೆ…ಇದನ್ನು ನೋಡುವಾಗ ನಾನು ಭಾವುಕನಾದೆ” ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ಪ್ರೀತಿ ತುಂಬಿದೆ. ನಿಜಕ್ಕೂ ತಂದೆಯಂದಿರು ಹಾಗೇ” ಎಂದು ಹೇಳಿದ್ದಾರೆ.